More

    ಪ್ರೀತಿ, ಅಂತಃಕರಣ ಇದ್ದಲ್ಲಿ ಜನಸ್ನೇಹಿ; ಡಾ. ಗುರುರಾಜ ಕರ್ಜಗಿ

    ಶಿವಮೊಗ್ಗ: ಅಧಿಕಾರಿಗಳಿಗೆ ಜನರ ಬಗ್ಗೆ ಪ್ರೀತಿ ಮತ್ತು ಅಂತಃಕರಣ ಇದ್ದರಷ್ಟೇ ಜನಸ್ನೇಹಿ ಆಡಳಿತ ನೀಡಲು ಸಾಧ್ಯ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಹೇಳಿದರು.
    ಎನ್‌ಇಎಸ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಸಮ್ಮೇಳನದಲ್ಲಿ ಪ್ರಜಾಸ್ನೇಹಿ ಆಡಳಿತ ಕುರಿತು ಮಾತನಾಡಿದ ಅವರು, ಸರ್ಕಾರಿ ಕೆಲಸ ದೇವರ ಕೆಲಸ ಎಂದುಕೊಂಡು ಮಾಡಬೇಕು. ಕಡತ ಸಮರ್ಪಕವಾಗಿ ವಿಲೇ ಮಾಡುವುದನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ಜನಸ್ನೇಹಿ, ಪ್ರಜಾಸ್ನೇಹಿ ಆಡಳಿತ ಜಾರಿಗೆ ತರಲು ಸಾಧ್ಯವಿದೆ ಎಂದರು.
    ಒಂದು ಕಡತದ ಹಿಂದೆ ಹಲವರ ಬದುಕೇ ಇರುತ್ತದೆ. ಸರ್ಕಾರಿ ಅಧಿಕಾರಿಗಳ ಟೇಬಲ್ ಎದುರು ಜನ ನಿಂತಿದ್ದಾರೆ ಎಂದಾದರೆ ಅಲ್ಲಿ ಹೆಚ್ಚು ಕಡತಗಳಿವೆ ಎಂದರ್ಥ. ಒಂದು ಕಡತವನ್ನು ಕಾಗದ ಎಂದುಕೊಂಡರೆ ಆತ ಎಂದಿಗೂ ಉತ್ತಮ ಅಧಿಕಾರಿ ಆಗಲಾರ. ಸರ್ಕಾರಿ ಅಧಿಕಾರಿಗಳು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಮಾದರಿ. ಅವರು ರಾಷ್ಟ್ರಪತಿ ಆಗಿದ್ದ ವೇಳೆ ತಮಗೆ ನೀಡಲಾದ ಎಲ್ಲ ಕಾಣಿಕೆಗಳನ್ನೂ ಮ್ಯೂಸಿಯಂಗೆ ಕಳುಹಿಸುತ್ತಿದ್ದರು. ದೇಶದ ಪ್ರಥಮ ಪ್ರಜೆ ಹುದ್ದೆಗೆ ಬರುವಾಗ ತಮ್ಮ ಬಟ್ಟೆಗಳ ಎರಡು ಸೂಟ್‌ಕೇಸ್ ತಂದಿದ್ದರು. ಹುದ್ದೆಯಿಂದ ನಿರ್ಗಮಿಸುವಾಗಲೂ ಅದೇ ಸೂಟ್‌ಕೇಸ್‌ನೊಂದಿಗೆ ತೆರಳಿದ್ದರು. ಇದೊಂದು ಅತ್ಯುತ್ತಮ ಮಾದರಿ ಎಂದು ಬಣ್ಣಿಸಿದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ನೌಕರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಹಿಂದೆಲ್ಲ ಸೌಲಭ್ಯ ಪಡೆಯಲು ಧರಣಿ, ಹೋರಾಟ ಮಾಡಬೇಕಿತ್ತು. ಈಗ ಅಂತಹ ಸನ್ನಿವೇಶ ಇಲ್ಲ. ಮುಂದಿನ ತಿಂಗಳು ನೌಕರರ ಎಲ್ಲ ಕಾಯಿಲೆಗಳಿಗೆ ನಗದು ರಹಿತ ಚಿಕಿತ್ಸೆ ಘೋಷಣೆ ಆಗಲಿದೆ. ಒಪಿಎಸ್‌ಗಾಗಿ ಕೂಡ ಹೋರಾಟ ನಡೆಯಲಿದೆ ಎಂದರು.
    ಶಾಸಕ ಕೆ.ಎಸ್.ಈಶ್ವರಪ್ಪ ಸಮ್ಮೇಳನ ಮತ್ತು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ನೌಕರರ ಫ್ಯಾಮಿಲಿ ಮಾರ್ಟ್ ಉದ್ಘಾಟಿಸಿದರು. ಶಾಸಕ ಕೆ.ಬಿ.ಅಶೋಕ್ ನಾಯ್ಕ, ಎಂಎಲ್‌ಸಿ ಆಯನೂರು ಮಂಜುನಾಥ ಎಸ್.ಎಲ್.ಬೋಜೇಗೌಡ, ಪದವೀಧರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್, ಶ್ರೀ ಬಸವೇಶ್ವರ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಸಿದ್ದಬಸಪ್ಪ, ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts