More

    ಹಿಂದುಪರ ಸಂಘಟನೆಯೊಂದಿಗೆ ಶೀಘ್ರವೇ ಶಿವಮೊಗ್ಗ ಚಲೋ ಚಳವಳಿ

    ಶಿವಮೊಗ್ಗ: ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ಶಿವಮೊಗ್ಗ ಪೊಲೀಸರು ಒಂದು ತಿಂಗಳು ನಗರ ಪ್ರವೇಶಿಸದಂತೆ ನಿರ್ಬಂಧಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದ ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ಶೀಘ್ರವೇ ಹಿಂದುಪರ ಸಂಘಟನೆಗಳೊಂದಿಗೆ ಶಿವಮೊಗ್ಗ ಚಲೋ ಚಳವಳಿ ಹಮ್ಮಿಕೊಳ್ಳಲಾಗುವುದಾಗಿ ತಿಳಿಸಿದರು.

    ಇತ್ತೀಚೆಗೆ ರಾಗಿಗುಡ್ಡದಲ್ಲಿ ನಡೆದ ಹಿಂದುಗಳ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮೋದ್ ಮುತಾಲಿಕ್ ಅವರು ಬುಧವಾರ ರಾಗಿಗುಡ್ಡಕ್ಕೆ ಭೇಟಿ ನೀಡಲು ಮಂಗಳೂರಿನಿಂದ ಬರುತ್ತಿದ್ದಾಗ ರಾತ್ರಿ ಎರಡು ಗಂಟೆಗೆ ಖಾಸಗಿ ಬಸ್ ಅನ್ನೇ ತಡೆದು ಮುಂದಿನ 30 ದಿನ ಶಿವಮೊಗ್ಗದಿಂದ ಗಡಿಪಾರು ಮಾಡಿ ಖಾಸಗಿ ವಾಹನದಲ್ಲಿ ದಾವಣಗೆರೆಗೆ ಕಳುಹಿಸಿಕೊಟ್ಟಿರುವ ಕ್ರಮ ಸರಿಯಲ್ಲ ಎಂದು ಬುಧವಾರ ಕಿಡಿಕಾರಿದರು.
    ಮುತಾಲಿಕ್ ಅವರು ರಾಗಿಗುಡ್ಡದ ನೊಂದ ಹಿಂದುಗಳಿಗೆ ಸಾಂತ್ವನ ಹೇಳಲು ಆಗಮಿಸುತ್ತಿದ್ದರು. ಅವರು ಭಯೋತ್ಪಾದಕರಲ್ಲ. ಭಯೋತ್ಪಾದಕ ಕೃತ್ಯಗಳನ್ನು ಮಾಡಿದವರನ್ನು ಸುಮ್ಮನೆ ಬಿಟ್ಟಿರುವ ಸ್ಥಳೀಯ ಆರಕ್ಷಕರು ಮುತಾಲಿಕ್ ಅವರನ್ನು ವಶಕ್ಕೆ ಪಡೆದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಕುಸಿಯುವಂತೆ ಮಾಡಿದ್ದಾರೆ. ಸ್ಥಳೀಯ ಪೊಲೀಸರ ಈ ವರ್ತನೆ ನಾಚಿಗೆಗೇಡು ಎಂದರು.
    ಮುತಾಲಿಕ್ ಅವರು ರಾಗಿಗುಡ್ಡದಲ್ಲಿ ಪ್ರತಿಭಟನೆ ಮಾಡುವುದಕ್ಕೆ ಬಂದವರಲ್ಲ. ಹೋರಾಟ ಮಾಡುತ್ತಿರಲಿಲ್ಲ. ಹಿಂದುಗಳಿಗೆ ಆದ ಅನ್ಯಾಯಕ್ಕೆ ಸಾಂತ್ವನ ಹೇಳಲೂಬಾರದು ಎಂದರೆ ಇದು ಪ್ರಜಾಪ್ರಭುತ್ವ ವ್ಯವಸ್ಥೆಯೇ. ಕಾಂಗ್ರೆಸ್ ಸರ್ಕಾರ ಹಕ್ಕುಗಳನ್ನು ಧಮನ ಮಾಡಲು ಹೊರಟಿದೆ. ಇದು ನಾಚಿಕೆಗೇಡಿನ ಸಂಗತಿ. ರಾಗಿಗುಡ್ಡ ಘಟನೆ ಪೂರ್ವನಿಯೋಜಿತವಾದುದು. ಪೊಲೀಸ್ ಇಲಾಖೆ ಸಂಪೂರ್ಣ ವಿಲವಾಗಿದೆ. ಎಸ್ಪಿ ಮೇಲೆಯೇ ಕಲ್ಲು ತೂರಾಟ ಆಗುತ್ತದೆ. ಸೊಂಟದಲ್ಲಿರುವ ಪಿಸ್ತೂಲ್ ಬರೀ ಶೋಕಿಗಲ್ಲ. ಅದನ್ನು ಎಸ್ಪಿ ಅವರು ಆ ಸಂದರ್ಭದಲ್ಲಿ ಬಳಸಿಕೊಳ್ಳಬೇಕಿತ್ತು ಎಂದು ಹೇಳಿದರು.
    ಶಿವಮೊಗ್ಗದ ಪೊಲೀಸರಿಗೆ ಮುತಾಲಿಕ್ ಎಷ್ಟು ಹೊತ್ತಿಗೆ ಬರುತ್ತಾರೆ ಎಂಬ ಮಾಹಿತಿ ಗೊತ್ತಿರುತ್ತದೆ. ಆದರೆ ಈದ್‌ಮಿಲಾದ್ ಮೆರವಣಿಗೆಯಲ್ಲಿ ಹಿಂದುಗಳ ಮೇಲೆ ಕಲ್ಲೆಸೆದವರು ಯಾರು?, ತಲವಾರು ಝಳಪಿಸಿದವರು ಯಾರು ? ಯಾವ ಭಯೋತ್ಪಾದಕರು ಶಿವಮೊಗ್ಗದಲ್ಲಿದ್ದಾರೆ ಎಂಬ ಮಾಹಿತಿಗಳು ಸಿಗುವುದಿಲ್ಲವೇ ಎಂದು ಗಂಗಾಧರ್ ಪ್ರಶ್ನಿಸಿದರು.
    ಶಿವಮೊಗ್ಗದಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದು ಇದು ಮತ್ತೊಂದು ಕಾಶ್ಮೀರ ಆಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಅದನ್ನು ತಪ್ಪಿಸಬೇಕಿದೆ. ಈ ಎಲ್ಲ ಘಟನೆಗಳನ್ನು ಇಟ್ಟುಕೊಂಡು ಹಿಂದುಗಳ ಮೇಲೆ ಆಗುತ್ತಿರುವ ಅನ್ಯಾಯ, ಅತ್ಯಾಚಾರಗಳನ್ನು ವಿರೋಧಿಸಿ ಶಿವಮೊಗ್ಗದಲ್ಲಿ ಬರುವ ದಿನಗಳಲ್ಲಿ ಶಿವಮೊಗ್ಗ ಚಲೋ ಚಳವಳಿಯನ್ನು ಶ್ರೀರಾಮ ಸೇನೆ ಹಮ್ಮಿಕೊಂಡಿದೆ. ಇದಕ್ಕೆ ರಾಜ್ಯಾದ್ಯಂತ ಹಿಂದು ರಾಷ್ಟ್ರಭಕ್ತರು ಬರುತ್ತಾರೆ. ಹರ್ಷನ ಕೊಲೆ ಮಾಡಿದವರು, ರಾಗಿಗುಡ್ಡದಲ್ಲಿ ಹಿಂದುಗಳ ಮನೆಗಳ ಮೇಲೆ ಕಲ್ಲು ಎಸೆದವರು, ಖಡ್ಗವನ್ನು ಪ್ರದರ್ಶಿಸಿದವರು ತಾಕತ್ತು, ಧಮ್ಮಿದ್ದರೆ ಆ ಪುಂಡ ಪೋಕರಿಗಳೆಲ್ಲ ಬರಲಿ ಎಂದು ಸವಾಲು ಹಾಕಿದರು. ರಘುವರನ್, ಶಶಿ, ಚಂದ್ರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts