More

  ಶಿಗ್ಗಾಂವಿಯಲ್ಲಿ ನಿಸರ್ಗ ಕರೆಗೆ ಪರದಾಟ

  ಶಿಗ್ಗಾಂವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ವಚ್ಛತೆ, ಶುಚಿತ್ವ ಹಾಗೂ ನೈರ್ಮಲೀಕರಣ ಕಾಪಾಡಲು ಶೌಚಗೃಹಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುತ್ತಿದ್ದರೂ ಶಿಗ್ಗಾಂವಿ ಪಟ್ಟಣಕ್ಕೆ ಆ ಭಾಗ್ಯವೇ ಇಲ್ಲದಂತಾಗಿದೆ.
  ತಾಲೂಕು ಕೇಂದ್ರದಲ್ಲಿಯೇ ಸಾರ್ವಜನಿಕ ಶೌಚಗೃಹ ಮತ್ತು ಮೂತ್ರಖಾನಿಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಕಾರ್ಯನಿಮಿತ್ತ ಪಟ್ಟಣಕ್ಕೆ ಬರುವ ಜನರು, ಮೂತ್ರ ವಿಸರ್ಜನೆಗೆ ಖಾಲಿ ನಿವೇಶನ, ರಸ್ತೆ ಬದಿ ನಿಂತ ಖಾಸಗಿ ವಾಹನಗಳ ಹಿಂದೆ, ಪಾಳುಬಿದ್ದ ಕಟ್ಟಡಗಳತ್ತ ತೆರಳುವ ದುಸ್ಥಿತಿ ಇದೆ. ಪಟ್ಟಣದ ಪ್ರಮುಖ ರಸ್ತೆ, ಸರ್ಕಲ್ ಹಾಗೂ ಮಾರುಕಟ್ಟೆಯಲ್ಲಿ ಸಾರ್ವಜನಿಕ ಶೌಚಗೃಹಗಳಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಸುತ್ತಲಿನ ಪ್ರದೇಶಗಳೆಲ್ಲ ಗಬ್ಬು ನಾರುತ್ತಿದೆ.
  ಪಟ್ಟಣದ ಪುರಸಭೆ ಆವರಣದ ಮೂಲೆಯಲ್ಲಿ ಒಂದು ಸಾರ್ವಜನಿಕ ಶೌಚಗೃಹವಿದ್ದು, ನಿರ್ವಹಣೆ ಕೊರತೆಯಿಂದ ಹಾಳಾಗಿದೆ. ಇತ್ತೀಚೆಗೆ ನವೀಕರಣಗೊಂಡ ಹಳೇ ಬಸ್ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹೊಸ ಬಸ್ ನಿಲ್ದಾಣಗಳಲ್ಲಿರುವ ಶೌಚಗೃಹಗಳನ್ನು ಹೊರತುಪಡಿಸಿದರೆ ಪಟ್ಟಣದಲ್ಲಿ ಸಾರ್ವಜನಿಕರ ಬಳಕೆಗೆ ಶೌಚಗೃಹಗಳಿಲ್ಲ.
  ಬಗೆಹರಿಯಲಿ ಸಮಸ್ಯೆ: ಪಟ್ಟಣಕ್ಕೆ ಬರುವ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಶೌಚಗೃಹ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ‘ಬಯಲು ಶೌಚಮುಕ್ತ’ ಎನ್ನುವುದು ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿದೆ ಎಂಬ ದೂರು ಕೇಳಿ ಬರುತ್ತಿದೆ. ಈ ಕುರಿತು ಚುನಾಯಿತ ಪ್ರತಿನಿಧಿಗಳು, ಪುರಸಭೆ ಅಧಿಕಾರಿಗಳು ಮುತುವರ್ಜಿ ವಹಿಸಿ ಶೌಚಗೃಹ ಸಮಸ್ಯೆ ಬಗೆಹರಿಸಬೇಕು ಎಂದು ಮಹಿಳೆಯರು ಒತ್ತಾಯಿಸಿದ್ದಾರೆ.

  ನಗರದ ಸೌಂದರ್ಯ ಹಾಗೂ ಸ್ವಚ್ಛ ಭಾರತದ ಹೆಸರಿನಲ್ಲಿ ಸ್ಥಳೀಯ ಆಡಳಿತದಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಅಧಿಕಾರಿಗಳು, ಜನಪ್ರತಿನಿಧಿಗಳು ಪಟ್ಟಣದಲ್ಲಿ ಸಾರ್ವಜನಿಕರಿಗೆ ಶೌಚಗೃಹ ನಿರ್ಮಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಜನರು ತುರ್ತಾಗಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಪಟ್ಟಣದಲ್ಲಿ ಅನೈರ್ಮಲ್ಯ ಉಂಟಾಗುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪುರಸಭೆ ಅಧಿಕಾರಿಗಳು ಅಗತ್ಯವಿರುವಲ್ಲಿ ಶೌಚಗೃಹ ನಿರ್ಮಿಸಬೇಕು.
  ಸಂಗಪ್ಪ ಹರವಿ, ಶ್ರೀ ವಿಘ್ನೇಶ್ವರ ಟ್ಯಾಕ್ಸಿ ಚಾಲಕರ, ಮಾಲೀಕರ ಸಂಘದ ಉಪಾಧ್ಯಕ್ಷ

  ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸಂತೆ ಮೈದಾನದಲ್ಲಿ ಸುಸಜ್ಜಿತ ಶೌಚಗೃಹ ನಿರ್ಮಿಸಲು ಪುರಸಭೆಯ 12 ಲಕ್ಷ ರೂ. ಅನುದಾನದ ಟೆಂಡರ್ ಆಗಿದೆ. ಶೀಘ್ರದಲ್ಲಿಯೇ ಕಾರ್ಯಾದೇಶ ನೀಡಿ, ಶೌಚಗೃಹ ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿ ಅಗತ್ಯವಿರುವ ಕಡೆಗಳಲ್ಲಿ ಶೌಚಗೃಹ ನಿರ್ಮಿಸಲು ಕ್ರಿಯಾಯೋಜನೆ ರೂಪಿಸಲಾಗುವುದು.
  ಎಂ.ಕೆ. ಮುಗಳಿ, ಪುರಸಭೆ ಮುಖ್ಯಾಧಿಕಾರಿ ಶಿಗ್ಗಾಂವಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts