More

    ಉಡುಪಿಯಲ್ಲಿ ಪುನರ್ವಸತಿ ಕೇಂದ್ರ

    ಉಡುಪಿ: ಉಡುಪಿ ತಾಲೂಕಿನಲ್ಲಿಯೂ 5 ಕೋಟಿ ರೂ.ವೆಚ್ಚದಲ್ಲಿ ನೆರೆ ಸಂತ್ರಸ್ತರಿಗೆ ಪುರ್ನವಸತಿ ಕೇಂದ್ರ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ಸ್ಥಳ ಗುರುತಿಸಲು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.

    ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ಮಳೆ ಹಾನಿ ಅವಲೋಕನ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಕೇಂದ್ರ ಮಳೆಗಾಲದ ನಂತರ ಇತರೆ ಕಾರ್ಯಗಳಿಗೂ ಬಳಸುವಂತಿರಬೇಕು ಎಂದರು.

    ನೆರೆ ಪರಿಹಾರ ಕೈಗೊಳ್ಳಲು ಗ್ರಾಪಂ ಮಟ್ಟದಲ್ಲಿಯೇ ಅಧಿಕಾರಿಗಳನ್ನು ಒಳಗೊಂಡಂತೆ ಸ್ಥಳೀಯ ಯುವ ಸ್ವಯಂಸೇವಕರನ್ನು ಸೇರಿಸಿಕೊಂಡು ಅವರಿಗೆ ತರಬೇತಿ ನೀಡಿ, ಗ್ರಾಮಮಟ್ಟದಲ್ಲಿಯೇ ವಿಪತ್ತು ನಿರ್ವಹಣಾ ಯೋಜನೆ ರೂಪಿಸಿ ಅದರನ್ವಯ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದರು.

    ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ 19 ಪರೀಕ್ಷೆ ನಡೆಸಬೇಕು. ವೆಂಟಿಲೇಟರ್ ಬೆಡ್‌ಗಳ ಸಂಖ್ಯೆಯನ್ನೂ ಹೆಚ್ಚಿಸಬೇಕೆಂದು ಸೂಚನೆ ನೀಡಿದರು. ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಎಂದು ಶಾಸಕ ರಘುಪತಿ ಭಟ್ ಮನವಿ ಮಾಡಿದರು. ಕಾರ್ಕಳ ಶಾಸಕ ಸುನೀಲ್ ಕುಮಾರ್, 94 ಸಿಯಲ್ಲಿ ಮನೆ ಮಂಜೂರಾಗಿ ಹಕ್ಕುಪತ್ರ ದೊರಕದ ಮನೆಗಳಿಗೆ ಮಳೆಯಿಂದ ಹಾನಿಯಾದಲ್ಲಿ ಪರಿಹಾರ ನೀಡುವಂತೆ ತಿಳಿಸಿದರು. ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

    ಜಿಲ್ಲೆಯಲ್ಲಿ ಈವರೆಗೆ 2115 ಮೀ. ಸಮುದ್ರ ಕೊರೆತ ಸಂಭವಿಸಿದ್ದು, 18.95 ಕೋಟಿ ರೂ.ನಷ್ಟವಾಗಿದೆ. ಈ ಬಗ್ಗೆ ಅಂದಾಜುಪಟ್ಟಿ ತಯಾರಿಸಿ ಶೀಘ್ರದಲ್ಲಿ ಸಲ್ಲಿಸಬೇಕು. ಮಳೆಯಿಂದ ಹಾನಿಯಾದ ರಸ್ತೆಗಳ ದುರಸ್ತಿಗೆ ಲೋಕೋಪಯೋಗಿ, ಪಂಚಾಯತ್‌ರಾಜ್, ಇಂಜಿನಿಯರಿಂಗ್ ಹಾಗೂ ಸ್ಥಳೀಯ ಸಂಸ್ಥೆಗಳು ಮೊತ್ತದ ಅಂದಾಜು ನೀಡಿದರೆ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು.
    – ಬಸವರಾಜ ಬೊಮ್ಮಾಯಿ ಉಸ್ತುವಾರಿ ಸಚಿವ, ಉಡುಪಿ

    ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆ
    ಕುಂದಾಪುರ: ಕರಾವಳಿ ತೀರವನ್ನು ಪದೇಪದೆ ಕಾಡುತ್ತಿರುವ ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರ ರೂಪಿಸಬೇಕು ಎನ್ನುವ ಚಿಂತನೆ ರಾಜ್ಯ ಸರ್ಕಾರಕ್ಕಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಡಲ ತೀರದಲ್ಲಿ ಕಡಲ್ಕೊರೆತ ಸಾಮಾನ್ಯ. ತುಂಡು ತುಂಡು ಕಾಮಗಾರಿ ಮಾಡುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಶಾಶ್ವತವಾಗಿ ಪರಿಹಾರ ಕಲ್ಪಿಸಲು ಕೇಂದ್ರ ಸರ್ಕಾರದ ಜತೆಯಲ್ಲಿ ಸಮನ್ವಯತೆ ಸಾಧಿಸಲಾಗುವುದು. ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜ್ಯ ಸರ್ಕಾರದ ಸಹ ಭಾಗಿತ್ವದಲ್ಲಿ ಶಾಶ್ವತ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ. ಇದಕ್ಕೆ ಪೂರಕವಾಗಿ ಸಮಗ್ರ ವರದಿ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts