More

    ಮನುಕುಲಕ್ಕೆ ಬಳುವಳಿಯಾದ ಶರಣರ ಚಳವಳಿ

    ಕುಶಾಲನಗರ: ಶರಣರ ಚಳವಳಿ ನಡೆದು 900 ವರ್ಷಗಳು ಕಳೆದರೂ ಇಂದಿಗೂ ಮನುಕುಲದ ಉದ್ಧಾರಕ್ಕೆ ಬಳುವಳಿಯಾಗಿದೆ ಎಂದು ಕುಶಾಲನಗರ ಪುರಸಭೆ ಸದಸ್ಯೆ ಜಯಲಕ್ಷ್ಮೀ ಬಣ್ಣಿಸಿದರು.

    ಕುಶಾಲನಗರದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ವಸತಿ ನಿಲಯದ ವಿದ್ಯಾರ್ಥಿಗಳಿಗಾಗಿ ಗುರುವಾರ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಸುತ್ತೂರು ಜಗದ್ಗುರು ಗುರುಚನ್ನಬಸವ ಶಿವಾಚಾರ್ಯ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಹನ್ನೆರಡನೇ ಶತಮಾನದ ಜನರಲ್ಲಿದ್ದ ಮೌಢ್ಯ ಸೇರಿದಂತೆ ಮೊದಲಾದ ಕಂದಾಚಾರಗಳ ವಿರುದ್ಧ ಬಸವಾದಿ ಶರಣರು ಸಮರ ಸಾರುವ ಮೂಲಕ ಜನಸಾಮಾನ್ಯರ ಬವಣೆಗಳ ಊರುಗೋಲಾದರು. ವಚನಕಾರ್ತಿಯರಾದ ಅಕ್ಕಮಹಾದೇವಿ, ಸತ್ಯಕ್ಕ, ಸಂಕವ್ವಾ ಮೊದಲಾದ ಶರಣೆಯ ಹೋರಾಟದ ಮಜಲುಗಳ ಕುರಿತು ಮಾತನಾಡಿದರು.

    ರಂಗಕರ್ಮಿ ಎಂ.ನಂಜುಂಡಸ್ವಾಮಿ ಮಾತನಾಡಿ, 12ನೇ ಶತಮಾನದಲ್ಲಿ ಮೇಲು-ಕೀಳು, ಬಡವ-ಬಲ್ಲಿದ ಮೊದಲಾದ ಶೋಷಣೆಯುಕ್ತ ಪರಿಸರ, ಅಂದಿನ ಜನರ ನೆಮ್ಮದಿಯನ್ನು ಕಿತ್ತು ತಿನ್ನುತ್ತಿದ್ದಾಗ ಅವತಾರ ಪುರುಷನಂತೆ ಮೇಲೆದ್ದು ಬಂದು ಹೋರಾಟ ನಡೆಸಿ ದೀನ ದಲಿತರ ನೋವಿಗೆ ಧ್ವನಿಯಾದ ಶರಣ ಚಳವಳಿ ಈ ನಾಡು ಕಂಡ ಶ್ರೇಷ್ಠ ಚಳವಳಿ ಎಂದರು.

    ವಿದ್ಯಾರ್ಥಿಗಳು ಶಾಲಾ-ಕಾಲೇಜು ಹಂತದಿಂದಲೇ ಬಸವಾದಿ ಶರಣರ ವಚನಗಳನ್ನು ಅರಿತು ಅದರ ಸಾರದಂತೆ ಬದುಕು ಕಟ್ಟಿದಾಗ ಕಲ್ಯಾಣ ರಾಜ್ಯದ ಕನಸು ನನಸಾಗಲಿದೆ. ಬಸವಣ್ಣ ಒಬ್ಬ ವೈದ್ಯನಾಗಿ, ವಿಜ್ಞಾನಿಯಾಗಿ, ತತ್ವಜ್ಞಾನಿಯಾಗಿ ಜನಮಾನಸದಲ್ಲಿ ಹೆಸರಾಗಿ ಉಸಿರಾದ ಬಗ್ಗೆ ನಂಜುಂಡಸ್ವಾಮಿ ವಿಶ್ಲೇಷಿಸಿದರು.

    ಮಡಿಕೇರಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೋಹನಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಚನ ಸಾಹಿತ್ಯದ ಅರಿವು ಮೂಡಿಸುವ ಮೂಲಕ ಅವರನ್ನು ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪಿಸುವಲ್ಲಿ ಶರಣ ಸಾಹಿತ್ಯ ಉತ್ತಮ ವೇದಿಕೆಯಾಗಿದೆ ಎಂದರು.

    ಗುಡ್ಡೆಹೊಸೂರು ವೀರಶೈವ ಸಮಾಜದ ಅಧ್ಯಕ್ಷ ಬಿ.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು. ಇಂಜಿನಿಯರಿಂಗ್ ವಿದ್ಯಾರ್ಥಿ ಬಸವರಾಜು ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts