More

    ಸೇಂದಿ, ಸಾರಾಯಿ ಮಾರಾಟಗಾರರ ಕಡೆಗಣನೆ: ಹುಲ್ತಿಕೊಪ್ಪ ಆರೋಪ

    ಶಿವಮೊಗ್ಗ: ಸೇಂದಿ ಮತ್ತು ಸಾರಾಯಿ ಸ್ಥಗಿತದ ಬಳಿಕ ಅದನ್ನೇ ನಂಬಿ ಜೀವನ ನಡೆಸುತ್ತಿದ್ದವರಿಗೆ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ತಕ್ಷಣವೇ ಸೇಂದಿ, ಸಾರಾಯಿ ಮಾರಾಟ ಮಾಡುತ್ತಿದ್ದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಆರ್.ಶ್ರೀಧರ್ ಹುಲ್ತಿಕೊಪ್ಪ ಒತ್ತಾಯಿಸಿದರು.
    ಸೇಂದಿ ಮತ್ತು ಸಾರಾಯಿ ಮಾರಾಟ ಈಡಿಗ ಸಮಾಜದ ಪ್ರಮುಖ ಕಾಯಕವಾಗಿತ್ತು. ಆದರೆ ಸರ್ಕಾರಗಳು ಮೊದಲು ಸೇಂದಿ, ಆನಂತರ ಸಾರಾಯಿ ಮಾರಾಟ ಸ್ಥಗಿತಗೊಳಿಸಿ ಅದನ್ನೇ ನಂಬಿ ಜೀವನ ನಡೆಸುತ್ತಿದ್ದವರ ಬದುಕು ಬೀದಿಗೆ ಬರುವಂತೆ ಮಾಡಿದವು. ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಸಮಾಜವನ್ನು ಇಕ್ಕಟ್ಟಿಗೆ ಸಿಲುಕಿಸಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆ ಇರುವ ಸಮಾಜವನ್ನು ಸರ್ಕಾರ ಕಡಗಣನೆ ಮಾಡುತ್ತಿದೆ. ಈಗಲಾದರೂ ಸಮಾಜದ ಆರ್ಥಿಕ, ಸಾಮಾಜಿಕ ಸ್ಥಿತಿ ಅರ್ಥ ಮಾಡಿಕೊಂಡು ಸೌಲಭ್ಯಗಳನ್ನು ಸ್ಥಾಪಿಸಬೇಕು. ಇಲ್ಲವಾದರೆ ದೊಡ್ಡಮಟ್ಟದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದರು.
    ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಎಸ್.ಬಂಗಾರಪ್ಪ ಹೆಸರು ಇಡಬೇಕೆಂಬ ಬೇಡಿಕೆ ಇಂದು-ನಿನ್ನೆಯದಲ್ಲ. ನಿಲ್ದಾಣದ ಕಾಮಗಾರಿ ಆರಂಭಗೊಂಡಾಗಿನಿಂದಲೂ ಇದೆ. ಇತ್ತೀಚೆಗೆ ಹಲವು ಸಂಘಟನೆಗಳು ನಾನಾ ಬಗೆಯ ಹೆಸರನ್ನು ಮುನ್ನೆಲೆಗೆ ತಂದಿದ್ದು ಗೊಂದಲಕ್ಕೆ ಕಾರಣವಾಗಿದೆ. ದೇಶ ಮತ್ತು ರಾಜ್ಯಕ್ಕೆ ಅನೇಕ ಕೊಡುಗೆ ಕೊಟ್ಟಿರುವ ಬಂಗಾರಪ್ಪ ಅವರ ಹೆಸರಿಡಬೇಕು ಎನ್ನುವುದು ಈ ಭಾಗದ ಜನರ ಹಕ್ಕೊತ್ತಾಯವಾಗಿದೆ ಎಂದು ಹೇಳಿದರು.
    ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರಿ, ನಿರ್ದೇಶಕ ಜಿ.ಡಿ.ಮಂಜುನಾಥ, ಪ್ರಮುಖರಾದ ಪ್ರವೀಣ್ ಹಿರೇಹಿಡಗೂರು, ಎನ್.ಹೊನ್ನಪ್ಪ, ಎನ್.ಪಿ.ಧರ್ಮರಾಜ್, ರವಿ, ಕುಪ್ಪಯ್ಯ, ಯೋಗೇಶ್, ಎಸ್.ಎಂ.ಹರೀಶ್, ಈಶ್ವರ್, ಲಲಿತಾ ಹೊನ್ನಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts