More

    ಸೊಳ್ಳೆ ಕಾಟಕ್ಕೆ ಸುಟ್ಟಾಯಿಲ್, ಮರದ ಪುಡಿ ಮದ್ದು, ಕಾಲ್ತೋಡು ಗ್ರಾಮದ ಕೃಷಿಕನಿಂದ ಅಳವಡಿಕೆ

    ಕುಂದಾಪುರ: ಬೈಂದೂರು ತಾಲೂಕು ಕಾಲ್ತೋಡು ಗ್ರಾಮದ ಪ್ರಗತಿಪರ ಕೃಷಿಕ ರಾಮಯ್ಯ ಶೆಟ್ಟಿ ಸೊಳ್ಳೆ ಕಾಟ ದೂರ ಮಾಡಲು ವಿನೂತನ ಮಾದರಿಯನ್ನು ಶೂನ್ಯ ಬಂಡವಾಳದಲ್ಲಿ ತಮ್ಮ ತೋಟ ಹಾಗೂ ಹಟ್ಟಿಯಲ್ಲಿ ಅಳವಡಿಸಿದ್ದಾರೆ.

    ರಾಯಚೂರು ಕೃಷಿಕರೊಬ್ಬರಿಗೆ ಗುಜರಾತ್‌ನ ಕೃಷಿಕ ತಿಳಿಸಿದ ಮಾದರಿಯನ್ನು ವಾಟ್ಸಪ್‌ನಲ್ಲಿ ನೋಡಿ ಅದನ್ನು ಅಳವಡಿಸಿ ಸೊಳ್ಳೆಗಳ ಹಾರಾಟಕ್ಕೆ ಮದ್ದರೆದಿದ್ದು, ಅದಕ್ಕೆ ಸೊಳ್ಳೆ ಸೀಡ್‌ಬಾಲ್ ಎಂದು ಹೆಸರಿಸಿದ್ದಾರೆ.

    * ಹೇಗೆ ತಯಾರಿ?: ಮರದ ಹೊಟ್ಟನ್ನು(ಪುಡಿ) ಬಟ್ಟೆಯಲ್ಲಿ ಗಂಟುಕಟ್ಟಿ, ಅದನ್ನು ಸುಟ್ಟಾಯಿಲ್(ಮಡ್‌ಆಯಿಲ್)ನಲ್ಲಿ ನೆನೆಸಿದ ಬಳಿಕ ಹಟ್ಟಿಯ ಮೇಲ್ಛಾವಣಿಗೆ ಕಟ್ಟಬೇಕು. ಬಟ್ಟೆಗಂಟು ಒಣಗಿದರೆ ಮತ್ತೆ ಸುಟ್ಟಾಯಿಲ್‌ನಲ್ಲಿ ಅದ್ದಿ ಕಟ್ಟಬೇಕು. ಇದರಿಂದ ಸೊಳ್ಳೆ ಮಾತ್ರವಲ್ಲ, ನೊಣ ಕೂಡ ಇರುವುದಿಲ್ಲ. ಗೊಬ್ಬರದ ತೊಟ್ಟಿಯಿಂದಲೂ ಸೊಳ್ಳೆಗಳು ಮಾಯವಾಗುತ್ತವೆ.

    ಫ್ಯಾನ್ ಹಾಕದೆ ಹಟ್ಟಿಯಲ್ಲಿ ಹಾಲು ಕರೆಯಲು ಆಗುತ್ತಿರಲಿಲ್ಲ. ಸೊಳ್ಳೆ ಸೀಡ್‌ಬಾಲ್‌ನಿಂದ ಪರಿಹಾರ ದೊರೆತಿದೆ. ಇದನ್ನು ತೋಟದಲ್ಲೂ ಅಳವಡಿಸುತ್ತಿದ್ದೇನೆ ಎನ್ನುತ್ತಾರೆ ರಾಮಯ್ಯ ಶೆಟ್ಟಿ. ಮಾಹಿತಿಗೆ 9663263545 ಸಂಪರ್ಕಿಸಬಹುದು.

    ಗ್ರೀಸ್ ಅಥವಾ ವೇಸ್ಟ್ ಆಯಿಲ್ ಹಚ್ಚಿದರೆ ಜೇನು ಪೆಟ್ಟಿಗೆಗೆ ಇರುವೆ ಕಾಟ ಇರುವುದಿಲ್ಲ. ಮರದ ಹೊಟ್ಟಿಗೆ ಸುಟ್ಟಾಯಿಲ್ ಮಿಕ್ಸ್ ಮಾಡಿದ ಬಟ್ಟೆ ಗಂಟಿನ ಮೇಲೆ ನೊಣ ಅಥವಾ ಸೊಳ್ಳೆ ಕೂರುವುದರಿಂದ ಅವುಗಳ ಕಾಲುಗಳು ಬಟ್ಟೆಗೆ ಅಂಟಿಕೊಂಡು ಅಲ್ಲಿಯೇ ಸಾಯುತ್ತವೆ. ಸಂತಾನೋತ್ಪತ್ತಿ ಕಡಿಮೆಯಾಗುತ್ತದೆ. ಬೇರೆ ವೈಜ್ಞಾನಿಕ ಕಾರಣ ಪತ್ತೆ ಮಾಡಬೇಕಿದೆ.
    – ಡಾ.ಧನಂಜಯ್, ಕೃಷಿ ವಿಜ್ಞಾನಿ, ಕೃಷಿ ಸಂಶೋಧನಾ ಕೇಂದ್ರ ಬ್ರಹ್ಮಾವರ

    ಮರದ ಹೊಟ್ಟು ಸುಟ್ಟಾಯಿಲ್ ಬಳಕೆಯಿಂದ ಸೊಳ್ಳೆ ದೂರ ಹೋಗುತ್ತದೆ ಎನ್ನುವುದಾದರೆ ಉತ್ತಮ ತಂತ್ರಜ್ಞಾನವಾಗುತ್ತದೆ. ಈ ಬಗ್ಗೆ ಹೆಚ್ಚಿನ ಶೋಧ ನಡೆಯಬೇಕಿದೆ.
    – ಡಾ.ಎಸ್.ಯು. ಪಾಟೀಲ್, ಸಹ ಸಂಶೋಧನಾ ನಿರ್ದೇಶಕ, ವಲಯ ಕೃಷಿ ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts