More

    ಸಮುದ್ರ ಸೇರುತ್ತಿವೆ ಮರಿ ಆಮೆಗಳು

    ಕುಂದಾಪುರ: ಕೋಡಿ ಲೈಟ್‌ಹೌಸ್ ಸಮುದ್ರ ಕಿನಾರೆಯಲ್ಲಿ ಎರಡು ತಿಂಗಳಿಂದ ಕಡಲಾಮೆಗಳ ಮೊಟ್ಟೆ ಸಂರಕ್ಷಣೆ ಕಾರ್ಯ ನಡೆಯುತ್ತಿದ್ದು, ಬುಧವಾರ ರಾತ್ರಿ ಮೊಟ್ಟೆಗಳು ಒಡೆದು ಮರಿಗಳು ಹೊರಬಂದಿವೆ.
    ಜನವರಿಯಿಂದ ಮಾರ್ಚ್ ತನಕ ಕೋಡಿ ಲೈಟ್‌ಹೌಸ್ ಬಳಿ ಕಡಲಾಮೆಗಳು ತೀರಕ್ಕೆ ಬಂದು ಸಾವಿರಾರು ಮೊಟ್ಟೆಗಳನ್ನಿಟ್ಟಿದ್ದವು. ಸ್ಥಳೀಯರೊಂದಿಗೆ ಸೇರಿ ಅರಣ್ಯ ಇಲಾಖೆ ಹಾಗೂ ಕೆಲ ಸಂಘಟನೆಗಳು ಅಳಿವಿನಂಚಿನಲ್ಲಿರುವ ಕಡಲಾಮೆ ಮೊಟ್ಟೆಗಳನ್ನು ಅಲ್ಲಲ್ಲೇ ನೈಸರ್ಗಿಕವಾಗಿ ಹ್ಯಾಚರಿ ನಿರ್ಮಿಸುವ ಮೂಲಕ ಸಂರಕ್ಷಿಸಲಾಗಿತ್ತು.
    ಪತ್ತೆಯಾದ ಒಂದೊಂದು ದಿನವೂ ಪ್ರತ್ಯೇಕ ಹ್ಯಾಚರಿ ನಿರ್ಮಿಸಲಾಗಿದ್ದು, ಕೋಡಿ ಕಿನಾರೆ ಆಸುಪಾಸಲ್ಲಿ 11 ಹ್ಯಾಚರಿ ನಿರ್ಮಾಣವಾಗಿತ್ತು. ಈಗ 2 ಹ್ಯಾಚರಿಗಳಿಂದ ಒಟ್ಟು 120 ಕಡಲಾಮೆ ಮರಿಗಳು ಹೊರಬಂದಿದ್ದು, ನೈಸರ್ಗಿಕವಾಗಿ ಕಡಲು ಸೇರಲು ಅಧಿಕಾರಿಗಳು, ಸಂಸ್ಥೆಯವರು, ಸಾರ್ವಜನಿಕರು ಒಗ್ಗೂಡಿ ಅನುವು ಮಾಡಿಕೊಟ್ಟರು. ಕುಂದಾಪುರ ಉಪಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಮಾರ್ಗದರ್ಶನಲ್ಲಿ ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ಎಫ್.ಎಸ್.ಎಲ್ ಇಂಡಿಯಾ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ರೀಫ್ ವಾಚ್ ಸಂಸ್ಥೆ ತಡರಾತ್ರಿ 9.30ರಿಂದ ಬೆಳಗ್ಗೆ 4.30ರ ತನಕ ಸ್ಥಳದಲ್ಲಿ ಬೀಡುಬಿಟ್ಟಿದ್ದರು.

    ಸಾಮಾನ್ಯವಾಗಿ ಸಮುದ್ರದಿಂದ ಹೊರಬಂದು ದಡದಲ್ಲಿ ಕಡಲಾಮೆಗಳು ಮೊಟ್ಟೆಯಿಟ್ಟ 48-60 ದಿನದಲ್ಲಿ ಮರಿಗಳು ಹೊರಬರುತ್ತವೆ. ಮೊಟ್ಟೆಗಳ ಸಂರಕ್ಷಣೆ, ವೀಕ್ಷಣೆ ಹಾಗೂ ಅಂತಿಮ ಫಲಿತಾಂಶದ ನಿಟ್ಟಿನಲ್ಲಿ ಎರಡು ತಿಂಗಳಿನಿಂದ ಮುತುವರ್ಜಿ ವಹಿಸಿ, ಕಳೆದೊಂದು ವಾರದಿಂದ ರಾತ್ರಿ ಕಾಯುತ್ತಿದ್ದ ಅರಣ್ಯ ಇಲಾಖೆ, ವಿವಿಧ ಸಂಸ್ಥೆ, ಸ್ಥಳೀಯರ ಕಾರ್ಯ ಸಾರ್ವಜನಿಕವಾಗಿ ಪ್ರಶಂಸೆಗೆ ಪಾತ್ರವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts