More

    ಜಗತ್ತು ಕರೊನಾ ವಿರುದ್ಧ ಹೋರಾಡುತ್ತಿದ್ದರೆ, ಈ ವಿಜ್ಞಾನಿಗಳ ಹೋರಾಟವೇ ಬೇರೆಯದ್ದು…!

    ಬರ್ನ್​ (ಸ್ವಿಟ್ಜರ್ಲೆಂಡ್​): ಇಡಿ ವಿಶ್ವವೇ ಕರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ಮಗ್ನವಾಗಿದೆ. ಇದಕ್ಕೆ ಸೂಕ್ತ ರೋಗನಿರೋಧಕ ಚುಚ್ಚುಮದ್ದು ಕಂಡುಹಿಡಿಯುವಲ್ಲಿ ನಾನಾ ದೇಶಗಳ ವಿಜ್ಞಾನಿಗಳು ವಿವಿಧ ರೀತಿಯ ಪ್ರಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಸ್ವಿಟ್ಜರ್ಲೆಂಡ್​, ಅಮೆರಿಕ ಸೇರಿ ವಿವಿಧ ರಾಷ್ಟ್ರಗಳ ವಿಜ್ಞಾನಿಗಳು ಮಾತ್ರ ಬೇರೆಯದ್ದೇ ಆದ ರೀತಿಯ ಹೋರಾಟಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

    ಅದುವೇ ಆನ್​ಲೈನ್​ನಲ್ಲಿ ಕರೊನಾ ಕುರಿತು ತುಂಬಾ ವೇಗವಾಗಿ ಹರಡುತ್ತಿರುವ ತಪ್ಪು ಮಾಹಿತಿಗಳು. ತಮ್ಮ ಈ ಹೋರಾಟಕ್ಕೆ ಕರೊನಾಗಿಂತ ವೇಗವಾಗಿ ಹಬ್ಬುತ್ತಿರುವ ತಪ್ಪು ಮಾಹಿತಿಯ ಸಾಂಕ್ರಾಮಿಕ (Infodemics) ತಡೆಗಟ್ಟುವ ಹೋರಾಟ ಎಂದು ನಾಮಕರಣ ಮಾಡಿಕೊಂಡಿರುವ ವಿಜ್ಞಾನಿಗಳು, ಕರೊನಾ ಕುರಿತು ಏನೇ ತಪ್ಪು ಮಾಹಿತಿ ಬಂದರೂ ತಕ್ಷಣವೇ ಸ್ಪಂದಿಸಿ, ಸರಿಯಾದ ಮಾಹಿತಿ ಒದಗಿಸುವ ಕೆಲಸ ಮಾಡುತ್ತಿದ್ದಾರೆ.

    ಇಂಥ ಕೆಲಸ ಆರಂಭಿಸಿದವರಲ್ಲಿ ಸ್ವಿಟ್ಜರ್ಲೆಂಡ್​ನ ಮ್ಯಾಥ್ಯೂ ರೆಬಾಡ್​ ಎಂಬ ಬಯೋಕೆಮಿಸ್ಟ್ರಿ ಸಂಶೋಧಕ ಮೊದಲಿಗರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕರೊನಾ ಕುರಿತು ಹಬ್ಬಿಸಲಾಗುತ್ತಿರುವ ತಪ್ಪು ಮಾಹಿತಿ ಕಂಡಕೂಡಲೇ ಅದರ ಪೂರ್ವಾಪರ ಪರಿಶೀಲಿಸಿ, ತಮ್ಮ ಟ್ವಿಟರ್​ ಖಾತೆಯ ಮೂಲಕ ಸರಿಯಾದ ಮಾಹಿತಿ ಕೊಡುತ್ತಿದ್ದಾರೆ. ಇದರಿಂದಾಗಿ ಇವರ ಟ್ವಿಟರ್​ ಫಾಲೋಯರ್ಸ್​ ಸಂಖ್ಯೆ 14 ಸಾವಿರಕ್ಕೆ ಏರಿಕೆಯಾಗಿದೆ.

    ಇವರು ಸೇರಿ ಹಲವು ವೈದ್ಯರು, ಶಿಕ್ಷಣ ತಜ್ಞರು ಮತ್ತು ಕೆಲ ಸಂಶೋಧನಾ ಸಂಸ್ಥೆಗಳ ತಜ್ಞರ ಹೇಳುವ ಪ್ರಕಾರ ಸಾಮಾಜಿಕ ಜಾಲತಾಣಗಳಲ್ಲಿ ಕರೊನಾ ಕುರಿತು ನೀಡಲಾಗುತ್ತಿರುವ ತಪ್ಪು ಮಾಹಿತಿಗಳನ್ನು ತಡೆಗಟ್ಟುವ ಅವಶ್ಯಕತೆ ಇದೆ. ಇಲ್ಲವಾದರೆ ಸಾರ್ವಜನಿಕರ ಆರೋಗ್ಯ ಮತ್ತು ಪ್ರಾಣಕ್ಕೆ ಕುತ್ತು ಉಂಟಾಗುವ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಕೋವಿಡ್​-19 ಪಿಡುಗಿನ ವಿಷಯವಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣಗಳಲ್ಲಿ ನೀಡಲಾಗುವ ತಪ್ಪು ಮಾಹಿತಿಗಳು ಹೆಚ್ಚು ಖಚಿತತೆಯಿಂದ ಕೂಡಿರುವಂತೆಯೂ, ಹೆಚ್ಚು ನಂಬಲರ್ಹವಾಗಿರುವಂತೆ, ಆಧಾರಸಹಿತವಾಗಿ ಕೊಡಲಾಗಿರುವ ಮಾಹಿತಿಯಂತೆ ಕಾಣುತ್ತವೆ ಎಂದು ಹೆಲ್ಸಿಂಕಿ ವಿಶ್ವವಿದ್ಯಾಲಯದ ಸಂಶೋಧಕ ಕಿಂಗಾ ಪಾಲಿನ್ಜುಕ್​ ಅಲೆನಿಯಸ್​ ಹೇಳುತ್ತಾರೆ.

    ಇದನ್ನೂ ಓದಿ: ಚಿಕ್ಕವರಿಗಿಲ್ಲ ಇನ್ನೂ ಮೂರು ತಿಂಗಳು ಶಾಲೆ, ದೊಡ್ಡವರಿಗೆ ಪಾಳಿ ಪದ್ಧತಿ; ಕೇಂದ್ರ ಸಿದ್ಧಪಡಿಸುತ್ತಿದೆ ಪುನರಾರಂಭದ ಮಾರ್ಗಸೂಚಿ

    ಸಾಕಷ್ಟು ವೈಜ್ಞಾನಿಕ ಜ್ಞಾನ ಹೊಂದಿರುವ ಹೊರತಾಗಿಯೂ, ಯಾವುದೇ ಮಾಹಿತಿಯನ್ನು ಸಮಗ್ರವಾಗಿ ವಿಶ್ಲೇಷಿಸುವ ಸಾಮರ್ಥ್ಯದ ಹೊರತಾಗಿಯೂ ಕೊಡಲಾಗುವ ಇಂಥ ತಪ್ಪು ಮಾಹಿತಿಗಳನ್ನು ಆಧರಿಸಿ ರಾಷ್ಟ್ರದ ನಾಯಕರು ತಲೆಬುಡವಿಲ್ಲದ, ಪರಿಸ್ಥಿತಿಗೆ ವಿರುದ್ಧವಾಗುವ ರೀತಿಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಪ್ಯಾರಿಸ್​ನ ಪ್ಯಾಶ್ಚರ್​ ಸಂಸ್ಥೆಯ ಸಂವಹನ ವಿಭಾಗದ ನಿರ್ದೇಶಕರೂ ಆಗಿರುವ ವೈದ್ಯ ಜೀನ್​ ಫ್ರಾಂಕೋಯಿಸ್​ ಚಂಬನ್​ ಪ್ರಕಾರ ಕೆಲದಿನಗಳ ಹಿಂದೆ ಹಬ್ಬಿದ್ದ ಪ್ರಯೋಗಾಲಯದಲ್ಲಿ ಕರೊನಾ ವೈರಾಣುವನ್ನು ಸೃಷ್ಟಿಸಲಾಗಿದೆ ಎಂಬ ಮಾಹಿತಿಯನ್ನು ಅಲ್ಲಗಳೆಯಲು ಭಾರಿ ಪ್ರಯತ್ನವನ್ನೇ ಮಾಡಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

    ಕರೊನಾ ವೈರಾಣು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿಗಳ ಸಾಂಕ್ರಮಿಕ ಹೆಚ್ಚಾಗುತ್ತಿರುವುದನ್ನು ಮನಗಂಡು ಇದಕ್ಕಾಗಿ ತಮ್ಮ ಸಂಸ್ಥೆ ಪ್ರತ್ಯೇಕವಾದ ವೆಬ್​ ಪೇಜ್​ ಅನ್ನೇ ರೂಪಿಸಿರುವುದಾಗಿಯೂ, ಕರೊನಾ ಪಿಡುಗು ಆರಂಭವಾಗುವ ಮುನ್ನ ಇದ್ದ 4 ಸಾವಿರ ಸಬ್​ಸ್ಕ್ರೈಬರ್​ಗಳ ಸಂಖ್ಯೆ ಇದೀಗ 16 ಸಾವಿರಕ್ಕೆ ಹೆಚ್ಚಾಗಿರುವುದಾಗಿ ತಿಳಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts