More

    ತಕ್ಷಣ ತರಗತಿ ಪ್ರಾರಂಭ ಸಾಧ್ಯತೆ ಕಡಿಮೆ

    ಮಂಗಳೂರು: ಸೆ.21ರಿಂದ 9ನೇ ತರಗತಿಯಿಂದ 12ರವರೆಗಿನ ತರಗತಿಗಳಲ್ಲಿ ಭಾಗಶಃ ಶಾಲೆಗಳನ್ನು ಪುನರಾರಂಭಿಸಬಹುದು ಎನ್ನುವ ಕೇಂದ್ರ ಸರ್ಕಾರದ ಇತ್ತೀಚೆಗಿನ ಸುತ್ತೋಲೆಯ ಹಿನ್ನೆಲೆಯಲ್ಲಿ ಬೇಕಾದ ಸಿದ್ಧತೆಗೆ ತೊಡಗಿದೆ.

    ಆದರೆ ಇದುವರೆಗೆ ರಾಜ್ಯ ಸರ್ಕಾರದಿಂದ ಯಾವುದೇ ಮಾನದಂಡ, ಮಾರ್ಗಸೂಚಿಗಳೂ ಬಂದಿಲ್ಲ. ಸದ್ಯದ ಮಾಹಿತಿಯಂತೆ ಶಾಲೆಗಳು ತೆರೆದರೂ ತರಗತಿ ಪ್ರಾರಂಭವಾಗುವ ಸಾಧ್ಯತೆ ಬಹಳ ಕಡಿಮೆ. ಈಗಿರುವಂತೆಯೇ ಆನ್‌ಲೈನ್ ಮೂಲಕ ಶಿಕ್ಷಣ ಮುಂದುವರಿಯಲಿದೆ. ಆದರೆ ಯಾವುದೇ ವಿದ್ಯಾರ್ಥಿ ಸ್ವಯಂ ಆಗಿ ಶಾಲೆಗೆ ತೆರಳಿ ಪಠ್ಯಕ್ಕೆ ಸಂಬಂಧಿಸಿ ಮಾಹಿತಿ ಪಡೆಯುವುದು, ಶಿಕ್ಷಕರನ್ನು ಭೇಟಿಯಾಗಿ ಸ್ಪಷ್ಟನೆ ಪಡೆಯುವುದಕ್ಕೆ ಸೆ.21ರಿಂದ ಅವಕಾಶ ನೀಡಬಹುದು. ಈ ಕುರಿತು ಅಂತಿಮವಾಗಿ ರಾಜ್ಯ ಸರ್ಕಾರಗಳೇ ತೀರ್ಮಾನ ಕೈಗೊಂಡು ಮಾರ್ಗಸೂಚಿ ಹೊರಡಿಸಬೇಕು ಎಂದು ಕೇಂದ್ರ ಸರ್ಕಾರ ಅನ್‌ಲಾಕ್ 4.0ರ ವಿವರಣೆಯಲ್ಲಿ ತಿಳಿಸಿತ್ತು.

    ಇನ್ನೊಂದೆಡೆ ಸರ್ಕಾರ ಮಕ್ಕಳ ಪ್ರವೇಶಾತಿ ಆಗಿರಲೇಬೇಕು ಎಂಬ ನಿಲುವು ವ್ಯಕ್ತಪಡಿಸಿದ್ದು ಸರ್ಕಾರಿ, ಅನುದಾನಿತ, ಅಥವಾ ಅನುದಾನರಹಿತ ಶಾಲೆಯಲ್ಲಿ ಪ್ರವೇಶ ಪಡೆದಿರುವುದನ್ನು ಖಚಿತಪಡಿಸಬೇಕು. ಹಾಗಾಗಿ ಸೆ.30ರೊಳಗೆ ವಿದ್ಯಾರ್ಥಿಗಳ ದಾಖಲಾತಿ ಪೂರ್ಣಗೊಳಿಸುವಂತೆ ಶಾಲೆಗಳಿಗೆ ಹಾಗೂ ಪೋಷಕರಿಗೆ ತಿಳಿಸಿದೆ. ವಿದ್ಯಾರ್ಥಿಗಳು ಐದು ತಿಂಗಳಿಂದ ಮನೆಯಲ್ಲಿ ಉಳಿದಿದ್ದು ಅವರ ಮನಸ್ಥೈರ್ಯ ಹೆಚ್ಚಿಸುವುದು ಮತ್ತು ನಿರಂತರ ಕಲಿಕೆಯಲ್ಲಿ ತೊಡಗುವಂತೆ ಮಾಡಲು ಶಾಲೆಗಳು ಭೌತಿಕವಾಗಿ ಪ್ರಾರಂಭವಾಗುವವರೆಗೆ ಯುಕ್ತ ಪರ್ಯಾಯ ಮಾರ್ಗಗಳಲ್ಲಿ ತೊಡಗಿಸಬೇಕು ಎಂದು ಸೂಚಿಸಿದೆ.

    ವಿದ್ಯಾಗಮ ಯೋಜನೆ ಜಾರಿ
    ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಕುಸಿಯದಂತೆ ಎಲ್ಲ ಶಾಲೆ ವ್ಯಾಪ್ತಿಯಲ್ಲೂ ವಿದ್ಯಾಗಮ ಯೋಜನೆ ಜಾರಿಯಲ್ಲಿದೆ. ನೇರವಾಗಿ ಪಾಠ ಮಾಡುವುದು ಅಲ್ಲದಿದ್ದರೂ ಅವರ ಪಠ್ಯಕ್ರಮಕ್ಕೆ ಪೂರಕ ಅಂಶಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಕೆಲಸ ನಡೆಯುತ್ತಿದೆ. ಸೆ.21ರ ಬಳಿಕ ಏನು ಮಾಡಬೇಕು ಎಂಬ ಬಗ್ಗೆ ನಮಗೆ ಮಾರ್ಗಸೂಚಿ ಬಂದ ಬಳಿಕವಷ್ಟೇ ನಿರ್ಧರಿಸಬಹುದು ಎಂದು ಪ್ರಭಾರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ದಯಾವತಿ ತಿಳಿಸುತ್ತಾರೆ. ನಮಗೆ ಯಾವುದೇ ಮಾರ್ಗಸೂಚಿ ಬಂದಿಲ್ಲ, ಕಾಲೇಜು ಪ್ರಾರಂಭಿಸುವ ಬಗ್ಗೆ ಸ್ಟಾೃಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್‌ ರಾಜ್ಯಮಟ್ಟದಲ್ಲಿ ಇನ್ನೂ ಸಿದ್ಧಪಡಿಸಿಲ್ಲ. ಆ ಕಾರ್ಯ ನಡೆಯುತ್ತಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೊಹಮ್ಮದ್ ಇಮ್ತಿಯಾಜ್ ತಿಳಿಸಿದ್ದಾರೆ.

    ಪ್ರತಿ ಶಾಲಾ ವ್ಯಾಪ್ತಿಯಲ್ಲಿ ವಠಾರ ಶಾಲೆಗಳು ಈಗ ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಸರ್ಕಾರದ ನಿರ್ದೇಶನದಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾರ್ಗದರ್ಶನ, ತರಗತಿಗಳನ್ನು ನಡೆಸಲಾಗುತ್ತದೆ. ಹೈಸ್ಕೂಲ್ ಮಕ್ಕಳಿಗೆ ದೂರದರ್ಶನದಲ್ಲಿ ಪಾಠ ಮಾಡಲಾಗುತ್ತದೆ. ಇದರಲ್ಲಿ ನೀಡುವ ಹೋಂ ವರ್ಕ್ ವಠಾರ ಶಾಲೆಯಲ್ಲಿ ಪರಿಶೀಲಿಸುವ ಕಾರ್ಯವನ್ನು ಶಿಕ್ಷಕರು ಮಾಡುತ್ತಿದ್ದಾರೆ.
    – ಶೇಷಶಯನ ಕಾರಿಂಜ, ಡಿಡಿಪಿಐ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts