More

    ಖಾಕಿಗೆ ಗುಡ್‌ಬೈ, ಖಾದಿಗೆ ಜೈ ಹೇಳಲು ಪೊಲೀಸ್ ಅಧಿಕಾರಿ ರೆಡಿ

    ದಾವಣಗೆರೆ: ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾರೆಂದು ಪ್ರಶ್ನಿಸಿದರೆ ಇದುವರೆಗೆ ಕೇಳಿಬರುತ್ತಿದ್ದ ಏಕೈಕ ಹೆಸರು ಎಸ್.ವಿ.ರಾಮಚಂದ್ರ.

    ಹಾಲಿ ಶಾಸಕರಾಗಿರುವ ಎಸ್.ವಿ.ಆರ್ ಅವರನ್ನು ಬಿಟ್ಟರೆ ಬೇರೆ ಯಾರ ಹೆಸರೂ ಪ್ರಸ್ತಾಪ ಆಗಿರಲಿಲ್ಲ. ಕ್ಷೇತ್ರದ ಮೇಲೆ ಹಿಡಿತ ಸಾಧಿಸಿರುವ ಅವರೇ ಏಕಮೇವ ಅಭ್ಯರ್ಥಿ ಎಂದು ಹೇಳಲಾಗಿತ್ತು.

    ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಚಿತ್ರಣವೇ ಬದಲಾಗುತ್ತಿದ್ದು, ಪಕ್ಷದೊಳಗೇ ಅವರಿಗೊಬ್ಬ ಪ್ರತಿಸ್ಪರ್ಧಿ ಹುಟ್ಟಿಕೊಂಡಿರುವಂತಿದೆ. ಹಾಗಾದರೆ ಯಾರವರು? ಎಂಬ ಪ್ರಶ್ನೆ ಏಳುವುದು ಸಹಜ. ಆಸಕ್ತಿಕರ ವಿಚಾರ ಏನೆಂದರೆ ಅವರೊಬ್ಬ ಪೊಲೀಸ್ ಅಧಿಕಾರಿ!

    ಹೌದು, ಡಿವೈಎಸ್ಪಿ ದರ್ಜೆಯ ಈ ಅಧಿಕಾರಿ ಮೂಲತಃ ಜಗಳೂರು ತಾಲೂಕಿನವರೇ ಆಗಿದ್ದು ಈಗ ಅನ್ಯ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
    ಖಾಕಿಗೆ ಗುಡ್‌ಬೈ ಹೇಳಿ ಖಾಕಿಗೆ ಗುಡ್‌ಬೈ, ಖಾದಿಗೆ ಜೈ ಹೇಳಲು ಪೊಲೀಸ್ ಅಧಿಕಾರಿ ರೆಡಿಖಾದಿ ತೊಡಲು ಉತ್ಸುಕರಾಗಿರುವ ಅವರು ಜಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ತೋರಿದ್ದು ಈ ವಿಷಯವನ್ನು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ. ಇಂಥದೊಂದು ಮಾತು ತಾಲೂಕಿನಲ್ಲಿ ಗ್ರಾಸ ಚರ್ಚೆಯಲ್ಲಿದೆ. ಅವರು ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕಾರಣ ಪ್ರವೇಶ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿದೆ.

    ಆಪರೇಷನ್ ಕಮಲಕ್ಕೆ ಒಳಗಾಗಿ ಕಮಲ ಪಡೆಯನ್ನು ಸೇರಿಕೊಂಡ ರಾಮಚಂದ್ರ, ನಂತರದ ವರ್ಷಗಳಲ್ಲಿ ಬಿಜೆಪಿಯಲ್ಲೇ ಗಟ್ಟಿಯಾಗಿ ನೆಲೆ ನಿಂತಿದ್ದಾರೆ. ಬರದ ನಾಡು ಎಂಬ ಹಣೆಪಟ್ಟಿ ಕಳಚಿ ಹಸಿರು ಮೂಡಿಸಲು ಕೆರೆಗಳನ್ನು ತುಂಬಿಸುವ ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳ ಸಾಕಾರಕ್ಕೆ ಬೆನ್ನು ಹತ್ತಿದ್ದಾರೆ.

    ನೀರಾವರಿ ವಿಚಾರವನ್ನೇ ಮುಂದಿಟ್ಟುಕೊಂಡು ಮತ್ತೊಮ್ಮೆ ಜನರ ಬಳಿಗೆ ಹೋಗಲು ಸಿದ್ಧತೆ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಎಸ್‌ವಿಆರ್ ಅವರಿಗೆ ಆ ಕ್ಷೇತ್ರದಲ್ಲಿ (ಬಿಜೆಪಿಯಲ್ಲಿ) ಪರ್ಯಾಯವೇ ಇಲ್ಲ ಎಂದು ವಿಶ್ಲೇಷಿಸಲಾಗಿತ್ತು.

    ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ತಮ್ಮನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎಂದು ಅವರು ಮೈ ಮರೆಯುವಂತಿಲ್ಲ. ಪೊಲೀಸ್ ಅಧಿಕಾರಿಯೊಬ್ಬರು ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಆಸಕ್ತಿ ತೋರಿಸಿರುವುದು ಸಹಜವಾಗಿಯೇ ಆ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ.

    ಆದರೆ, ಹಾಲಿ ಶಾಸಕರನ್ನು ಹಿಂದಿಕ್ಕಿ ಟಿಕೆಟ್ ತರುವುದು ಅಷ್ಟು ಸುಲಭದ ಮಾತೇನೂ ಅಲ್ಲ. ಪಕ್ಷದಲ್ಲಿ ಅವರು ಯಾರ ಸಂಪರ್ಕದಲ್ಲಿದ್ದಾರೆ, ದೆಹಲಿ ವರಿಷ್ಠರಿಂದ ಭರವಸೆ ಸಿಕ್ಕಿದೆಯೇ? ಅಥವಾ ರಾಜ್ಯ ನಾಯಕರು ಹೇಳಿದ್ದಾರೆಯೇ? ಇಲ್ಲವೆ ಸಂಘ ಪರಿವಾರದ ನಂಟು ಏನಾದರೂ ಇದೆಯೇ? ಎಂಬ ಪ್ರಶ್ನೆಗಳು ಮೂಡುತ್ತಿವೆ. ಮುಂಬರುವ ದಿನಗಳಲ್ಲಿ ಏನೆಲ್ಲ ಬೆಳವಣಿಗೆ ಆಗಬಹುದು ಎಂಬುದನ್ನು ಕಾದು ನೋಡಬೇಕಿದೆ.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts