More

    ನೀರು ಉಳಿಸಿ ಮೂರನೇ ಮಹಾಯುದ್ಧ ತಪ್ಪಿಸಿ

    ಮೈಸೂರು: ಮೂರನೇ ಮಹಾಯುದ್ಧ ನಡೆದರೆ ಅದು ನೀರಿಗಾಗಿ ನಡೆಯುತ್ತದೆ ಎಂದು ಹಲವಾರು ವಿದ್ವಾಂಸರು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ನೀರಿನ ಮಹತ್ವ ಅರಿತು ನೀರನ್ನು ಉಳಿಸಲು ಪ್ರತಿಯೊಬ್ಬರು ಪ್ರಯತ್ನಿಸಬೇಕು ಎಂದು ರೋಟರಿ ಮಾಜಿ ಜಿಲ್ಲಾ ಗೌರ‌್ನರ್ ಜಿ.ಕೆ. ಬಾಲಕೃಷ್ಣನ್ ಮನವಿ ಮಾಡಿದರು.

    ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್‌ ವತಿಯಿಂದ ಶುಕ್ರವಾರ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ವಿಶ್ವ ಜಲದಿನದ ಅಂಗವಾಗಿ ‘ಶಾಂತಿಗಾಗಿ ನೀರು’ ವಿಷಯದ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯ ಅಹಾರ ಇಲ್ಲದೆ ಹಲವು ದಿನಗಳ ಕಾಲ ಬದುಕಬಲ್ಲ. ಆದರೆ, ನೀರು ಇಲ್ಲದೆ ಹೆಚ್ಚು ದಿನ ಬದುಕಲು ಸಾಧ್ಯವಿಲ್ಲ. ಹಾಗಾಗಿ ನೀರಿನ ಮಹತ್ವ ಅರಿತು ನೀರನ್ನು ಉಳಿಸಲು ಪ್ರಯತ್ನಿಸಬೇಕು ಎಂದರು.

    ನೀರನ್ನು ಸಂಗ್ರಹಣೆ ಹಾಗೂ ಸಂರಕ್ಷಣೆ ಮಾಡುವ ತುರ್ತು ಅಗತ್ಯತೆ ಪ್ರಸ್ತುತ ನಿರ್ಮಾಣವಾಗಿದೆ. ಕರ್ನಾಟಕ ಹಾಗೂ ತಮಿಳುನಾಡು ನಡುವೆ ನೀರಿಗಾಗಿ ವ್ಯಾಜ್ಯ ನಡೆಯುತ್ತಲೇ ಇದ್ದು, ಈ ವ್ಯಾಜ್ಯ ಎಂದೆಂದಿಗೂ ಮುಗಿಯುವುದಿಲ್ಲ. ಪ್ರತಿಯೊಬ್ಬರು ನೀರನ್ನು ಹಿತಮಿತ ವಾಗಿ ಬಳಸಿ ಅಂತರ್ಜಲ ಪ್ರಮಾಣ ಹೆಚ್ಚಿಸಲು ಕೊಡುಗೆ ನೀಡಿದರೆ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ನೀರು ನಮ್ಮ ದೈನಂದಿನ ಬಳಕೆ, ಕೈಗಾರಿಕೆ ಹಾಗೂ ಕೃಷಿ ಚಟುವಟಿಕೆಗೆ ಹೆಚ್ಚಾಗಿ ಬಳಕೆಯಾಗುತ್ತಿದೆ. ಹಾಗಾಗಿ ನೀರನ್ನು ಹಿತಮಿತವಾಗಿ ಬಳಸುವ ಕಾರ್ಯ ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು. ಪ್ರತಿಯೊಬ್ಬರಲ್ಲಿ ನೀರನ್ನು ಮಿತವಾಗಿ ಬಳಸುವ ಜಾಗೃತಿ ಮೂಡಿದಾಗ ಮಾತ್ರ ಅಮೂಲ್ಯವಾದ ನೀರು ಎಲ್ಲರಿಗೂ ಸಾಕಷ್ಟು ಪ್ರಮಾಣದಲ್ಲಿ ದೊರಕಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

    ವಿಶ್ವದಲ್ಲಿರುವ ಒಟ್ಟು ನೀರಿನಲ್ಲಿ ಶೇ.3 ರಷ್ಟು ನೀರು ಮಾತ್ರ ಬೇಸಾಯ ಹಾಗೂ ಕುಡಿಯುವ ನೀರಿಗೆ ಲಭ್ಯವಿದೆ. ಈ ಪೈಕಿ ಶೇ.1 ರಷ್ಟು ನೀರು ಮಾತ್ರ ಕುಡಿಯಲು ಬಳಕೆಯಾಗುತ್ತಿದೆ. ಈ ನೀರು ಸಹ ನಗರೀಕರಣ, ಕೈಗಾರೀಕರಣದ ಪರಿಣಾಮ ಕಲುಷಿತಗೊಳ್ಳುತ್ತಿದೆ. ವಿಶ್ವದಲ್ಲಿ 700 ಮಿಲಿಯನ್ ಜನರಿಗೆ ಶುದ್ಧವಾದ ಕುಡಿಯುವ ನೀರು ದೊರೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

    ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಕಾರ್ನ್ ವಾಲೀಸ್ ‘ಥೌಸಂಡ್ ಲೇಕ್‌ಸಿಟಿ ಇನ್ ಇಂಡಿಯಾ’ ಕೃತಿ ರಚಿಸಿದ್ದರು. ಆ ಕೃತಿಯಲ್ಲಿ ಉಲ್ಲೇಖಿಸಿರುವ ‘ಲೇಕ್‌ಸಿಟಿ’ ಬೇರಾವುದಲ್ಲ, ನಮ್ಮ ಬೆಂಗಳೂರು. ಆದರೆ, ನಗರೀಕರಣದ ಪರಿಣಾಮ ಬೆಂಗಳೂರಿನ ಕೆರೆಗಳೆಲ್ಲ ನಾಶವಾಗಿದ್ದು, ಬೆಂಗಳೂರು ನಿವಾಸಿಗಳು ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಕೆರೆಗಳನ್ನು ನಾಶ ಮಾಡಿದ ಪರಿಣಾಮದಿಂದ ಇಂಥ ಸಮಸ್ಯೆ ಎದುರಾಗಿದೆ ಎಂದರು.

    ದಕ್ಷಿಣ ಏಷ್ಯಾದ ನದಿಗಳಿಗೆ ಹೋಲಿಕೆ ಮಾಡಿದರೆ ವಿಶ್ವದ ಉಳಿದ ನದಿಗಳ ಕಲುಷಿತ ಪ್ರಮಾಣ ತೀರಾ ಕಡಿಮೆ ಇದೆ. 6 ಸಾವಿರ ಕಿ.ಮೀ. ಹರಿಯುವ ಅಮೇಜಾನ್, ನೈಲ್‌ನದಿ ಸೇರಿದಂತೆ ವಿಶ್ವದ ಹಲವು ದೊಡ್ಡ ಹಾಗೂ ಉದ್ದನೆಯ ನದಿಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಲುಷಿತಗೊಂಡಿದೆ. ಅಲ್ಲಿನ ಜನರಲ್ಲಿ ಇರುವ ಜಾಗೃತಿಯೇ ಅದಕ್ಕೆ ಪ್ರಮುಖ ಕಾರಣ. ನಮ್ಮಲ್ಲಿ ಜಾಗೃತಿಯ ಕೊರತೆಯಿಂದ ನದಿಗಳು ದೊಡ್ಡ ಪ್ರಮಾಣದಲ್ಲಿ ಕಲುಷಿತಗೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ವೇದಿಕೆಯಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್‌ ಮಾಜಿ ಅಧ್ಯಕ್ಷ ಬಿ.ಎಸ್. ಪ್ರಭಾಕರ್, ಕಾರ್ಯದರ್ಶಿ ಡಾ.ಎಸ್.ಎ. ಮೋಹನ್ ಕೃಷ್ಣ, ಕಾರ್ಯಕ್ರಮ ಸಂಯೋಜಕ ಎನ್.ಎಸ್. ಮಹದೇವಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts