More

    ಎಚ್‌ಡಿಕೆ, ಸಿದ್ದು ವಿರುದ್ಧ ಗೃಹ ಸಚಿವ ಗರಂ

    ಶಿವಮೊಗ್ಗ: ಮೈಸೂರಿನ ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಆರ್‌ಎಸ್‌ಎಸ್ ವಿಚಾರದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗಳ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಗರಂ ಆಗಿದ್ದಾರೆ.
    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿಯನ್ನು ಬಂಧಿಸಿ ಆತನ ಮೇಲಿರುವ ಎಲ್ಲ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಲು ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ ಎಂದರು.
    ಸ್ಯಾಂಟ್ರೋ ರವಿ ಹಿನ್ನೆಲೆ, ಆತನ ಮೇಲೆ ಯಾರಾದರೂ ದೂರು ಕೊಟ್ಟಿದ್ದರೆ, ವಿಚಾರಣೆ ನಡೆಸುವಂತೆ ಸೂಚನೆ ನೀಡಿದ್ದೇನೆ. ಈ ಹಿಂದೆ ಆತನ ಮೇಲೆ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿತ್ತು. ಈಗ ತಕ್ಷಣ ಆತನನ್ನು ಬಂಧಿಸಿ ಕ್ರಮ ಜರುಗಿಸಲು ಸೂಚನೆ ನೀಡಲಾಗಿದೆ ಎಂದರು.
    ಕುಮಾರ ಕೃಪದಲ್ಲಿ ಸ್ಯಾಂಟ್ರೋ ರವಿಗೆ ಸಚಿವ ಬಿ.ಸಿ.ಪಾಟೀಲ ಅವರು ಅವಕಾಶ ಮಾಡಿಕೊಟ್ಟಿದ್ದಾರೆಂಬ ಎಚ್‌ಡಿಕೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, ಸ್ಯಾಂಟ್ರೋ ರವಿ ಕಳೆದ 20 ವರ್ಷಗಳಿಂದ ಹಲವು ರಾಜಕಾರಣಿಗಳ ಜತೆ ಸಂಬಂಧ ಇಟ್ಟುಕೊಂಡಿದ್ದ ಎಂಬ ಮಾಹಿತಿ ಇದೆ. ಕುಮಾರಸ್ವಾಮಿ ಅವರ ಜತೆಗೂ ಸ್ಯಾಂಟ್ರೋ ರವಿಯದು ಯಾವ ರೀತಿ ಸಂಬಂಧ ಎಂಬುದರ ಬಗ್ಗೆ ಯೋಚನೆ ಮಾಡಬೇಕಿದೆ ಎಂದು ಹೇಳಿದರು.
    ಎಚ್‌ಡಿಕೆಗೆ ಮಾತ್ರ ಆಡಿಯೋ, ಫೋಟೋ ಹೇಗೆ ಸಿಗುತ್ತದೆ ಎಂಬ ಬಗ್ಗೆ ಯೋಚಿಸಬೇಕಿದೆ. ಸ್ಯಾಂಟ್ರೋ ರವಿಯ ವಿರುದ್ಧದ ತನಿಖೆಗೆ ಎಚ್‌ಡಿಕೆ ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು. ಆರೋಪ ಸಾಬೀತಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
    ರಾಜಕಾರಣದ ಗೌರವ ತಗ್ಗಿಸಿದ ಸಿದ್ದು: ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದ ಗೌರವವನ್ನು ತಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದಕ್ಕೂ ಬೆಲೆ ಇಲ್ಲದಂತೆ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಿಎಂ ಆಗಿದ್ದ ವ್ಯಕ್ತಿ ಕೀಳುಮಟ್ಟದ ರಾಜಕಾರಣಕ್ಕೆ ಇಳಿಯುತ್ತಿದ್ದಾರೆ. ಇದನ್ನು ಜನ ಯೋಚನೆ ಮಾಡಬೇಕಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದರು. ಯಾರ ಬಗ್ಗೆ, ಯಾವ ರೀತಿ ಮಾತನಾಡಬೇಕೆಂಬ ಸಂಸ್ಕೃತಿಯೇ ಇಲ್ಲದ ವ್ಯಕ್ತಿ ಸಿದ್ದರಾಮಯ್ಯ. ಅವರಿಗೆ ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡುವುದರಿಂದ ಅಲ್ಪಸಂಖ್ಯಾತರ ಮತ ಪಡೆಯಬಹುದು ಎಂಬ ಕಲ್ಪನೆಯಿಂದ ಆ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು. ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ತೆಗಳಿದರೆ ಒಂದು ಕೋಮಿನ ಮತ ಭದ್ರವಾಗಲಿದೆ ಎಂಬ ಮನೋಭಾವನೆ ಅವರಲ್ಲಿದೆ. ಹಾಗಾಗಿ ಆರ್‌ಎಸ್‌ಎಸ್ ವಿರುದ್ಧ ಆರೋಪಿಸುತ್ತಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts