More

    ಸಂಕ್ರಮಣದ ಭೋಗಿ ತಿಂದವ ನಿರೋಗಿ

    ವಿಜಯಪುರ: ಬರ‌್ರಿ. ಅಕ್ಕೋರ, ಬರ‌್ರಿ.. ಅಣ್ಣಾವ್ರ.. ಭೋಗಿ ಪಲ್ಲೆ ತಗೋರಿ. ಭೋಗಿ ಪಲ್ಲೆ ತಿಂದು ನಿರೋಗಿಯಾಗಿರಿ…!
    ಹೌದು. ಸಂಕ್ರಮಣದ ಮುನ್ನದಿನವಾದ ಸೋಮವಾರ (ಜ.13) ರಂದು ನಗರದ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಮಿಶ್ರ ತರಕಾರಿ ಮಾರಾಟ ಮಾಡುತ್ತ ಗ್ರಾಹಕರನ್ನು ಕೈಬೀಸಿ ಕರೆಯುವ ದೃಶ್ಯಗಳು ಸಾಮಾನ್ಯವಾಗಿದ್ದವು.
    ಸಂಕ್ರಾಂತಿ ಹಬ್ಬ ರೈತರ ಪಾಲಿಗೆ ಸಮೃದ್ಧಿ ಸಂಕೇತ. ರೈತ ತನ್ನ ಹೊಲಗಳಲ್ಲಿ ಬೆಳೆದ ಧಾನ್ಯಗಳನ್ನು ಬೇಯಿಸಿ ಕುಲದೇವರಿಗೆ ಅರ್ಪಿಸಿ, ಬಂಧುಗಳೊಂದಿಗೆ ಸವಿಯುವ ಹಬ್ಬವಾಗಿದೆ. ಸೂರ್ಯ ತನ್ನ ಸಂಚಾರ ಪಥ ಬದಲಿಸುವ ಈ ಪುಣ್ಯ ಕಾಲದಲ್ಲಿ ಜೀವಿಯ ದೇಹದಲ್ಲಾಗುವ ಏರುಪೇರಿಗಳನ್ನು ಸರಿದೂಗಿಸಲು ಎಳ್ಳು, ಬೆಲ್ಲ, ಶೇಂಗಾ, ಸಜ್ಜೆಯಿಂದ ಮಾಡಿದ ಪದಾರ್ಥಗಳನ್ನು ಸೇವಿಸುವ ಈ ಹಬ್ಬ ವೈಜ್ಞಾನಿಕ ಮಹತ್ವವನ್ನೂ ಪಡೆದಿದೆ.

    ಸಜ್ಜಿ ರೊಟ್ಟಿ, ಶೇಂಗಾ ಹೋಳಿಗೆ ತಯಾರಿ

    ಸಂಕ್ರಮಣಕ್ಕೂ ಮುನ್ನ ವಾರದಿಂದ ಹೆಂಗಳೆಯರು ತೆಳ್ಳನೆಯ ಸಜ್ಜೆ ರೊಟ್ಟಿ, ಶೇಂಗಾ ಹೋಳಿಗೆ ಮಾಡಲು ಮುಂದಾಗಿರುತ್ತಾರೆ. ತೆಳ್ಳನೆ ರೊಟ್ಟಿಗೆ ಕರಿ-ಬಿಳಿ ಎಳ್ಳು ಹೆಚ್ಚಿ ಮಾಡಿದ ರಾಶಿ ರಾಶಿ ರೊಟ್ಟಿಗಳನ್ನು ತಾಯಂದಿರು ಮನೆ ಮೂಲೆಯಲ್ಲಿ ಸೀರೆಯಿಂದ ಜೋಳಿಗೆ ಕಟ್ಟಿ ಅದರಲ್ಲಿ ಸಂಗ್ರಹಿಸಿರುತ್ತಾರೆ.

    ಥರೇವಾರಿ ಚಟ್ನಿಗಳು ಸಿದ್ಧ

    ಸಂಕ್ರಮಣ ಭೋಗಿಗೆಂದೇ ಮನೆಯಲ್ಲಿ ಕಾರಳ್ಳ ಚಟ್ನಿ, ಗುರೆಳ್ಳ ಚಟ್ನಿ, ಶೇಂಗಾ ಚಟ್ನಿ, ಅಗಸಿ ಚಟ್ನಿಗಳನ್ನು ತಾಯಂದಿರು ತಯಾರು ಮಾಡಿರುತ್ತಾರೆ. ಕೆನೆಮೊಸರಿನೊಂದಿಗೆ ಈ ಚಟ್ನಿ ಬೆರೆಸಿ ತೆಳ್ಳನೆ ಸಜ್ಜೆ ರೊಟ್ಟಿಯೊಂದಿಗೆ ಸವಿಯುವುದೇ ಸಂಭ್ರಮ.

    ಭೋಗಿ ಪಲ್ಯ

    ಭೋಗಿಗಾಗಿ ನಗರದ ತರಕಾರಿ ಮಾರುಕಟ್ಟೆಯಲ್ಲಿ ಭೋಗಿ ಪಲ್ಯ ದೊರೆಯುತ್ತದೆ. ತರಕಾರಿ ವ್ಯಾಪಾರಿಗಳು ಸವತಿಕಾಯಿ, ಹಿರಿಕಾಯಿ, ಬೆಂಡೆಕಾಯಿ, ಹಾಗಲಕಾಯಿ, ಬದನೆಕಾಯಿ, ಪಡವಲಕಾಯಿ, ನುಗ್ಗೆಕಾಯಿ, ಆಲುಗಡ್ಡೆ, ಹೂಕೋಸು, ಎಲೆಕೋಸು, ಮೆಂತೆ, ಸಬ್ಬಸಗಿ, ರಾಜಗಿರಿ, ಕಿರಸಾಲಿ,ಕೋತಂಬರಿ, ಟ್ಯೊಮೆಟೋ, ಮೂಲಂಗಿ, ಗಜ್ಜರಿ, ಹಸಿ ಮೆಣಸಿನಕಾಯಿ, ಡೊಣ್ಣ ಮೆಣಸಿನಕಾಯಿ, ಮಡಿಕೆ ಕಾಳು (ಉಸುಳಿ), ಕಡಲೆ, ಒಠಾಣಿ, ಅಲಸಂದಿ, ಹಸಿ ಶೇಂಗಾ ಸೇರಿದಂತೆ ಮತ್ತಿತರ ತರಕಾರಿಗಳ ಕತ್ತರಿಸಿ ಮಿಶ್ರಣ ಮಾಡಿ ಮಾರಾಟ ಮಾಡುತ್ತಾರೆ.

    ಭೋಗಿ ಸಂಭ್ರಮ

    ಸಂಕ್ರಮಣದ ಮೊದಲ ದಿನ ಮಂಗಳವಾರ (ಜ.14)ದಂದು ಭೋಗಿಯಂದು ಈ ಮಿಶ್ರ ತರಕಾರಿಯನ್ನು ತಂದು ಕುಟುಂಬ ಹಾಗೂ ಬಂಧುಬಾಂಧವರೊಂದಿಗೆ ಸೇವಿಸುವಾಗ ಸ್ವರ್ಗಕ್ಕೆ ಮೂರೆ ಗೇಣು ಎಂಬ ಅನುಭವವಾಗುತ್ತದೆ.

    ಭಾರತೀಯ ಜಾತ್ರೆಗಳು ಋತುಮಾನಕ್ಕೆ ತಕ್ಕಂತೆ ಆಚರಿಸಲಾಗುತ್ತದೆ. ಆ ನಿಟ್ಟಿನಲ್ಲಿ ಸಂಕ್ರಮಣವೂ ಒಂದು. ಈ ಕಾಲದಲ್ಲಿ ಶರೀರದಲ್ಲಾಗುವ ಬದಲಾವಣೆಗಳನ್ನು ಕಾಪಾಡಲು ಸಜ್ಜೆ, ಶೇಂಗಾ, ಎಳ್ಳು-ಬೆಲ್ಲ ತಿನ್ನುವುದು ವಾಡಿಕೆ. ಅದೇನೆ ಆಗಲಿ ಬಂಧುಗಳನ್ನು ಒಟ್ಟಿಗೆ ಸೇರಿಸಲೂ ಹಬ್ಬಗಳ ಆಚರಣೆಗೆ ಹೆಚ್ಚಿನ ವಿಶೇಷತೆ ಕೊಡಲಾಗಿದೆ.
    ರಾಜೇಂದ್ರ ಬಿರಾದಾರ, ಯುವ ಸಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts