Naanu Karunakara Review - "ಅ'ಸಹಾಯಕ ನಿರ್ದೇಶಕ 'ಕರುಣಾ'ಜನಕ ಕಥೆ

ನಾನು ಕರುಣಾಕರ
ನಾನು ಕರುಣಾಕರ
Published on
ಚಿತ್ರ: ನಾನು ಕರುಣಾಕರ
ನಿರ್ದೇಶನ: ಆರ್ಯನ್​ ತೇಜಸ್​
ತಾರಾಗಣ: ಆರ್ಯನ್​ ತೇಜಸ್​, ರಾಧಾ ಭಗವತಿ, ಕರಿಸುಬ್ಬು, ಮಾ. ಭವಿಷ್​, ಎಂ.ಕೆ.ಮಠ, ಅಪೂರ್ವಶ್ರೀ ಮತ್ತಿತರರು
ಸಿನಿಮಾ ಕುರಿತ ಸಿನಿಮಾಗಳು ಆಗಾಗ ಬರುತ್ತಿರುತ್ತವೆ. ಆದರೆ, ಚಿತ್ರರಂಗದಲ್ಲಿ ಕೆಲಸ ಮಾಡುವವರ ವೈಯಕ್ತಿಕ ಜೀವನ, ಸುಖ-ದುಃಖಗಳ ಬಗ್ಗೆ ಬೆಳಕು ಚೆಲ್ಲಿರುವ ಚಿತ್ರಗಳು ಕಡಿಮೆ. "ನಾನು ಕರುಣಾಕರ' ಮೂಲಕ ಈ ಕಲರ್​ಫುಲ್​​ ಕ್ಷೇತ್ರದಲ್ಲಿ ಕೆಲಸ ಮಾಡುವವರ ಬ್ಲ್ಯಾಕ್​​ ಆ್ಯಂಡ್​ ವೈಟ್​ ಬದುಕಿನ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಆರ್ಯನ್​ ತೇಜಸ್​. ಹಾಗಂತ ಇದು ಕೇವಲ ಚಿತ್ರರಂಗದವರಿಗಷ್ಟೇ ಅಲ್ಲದೇ, ಎಲ್ಲ ಬಡ, ಮಧ್ಯಮವರ್ಗದ ಸಾಮಾನ್ಯ ಜನರಿಗೆ ಕನೆಕ್ಟ್​ ಆಗುವ ಕಥೆ.
ಕರುಣಾಕರನದು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನ ಕೆಲಸ. ಸಿನಿಮಾನೇ ಉಸಿರುವ ಅಂತ ಬದುಕುವಾತನಿಗೆ ಪತ್ನಿ ಮಮತಾ (ರಾಧಾ) ಮತ್ತು ಮಗ ಅಪ್ಪುನೇ (ಭವಿಷ್​) ಪ್ರಪಂಚ. ಶೂಟಿಂಗ್​ ಇದ್ದಾಗ ಕೆಲಸ, ದುಡ್ಡು. ಇಲ್ಲದಿದ್ದಾಗ ಖಾಲಿ ಕೈ. ಹೀಗಾಗಿಯೇ ಹೊಸ ಹೊಸ ಕಥೆ ಬರೆಯುವುದು, ನಿರ್ಮಾಪಕರನ್ನು ಹುಡುಕುವುದರ ಜತೆಗೆ ಪೇಂಟಿಂಗ್​ ಕೆಲಸ ಕೂಡ ಮಾಡುತ್ತಿರುತ್ತಾನೆ. ಅದರ ನಡುವೆಯೇ ಅಪ್ಪು, ಅಪ್ಪನ ಬಳಿ ಕಾರು ಕೇಳುತ್ತಾನೆ. ಮಗ ಆಸೆಪಟ್ಟು ಕೇಳಿದ ಕಾರಿಗೆ ₹50 ಸಾವಿರ ಬೆಲೆ. ಆ ಹಣ ಹೊಂದಿಸಲು ಹೋರಾಡುತ್ತಿರುವಾಗಲೇ, ಕರುಣಾಕರ ಹೇಳುವ ಕಥೆ ಓಕೆ ಆಗುತ್ತದೆ. ಆದರೆ, ಕರುಣಾಕರನಿಗೆ ಕೆಲಸ ಕೊಟ್ಟ ನಿರ್ದೇಶಕನಿಗೆ ಅದನ್ನು ಸಹಿಸಲಾಗುವುದಿಲ್ಲ. ಚಪ್ಪಲಿಯಲ್ಲಿ ಹೊಡೆದು ತಂಡದಿಂದ ಹೊರಗಿಡುತ್ತಾನೆ. ಮುಂದೆ? ಆ ಕರುಣಾಕರ ನಿರ್ದೇಶಕನಾಗುತ್ತಾನಾ? ಅಪ್ಪನ ಸಿನಿಮಾ ಕನಸು, ಮಗನ ಕಾರಿನ ಕನಸು ನೆರವೇರುತ್ತಾ? "ನಾನು ಕರುಣಾಕರ'ನ ಕಥೆ-ವ್ಯಥೆ ನೋಡಿ.
ತೆರೆಯ ಹಿಂದೆ ಕೆಲಸ ಮಾಡುವವರ ವೃತ್ತೀಜಿವನ ಹಾಗೂ ವೈಯಕ್ತಿಕ ಜೀವನಗಳ ದೈನಂದಿನ ಹೋರಾಟಗಳ ನಡುವಿನ ಭಾವನಾತ್ಮಕ ಬದುಕನ್ನು "ನಾನು ಕರುಣಾಕರ' ಚಿತ್ರದಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಆರ್ಯನ್​ ತೇಜಸ್​. ಜತೆಗೆ ಕರುಣಾಜನಕ ಕರುಣಾಕರನಾಗಿ ಪಾತ್ರವನ್ನು ಜೀವಿಸಿದ್ದಾರೆ. ಇನ್ನು ರಾಧಾ ಭಗವತಿ ಚಿನಕುರಳಿ ಪಟಪಟ ಸಿಡಿದಂತೆ ಮಮತಾ ಪಾತ್ರದಲ್ಲಿ ರಾಧಾ ಗಮನ ಸೆಳೆಯುತ್ತಾರೆ. ಉಳಿದಂತೆ ಮಾ. ಭವಿಷ್​, ಕರಿಸುಬ್ಬು, ಅಪೂರ್ವಶ್ರೀ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಹಾಡುಗಳು ಸಹ ಚಿತ್ರಕ್ಕೆ ಪೂರಕವಾಗಿವೆ. ಸಿನಿಮಾ ನೋಡುವಾಗ ಹಲವರಿಗೆ ಹಲವು ರೀತಿ ಕನೆಕ್ಟ್​ ಆಗಬಹುದು. ಹೀಗಾಗಿ "ನಾನು ಕರುಣಾಕರ' ಚಿತ್ರವನ್ನು ಒಮ್ಮೆ ನೋಡಲಡ್ಡಿಯಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net