OTT Release New Rules - ದಕ್ಷಿಣಕ್ಕೂ ಬಂತು ಎಂಟರ ನಂಟು

ಒಟಿಟಿ ರಿಲೀಸ್​
ಒಟಿಟಿ ರಿಲೀಸ್​
Published on
Ott Release Rules -
* "ಸು ಫ್ರಮ್​ ಸೋ' - ಥಿಯೇಟರ್​ಗಳಲ್ಲಿ ಬಿಡುಗಡೆಯಾಗಿದ್ದು 2025ರ ಜು. 25. ಒಟಿಟಿಯಲ್ಲಿ ರಿಲೀಸ್​ ಆಗಿದ್ದು 2025ರ ಸೆ. 9ರಂದು. ಥಿಯೇಟರ್​ಗಳಲ್ಲಿ ರಿಲೀಸ್​ ಆದ ಕೇವಲ ಆರು ವಾರಗಳಲ್ಲಿ ಒಟಿಟಿಯಲ್ಲಿ ಬಿಡುಗಡೆ.
* "ಕಾಂತಾರ ಅಧ್ಯಾಯ 1' - ಥಿಯೇಟರ್​ಗಳಲ್ಲಿ ಬಿಡುಗಡೆಯಾಗಿದ್ದು 2025ರ ಅ. 1ರಂದು. ಅದಾಗಿ ಕೇವಲ ನಾಲ್ಕು ವಾರಗಳಲ್ಲಿ ಅರ್ಥಾತ್​ ಅ. 31ರಂದು ಒಟಿಟಿಯಲ್ಲಿ ರಿಲೀಸ್​.
* "ಮಾರ್ಕ್​' - 2025ರ ಡಿ. 25ರಂದು ಥಿಯೇಟರ್​ಗಳಲ್ಲಿ ರಿಲೀಸ್​ ಆದ ಚಿತ್ರ, ಕೇವಲ ನಾಲ್ಕು ವಾರಗಳಲ್ಲಿ ಅರ್ಥಾತ್​ 2026ರ ಜ. 23ರಂದು ಒಟಿಟಿಯಲ್ಲಿ ಬಿಡುಗಡೆಯಾಗಿತ್ತು.
* "45' - ಬಹುತಾರಾಗಣ ಸಿನಿಮಾ "45' ಕೂಡ 2025ರ ಡಿ. 25ರಂದು ರಿಲೀಸ್​ ಆಗಿ "ಮಾರ್ಕ್​' ಜತೆ ಬಾಕ್ಸಾಫಿಸಿನಲ್ಲಿ ನೇರ ಹಣಾಹಣಿ ನಡೆಸಿತ್ತು. ನಂತರ 2026ರ ಜ. 23ರಂದು "ಮಾರ್ಕ್​' ಒಟಿಟಿಯಲ್ಲಿ ಬಿಡುಗಡೆಯಾದ ದಿನವೇ "45' ಕೂಡ ಒಟಿಟಿಗೆ ಎಂಟ್ರಿ ಕೊಟ್ಟು, ಅಲ್ಲೂ ನೇರ ಸ್ಪರ್ಧೆ ನಡೆಸಿತ್ತು.

ಎಲ್ಲ ಭಾಷೆಗಳಲ್ಲೂ ಇದೇ ಸಮಸ್ಯೆ

ಹೀಗೆ ಕನ್ನಡದ ಕೆಲ ಹಿಟ್​ ಚಿತ್ರಗಳು, ಥಿಯೇಟರ್​ಗಳಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಯಲ್ಲಿ ಬಿಡುಗಡೆಯಾದ ಕಾರಣ, ಥಿಯೇಟರ್​ಗಳಿಗೆ ಜನ ಬಾರದೇ ಪ್ರದರ್ಶಕರಿಗೆ ನಷ್ಟ ಉಂಟಾಗಿತ್ತು. ಇದು ಕನ್ನಡ ಮಾತ್ರವಲ್ಲ ತೆಲುಗು ("ಮನಶಂಕರ ವರಪ್ರಸಾದ ಗಾರು, "ಅನಗನಗಾ ಒಕ ರಾಜು' ಚಿತ್ರಗಳನ್ನು ಥಿಯೇಟರ್​ಗಳಲ್ಲಿ ರಿಲೀಸ್​ ಆದ ಕೇವಲ ನಾಲ್ಕು ವಾರಗಳಲ್ಲಿ ಒಟಿಟಿಯಲ್ಲಿ ಬಿಡುಗಡೆ), ತಮಿಳು ("ಕಂಗುವ', "ಅಮರನ್​', "ಮಹಾರಾಜ', "ಕ್ಯಾಪ್ಟನ್​ ಮಿಲ್ಲರ್​' ಸೇರಿ ಹಲವು ಚಿತ್ರಗಳು ಕೇವಲ ನಾಲ್ಕರಿಂದ ಐದು ವಾರಗಳಲ್ಲಿ ಒಟಿಟಿಯಲ್ಲಿ ಬಿಡುಗಡೆ), ಮಲಯಾಳಂ ("ಆವೇಶಂ', "ಕೊಂಡಲ್​', "ಗುರುವಾಯೂರಂಬಲ ನದಯಿಲ್​' ಸೇರಿ ಹಲವು ಚಿತ್ರಗಳು ಅತಿ ಕಡಿಮೆ ಅವಧಿಯಲ್ಲಿ ಒಟಿಟಿಯಲ್ಲಿ ರಿಲೀಸ್​), ಮರಾಠಿ ಚಿತ್ರರಂಗಗಳಲ್ಲೂ ಸಾಮಾನ್ಯ ಸಮಸ್ಯೆಯಾಗಿತ್ತು.

ಎಂಟು ವಾರ ನಿಗದಿ

ಹೀಗಾಗಿಯೇ ಇತ್ತೀಚೆಗಷ್ಟೆ ಈ ಬಗ್ಗೆ ಕರ್ನಾಟಕ, ತಮಿಳು ನಾಡು, ಮಹಾರಾಷ್ಟ್ರ, ಕೇರಳ, ತೆಲಂಗಾಣ, ಆಂಧ್ರಪ್ರದೇಶದ ಪ್ರದರ್ಶಕರ ಸಂಗಳ ಪ್ರತಿನಿಧಿಗಳು ಬೆಂಗಳೂರಿನಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ದಣ ಭಾರತ ಥಿಯೇಟರ್​ ಮಾಲೀಕರ ಸಂದ ಸದಸ್ಯರು, ಬಾಲಿವುಡ್​ನಲ್ಲಿ ಇರುವಂತೆ ಎಂಟು ವಾರಗಳ ಮಿತಿಯನ್ನು ದಣದ ರಾಜ್ಯಗಳಲ್ಲೂ ಜಾರಿಗೆ ತರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರದರ್ಶಕರ ವಲಯದ ಉಪಾಧ್ಯಕ್ಷ ಕಿಶೋರ್​ ಕುಮಾರ್​, "ಥಿಯೇಟಟ್ರಿಕಲ್​ ರಿಲೀಸ್​ ಮತ್ತು ಒಟಿಟಿ ರಿಲೀಸ್​ ನಡುವೆ ಕಾಲಮಿತಿ ಇಲ್ಲದ ಕಾರಣ ಕಡಿಮೆ ಅವಧಿಯಲ್ಲೇ ಒಟಿಟಿಯಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಲಾಗುತ್ತಿತ್ತು. ಇದರಿಂದ ಥಿಯೇಟರ್​ ಮಾಲೀಕರಿಗೆ ನಷ್ಟ ಉಂಟಾಗುತ್ತಿತ್ತು. ಹೀಗಾಗಿಯೇ ಸಭೆ ನಡೆಸಿ 8 ವಾರಗಳ ಕಾಲಮಿತಿ ಕಡ್ಡಾಯಗೊಳಿಸಲು ನಿರ್ಧರಿಸಿದ್ದೇವೆ. ಏಪ್ರಿಲ್​ 1ರಿಂದ ಒಪ್ಪಂದ ಆಗಲಿರುವ ಸಿನಿಮಾಗಳಿಗೆ ಇದು ಅನ್ವಯವಾಗಲಿದ್ದು, ಈಗಾಗಲೇ ಒಟಿಟಿಗಳೊಂದಿಗೆ ಒಪ್ಪಂದ ಆಗಿರುವ ಚಿತ್ರಗಳಿಗೆ ಇದು ಅನ್ವಯಿಸುವುದಿಲ್ಲ. ಈ ಬಗ್ಗೆ ನಿರ್ಮಾಪಕರು ಮತ್ತು ಒಟಿಟಿ ಮುಖ್ಯಸ್ಥರ ಗಮನಕ್ಕೆ ತಂದು, ಏಪ್ರಿಲ್​ನಿಂದ ಕಡ್ಡಾಯವಾಗಿ ಜಾರಿ ಮಾಡಲಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ.

ಕರೊನಾ ನಂತರ ಬದಲಾಗಿರುವ ಚಿತ್ರಣ

ಕರೊನಾ ಸಮಯದಲ್ಲಿ ಥಿಯೇಟರ್​ಗಳು ಬಂದ್​ ಆಗಿದ್ದ ಕಾರಣ ಒಟಿಟಿ ಮತ್ತು ಸಾಮಾಜಿಕ ಜಾಲತಾಣಗಳತ್ತ ಜನ ಹೆಚ್ಚು ಗಮನ ಹರಿಸಿದ್ದಾರೆ. ಹೀಗಾಗಿಯೇ ಕರೊನಾ ಸಮಯದಲ್ಲಿ ತಿಂಗಳುಗಟ್ಟಲೆ ಬಾಗಿಲು ಮುಚ್ಚಿದ್ದ ಹಲವು ಥಿಯೇಟರ್​ಗಳು ಮತ್ತೆ ಬಾಗಿಲು ತೆರೆದಿಲ್ಲ. ಅದರ ನಡುವೆ ಕೆಲ ಉತ್ತಮ ಸಿನಿಮಾಗಳು ಜನರನ್ನು ಕೈಬೀಸಿ ಥಿಯೇಟರ್​ಗಳಿಗೆ ಕರೆತರುತ್ತಿವೆ. ಆದರೆ, ಅಷ್ಟರಲ್ಲಿ ಚಿತ್ರಗಳನ್ನು ಒಟಿಟಿ ಅಥವಾ ಟಿವಿಯಲ್ಲಿ ಪ್ರಸಾರ ಮಾಡುವ ಮೂಲಕ, ಪ್ರೇಕ್ಷಕರನ್ನು ಮತ್ತೆ ಥಿಯೇಟರ್​ ಮತ್ತು ಮಲ್ಟಿಪ್ಲೆಕ್ಸ್​ಗಳಿಂದ ದೂರ ಇಡಲಾಗುತ್ತಿದೆ ಎಂಬ ಆರೋಪ ಕೆಲ ವರ್ಷಗಳಿಂದ ಕೇಳಿಬರುತ್ತಿತ್ತು. ಹೀಗಾಗಿಯೇ ಬಾಲಿವುಡ್​ ಮಂದಿ ಒಟಿಟಿ ಮುನ್ನೆಲೆಗೆ ಬಂದ ಪ್ರಾರಂಭದಲ್ಲಿಯೇ ಥಿಯೇಟರ್​ಗಳಲ್ಲಿ ಬಿಡುಗಡೆಯಾದ ಚಿತ್ರಗಳನ್ನು ಒಟಿಟಿಯಲ್ಲಿ ರಿಲೀಸ್​ ಮಾಡಲು ಎಂಟು ವಾರಗಳ ಮಿತಿ ಕಡ್ಡಾಯಗೊಳಿಸಿದ್ದರು. ಇದೀಗ ಜನ ಮತ್ತೆ ಥಿಯೇಟರ್​ಗಳತ್ತ ಬರಲು ಪ್ರಾರಂಭಿಸಿರುವ ಹೊತ್ತಲ್ಲೇ ಒಟಿಟಿಗಳು ಮತ್ತೆ ಅಡ್ಡಗಾಲು ಹಾಕುತ್ತಿರುವ ಕಾರಣ, ದಣದ ಚಿತ್ರರಂಗಗಳೂ ಎಚ್ಚೆತ್ತುಕೊಂಡಿವೆ. ಎಂಟು ವಾರಗಳ ಕಾಲಮಿತಿಯನ್ನು ಇಲ್ಲೂ ಕಡ್ಡಾಯಗೊಳಿಸಲು ಮುಂದಾಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net