ಸೂರ್ಯ (ಪ್ರಶಾಂತ್) ಅನಾಥ. ಸ್ಲಂನಲ್ಲಿ ತನ್ನಂತ ಹಲವು ಮಕ್ಕಳ ಜತೆ ಬೆಳೆಯುತ್ತಾನೆ. ಆಟೋ ಓಡಿಸಿ, ಟೀ ಮಾರಿ, ಹೋಟೆಲ್ ವೇಯ್ಟರ್ ಆಗಿ ಕೆಲಸ ಮಾಡಿಕೊಂಡು ಪ್ರತಿಷ್ಠಿತ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿರುತ್ತಾನೆ. ಬೆಂಗಳೂರಿನ ಲ್ಯಾಂಡ್ ಮಾಫಿಯಾ ಜತೆಗೆ ಹೆಣ್ಣುಮಕ್ಕಳ ಕಳ್ಳಸಾಗಣೆಯ ಕಿಂಗ್ಪಿನ್ ಲೇಔಟ್ ಮಾರಿ (ರವಿಶಂಕರ್) ಪುತ್ರಿ ಭೂಮಿಯೂ (ಹರ್ಷಿತಾ) ಅದೇ ಕಾಲೇಜಿಗೆ ಸೇರುತ್ತಾಳೆ. ಆದರೆ, ಶ್ರೀಮಂತೆ ಭೂಮಿಗೆ ಬಡ ಸೂರ್ಯನ ಕಂಡರೆ ಅಷ್ಟಕ್ಕಷ್ಟೇ. ಅದರ ನಡುವೆಯೂ ಅವರ ನಡುವೆ ಪ್ರೀತಿ ಚಿಗುರುತ್ತದೆ. ಭೂಮಿಗೆ ಅಪ್ಪನಿಗಿಂತ ಅತ್ತೆ ಡಾ. ಮಮತಾನೇ (ಶ್ರುತಿ) ಪ್ರಪಂಚ. ಮತ್ತೊಂದೆಡೆ ಸ್ಲಂನಲ್ಲಿ ಹೂ ಮಾರುವ ಹುಡುಗಿ ಪುಷ್ಪಿಗೆ ಸೂರ್ಯನೆ ಮೇಲೆ ಪ್ರೀತಿ. ಈ ತ್ರಿಕೋನ ಪ್ರೇಮಕಥೆ ಸಾಗಿದಂತೆ, ಸೂರ್ಯ, ಮಾರಿ, ಡಾ. ಮಮತಾ ಎಲ್ಲರ ಹಿನ್ನೆಲೆಗಳು ತೆರೆದುಕೊಳ್ಳುತ್ತವೆ. ಹಾಗಾದರೆ ಸೂರ್ಯನಿಗೂ ಮಾರಿಗೂ ಲಿಂಕ್ ಏನು? ಸೂರ್ಯ ಪುಷ್ಪಿಯ ಪಾಲಾಗುತ್ತಾನಾ? ಭೂಮಿಗೆ ಬೆಳಕಾಗುತ್ತಾನಾ? ತಿಳಿಯಲು ಸಿನಿಮಾ ನೋಡಿ.