ಬೆಂಗಳೂರು: ಕಳೆದ ಆಗಸ್ಟ್ನಲ್ಲಿ ಪಾವನಾ ಜತೆ ಚಿಕ್ಕಣ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅದರ ಬೆನ್ನಲ್ಲೇ ಅವರ ಮುಂದಿನ ಸಿನಿಮಾ ‘ಲಕ್ಷ್ಮೀಪುತ್ರ’ ರಿಲೀಸ್ಗೆ ಸಿದ್ಧವಾಗಿದ್ದು, ಇದೇ 27ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ನಿರ್ದೇಶಕ ಎ.ಪಿ.ಅರ್ಜುನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಅವರ ಗರಡಿಯಲ್ಲಿ ಪಳಗಿರುವ ವಿಜಯ್ ಎಸ್. ಸ್ವಾಮಿ ‘ಲಕ್ಷ್ಮೀಪುತ್ರ’ನಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಚಿಕ್ಕಣ್ಣಗೆ ಇಲ್ಲಿ ವಂದಿತಾ ಗೌಡ ಜೋಡಿಯಾಗಿದ್ದು, ಹಿರಿಯ ನಟಿ ತಾರಾ ಅನುರಾಧ, ಕುರಿ ಪ್ರತಾಪ್, ಶಿವರಾಜ್ ಕೆ.ಆರ್.ಪೇಟೆ, ಗಿರೀಶ್ ಶಿವಣ್ಣ ಕಲಾಬಳಗದಲ್ಲಿದ್ದಾರೆ. ಇತ್ತೀಚೆಗೆ ನಟ ಶಿವರಾಜಕುಮಾರ್ ಚಿತ್ರದ ಟ್ರೇಲರ್ ರಿಲೀಸ್ ಮಾಡಿ ತಂಡಕ್ಕೆ ಶುಭ ಕೋರಿದರು. ತಾಯಿ-ಮಗನ ಬಾಂಧವ್ಯ, ಹಾಸ್ಯದ ಜತೆಗೆ ಆ್ಯಕ್ಷನ್ ದೃಶ್ಯಗಳಲ್ಲಿ ಚಿಕ್ಕಣ್ಣ ಮಿಂಚಿದ್ದಾರೆ. ‘ಇದು ಕೇವಲ ಕಾಮಿಡಿ ಅಥವಾ ಕಮರ್ಷಿಯಲ್ ಸಿನಿಮಾ ಮಾತ್ರವಲ್ಲ. ಪ್ರತಿಯೊಬ್ಬ ಮಧ್ಯಮ ವರ್ಗದ ಹುಡುಗನ ಜೀವನದಲ್ಲಿ ನಡೆಯುವ ನೈಜ ಘಟನೆಗಳ ಕಥೆ. ಪ್ರೀತಿ, ಸ್ನೇಹ, ತಾಯಿ-ಮಗನ ಬಾಂಧವ್ಯ ಹೀಗೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ದೃಶ್ಯ ಕನೆಕ್ಟ್ ಆಗುತ್ತದೆ’ ಎಂದು ಚಿಕ್ಕಣ್ಣ ಹೇಳಿಕೊಂಡರು. ನಿರ್ದೇಶಕ ವಿಜಯ್, ‘ಗೆಳೆಯ ಅರ್ಜುನ್ ನಿರ್ದೇಶಕನಾಗಿ ಬೆಳೆದು, ಈಗ ನಿರ್ಮಾಪಕನಾಗಿ ನನಗೆ ನಿರ್ದೇಶಿಸಲು ಅವಕಾಶ ನೀಡಿದ್ದಾನೆ. ನಾನಿಂದು ಇಲ್ಲಿ ನಿಲ್ಲಲು ಆತನೇ ಕಾರಣ’ ಎಂದು ಧನ್ಯವಾದ ತಿಳಿಸಿದರು. ನಾಯಕಿ ವಂದಿತಾ, ‘ನಾನು ನಾಯಕಿಯಾಗಿ ನಟಿಸುತ್ತಿರುವ ಮೊದಲ ಸಿನಿಮಾ ಟ್ರೇಲರ್ ಶಿವಣ್ಣ ಬಿಡುಗಡೆ ಮಾಡಿದ್ದು ಖುಷಿ ನೀಡಿದೆ. ನಾನು ಆಡಿಷನ್ಗೆ ಹೋದ ಕಡೆಯಲ್ಲೆಲ್ಲ ಚೆನ್ನಾಗಿದ್ದೀರಾ, ಟ್ಯಾಲೆಂಟೆಡ್ ಆಗಿದ್ದೀರ ಎನ್ನುತ್ತಿದ್ದರು. ಆದರೆ, ನಾಯಕಿಯಾಗಿ ಅವಕಾಶ ನೀಡುತ್ತಿರಲಿಲ್ಲ. ಆದರೆ, ‘ಲಕ್ಷ್ಮೀಪುತ್ರ’ದಲ್ಲಿ ಒಂದೊಳ್ಳೆ ಅವಕಾಶ ನೀಡಿದರು’ ಎಂದು ಹೇಳಿಕೊಂಡರು. ನಟಿ ತಾರಾ, ‘‘ಲಕ್ಷ್ಮೀಪುತ್ರ’ ನನ್ನ ಸಿನಿಮಾ ಕರಿಯರ್ನಲ್ಲೇ ಅತ್ಯಂತ ಪ್ರಮುಖ ಚಿತ್ರವಾಗಲಿದೆ’ ಎಂದರು.