ಇದನ್ನ ಯಾವ ಮುಠ್ಠಾಳ ಹೇಳಿದ... ಕಿಚ್ಚ ಸುದೀಪ್​ ಪರ ನಿಂತು ಗುಡುಗಿದ ರೂಪೇಶ್​ ರಾಜಣ್ಣ! BBK 12

ಬಿಗ್​ಬಾಸ್​ ಸೀಸನ್​ 9ರ ಸ್ಪರ್ಧಿ ಹಾಗೂ ಕನ್ನಡ ಪರ ಹೋರಾಟಗಾರರಾದ ರೂಪೇಶ್​ ರಾಜಣ್ಣ ಖಡಕ್​ ಮತ್ತು ನಟ ಕಿಚ್ಚ ಸುದೀಪ್​
ಬಿಗ್​ಬಾಸ್​ ಸೀಸನ್​ 9ರ ಸ್ಪರ್ಧಿ ಹಾಗೂ ಕನ್ನಡ ಪರ ಹೋರಾಟಗಾರರಾದ ರೂಪೇಶ್​ ರಾಜಣ್ಣ ಖಡಕ್​ ಮತ್ತು ನಟ ಕಿಚ್ಚ ಸುದೀಪ್​
Published on

ಪ್ರಮುಖ ಮುಖ್ಯಾಂಶಗಳು

  • ಬಿಗ್​ಬಾಸ್​ ರಿಯಾಲಿಟಿ ಶೋನಲ್ಲಿ ನಿರೂಪಕ ಸುದೀಪ್​ ಅವರ ಹಸ್ತಕ್ಷೇಪವೂ ಇದೆ ಎಂಬ ಆರೋಪ
  • ಬಿಗ್​ಬಾಸ್​ ಸೀಸನ್​ 9ರ ಸ್ಪರ್ಧಿ ಹಾಗೂ ಕನ್ನಡ ಪರ ಹೋರಾಟಗಾರ ರೂಪೇಶ್​ ರಾಜಣ್ಣ ಖಡಕ್​ ಉತ್ತರ
  • ಸುದೀಪ್​ ಸರ್​ ಹಸ್ತಕ್ಷೇಪ ಇದೆ ಅಂತ​ ಯಾವ ಮುಠ್ಠಾಳ ಹೇಳಿದ ಎಂದು ಗುಡುಗಿದ ರೂಪೇಶ್​ ರಾಜಣ್ಣ
ಬೆಂಗಳೂರು: ಬಿಗ್​ಬಾಸ್​ ಶೋ ( BBK 12 ) ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇದು ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ. ವಿವಾದಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುವ ಈ ಶೋ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಪ್ರಸ್ತುತ ನಡೆಯುತ್ತಿರುವ 12ನೇ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದೆ. ಇನ್ನೂ ಎರಡು ದಿನದಲ್ಲಿ ತೆರೆಬೀಳಲಿದ್ದು, ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಇದರ ನಡುವೆ ರಾಜಕೀಯ ಚರ್ಚೆಯು ಶುರುವಾಗಿದೆ. ಕೆಲವರು ನಿರೂಪಕ ಸುದೀಪ್​ ವಿರುದ್ಧವೂ ಟೀಕಾಪ್ರಹಾರ ನಡೆಸುತ್ತಿದ್ದಾರೆ.
ಹಾಸ್ಯ ಕಲಾವಿದ ಗಿಲ್ಲಿ ಈ ಬಾರಿಯ ಬಿಗ್​ಬಾಸ್​ ಶೋ ಗೆಲ್ಲುತ್ತಾರೆ ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಈಗಾಗಲೇ ಗಿಲ್ಲಿಯ ಬಗ್ಗೆ ಸಾಕಷ್ಟು ಪ್ರಚಾರ ಕೂಡ ನಡೆದಿದೆ. ಅದರಲ್ಲೂ ಮಂಡ್ಯದಲ್ಲಿ ಶಾಸಕರಿಂದ ಹಿಡಿದು ಸಾರ್ವಜನಿಕರವರೆಗೆ ಗಿಲ್ಲಿ ಗೆಲ್ಲಬೇಕೆಂದು ಪ್ರಚಾರ ಮಾಡುತ್ತಿದ್ದಾರೆ. ಇದರ ನಡುವೆ, ಕೆಲವರು ಅಶ್ವಿನಿ ಗೌಡ ಅವರನ್ನು ಗೆಲ್ಲಿಸಲು ಬಿಗ್​ಬಾಸ್​ ಮುಂದಾಗಿದೆ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ.
ಇತ್ತೀಚೆಗೆ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ತಮ್ಮ ಮಗನ ಮದುವೆಗೆ ಆಮಂತ್ರಣ ನೀಡಲು ನಟ ಸುದೀಪ್​ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಉಭಯ ನಾಯಕರು ಕುಶಲೋಪರಿ ನಡೆಸಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಯಿತು. ಅಶ್ವಿನಿ ಗೌಡ ಕೂಡ ಕನ್ನಡ ಹೋರಾಟಗಾರ್ತಿ ಆಗಿರುವ ಹಿನ್ನೆಲೆಯಲ್ಲಿ ನಾರಾಯಣ ಗೌಡರು ಅಶ್ವಿನಿ ಗೆಲ್ಲಿಸಲು ಸುದೀಪ್​ ಭೇಟಿಯಾಗಿದ್ದಾರೆ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ. ಇದರ ನಡುವೆ, ಈ ಶೋನಲ್ಲಿ ಸುದೀಪ್​ ಅವರ ಹಸ್ತಕ್ಷೇಪವೂ ಇದೆ ಎಂಬ ಆರೋಪವೂ ಇದೆ. ಅಂದರೆ, ಸ್ಪರ್ಧಿಗಳನ್ನು ಎಲಿಮಿನೇಟ್​ ಮಾಡುವ ವಿಚಾರದಲ್ಲಿ ಸುದೀಪ್​ ಅವರು ಹಸ್ತಕ್ಷೇಪ ಮಾಡುತ್ತಾರೆ ಎಂಬ ಆರೋಪಕ್ಕೆ ಬಿಗ್​ಬಾಸ್​ ಸೀಸನ್​ 9ರ ಸ್ಪರ್ಧಿ ಹಾಗೂ ಕನ್ನಡ ಪರ ಹೋರಾಟಗಾರರಾದ ರೂಪೇಶ್​ ರಾಜಣ್ಣ ಖಡಕ್​ ಉತ್ತರ ನೀಡಿದ್ದಾರೆ.
ವಿಜಯವಾಣಿ ಡಿಜಿಟಲ್​ ಸಂದರ್ಶನದಲ್ಲಿ ಮಾತನಾಡಿದ ರೂಪೇಶ್​ ರಾಜಣ್ಣ, ಸುದೀಪ್​ ಸರ್​ ಹಸ್ತಕ್ಷೇಪ ಇದೆ ಅಂತ​ ಯಾವ ಮುಠ್ಠಾಳ ಹೇಳಿದ. ವರ್ಷದ ಮೂರ್ಖ ಎಂಬ ಪ್ರಶಸ್ತಿ ಇದ್ದರೆ ಈ ಮಾತನ್ನು ಹೇಳಿದವರಿಗೆ ಕೊಡಬೇಕು. ಈ ಶೋನಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಸುದೀಪ್​ ಸರ್​ ಕೈಯಲ್ಲಿ ಇಲ್ಲ. ಮುಂದಿನ ಸ್ಪರ್ಧಿ ಯಾರೆಂಬ ವಿಚಾರವೂ ಅವರಿಗೆ ಗೊತ್ತಿರುವುದಿಲ್ಲ. ಸ್ಪರ್ಧಿಗಳ ಆಯ್ಕೆಯಿಂದ ಹಿಡಿದು ಪ್ರತಿಯೊಂದು ವಿಚಾರವೂ, ಆ ಶೋನ ನಿರ್ದೇಶಕರು ಮತ್ತು ಆ ಶೋನ ತಂಡ ಮತ್ತು ಕಲರ್ಸ್​ ಕನ್ನಡ ಚಾನೆಲ್​ ನಿರ್ಧರಿಸುತ್ತದೆ. ಅದೊಂದು ದೊಡ್ಡ ಪ್ರಕ್ರಿಯೆಯಾಗಿದ್ದು, ನಾವು-ನೀವು ಸುಮ್ಮನೇ ಮಾತನಾಡಬಾರದು ಎಂದರು.
ಸುದೀಪ್​ ಸರ್​ ಏನೇ ಮಾತನಾಡಿದರು ಎಪಿಸೋಡ್​ ನೋಡಿಯೇ ಮಾತನಾಡುವುದು. ಬಿಗ್​ಬಾಸ್ ಮನೆಯಲ್ಲಿ ಯಾರಿದ್ದರೆ ಅಥವಾ ಯಾರು ಹೋದರೆ ಅವರಿಗೇನು? ಅವರಿಗೆ ಬರುವ ಹಣ ಬಂದೇ ಬರುತ್ತದೆ. ಅವರು ನಡೆಸುವ ಎಪಿಸೋಡ್ ನಡೆಸಿಕೊಡುತ್ತಾರೆ. ಹಾಗಾಗಿ, ಸುದೀಪ್​ ಸರ್​ ನಿರ್ಧಾರ ಮಾಡುತ್ತಾರೆ ಅನ್ನೋದು ಸುಳ್ಳು. ಶೋನಲ್ಲಿ ಯಾರೇ ಸ್ಪರ್ಧಿಯಾಗಲಿ, ಅವರು ಕುಗ್ಗಿದಾಗ ಮೇಲಕ್ಕೆ ಎತ್ತುತ್ತಾರೆ ಮತ್ತು ಅತಿರೇಕಕ್ಕೆ ಹೋದ ಸ್ಪರ್ಧಿಗಳನ್ನು ಸರಿಯಾದ ದಾರಿಗೆ ತರುತ್ತಾರೆ. ಅವರ ಮೇಲೆ ಈ ರೀತಿಯ ಆರೋಪ ಸರಿಯಲ್ಲ. ಈ ರೀತಿ ಮಾತನಾಡಬಾರದು ಎಂದು ರೂಪೇಶ್​ ರಾಜಣ್ಣ ವಿಜಯವಾಣಿ ಡಿಜಿಟಲ್​ ಜತೆ ಮಾತನಾಡುತ್ತಾ ಸ್ಪಷ್ಟನೆ ನೀಡಿದರು.​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net