Shruthi Hariharan - ವಯಸ್ಸಾದಂತೆ ಉತ್ತಮ ಪಾತ್ರಗಳು ಸಿಗುತ್ತಿವೆ - ನಟಿ ಶ್ರುತಿ ಸಂತಸ

ನಟಿ ಶ್ರುತಿ ಹರಿಹರನ್​ ಕುಟುಂಬ
ನಟಿ ಶ್ರುತಿ ಹರಿಹರನ್​ ಕುಟುಂಬ
Published on
"ಹೆಡ್​ಬುಷ್​' ಮೂಲಕ ಕಮ್​ಬ್ಯಾಕ್​ ಮಾಡಿದ ನಟಿ ಶ್ರುತಿ ಹರಿಹರನ್​, ಮತ್ತೆ ಬಿಜಿಯಾಗಿದ್ದಾರೆ. ಕನ್ನಡದಲ್ಲಿ "ಸಾರಾಂಶ', "ಜಸ್ಟ್​ ಮ್ಯಾರಿಡ್​', "ನಿದ್ರಾದೇವಿ ನೆಕ್ಸ್ಟ್​ ಡೋರ್​' ಜತೆಗೆ ತಮಿಳಿನಲ್ಲೂ ಕಾಣಿಸಿಕೊಂಡಿರುವ ಅವರು ಸದ್ಯ ನಾಲ್ಕು ಕನ್ನಡ ಚಿತ್ರಗಳು ಹಾಗೂ ತಲಾ ಒಂದೊಂದು ಹಿಂದಿ ಮತ್ತು ತಮಿಳು ಸರಣಿಯಲ್ಲಿ ಬಿಜಿಯಾಗಿದ್ದಾರೆ. ಇದೇ ಖುಷಿಯಲ್ಲಿ ವಿಜಯವಾಣಿ ಜತೆ ಶ್ರುತಿ ಇತ್ತೀಚೆಗಷ್ಟೆ ಮಾತಿಗೆ ಸಿಕ್ಕಿದ್ದರು. "ವಯಸ್ಸಾಗುತ್ತಾ ಒಳ್ಳೆ ಪಾತ್ರಗಳು ಸಿಗುತ್ತಿವೆ. ಮುಂಚಿನ ರೀತಿ ಒಂದೇ ರೀತಿಯ ಕಥೆಗಳು ಬರುತ್ತಿಲ್ಲ. ವಿಭಿನ್ನ ಬಗೆಯ ಉತ್ತಮ ಕಥೆಗಳು ಬರುತ್ತಿವೆ. ಹೀಗಾಗಿ ವಯಸ್ಸಾಗುತ್ತಾ ಒಳ್ಳೆ ಕಥೆ, ಪಾತ್ರಗಳು ಸಿಗುತ್ತಿರುವ ಖುಷಿಯಿದೆ. ಜತೆಗೆ ಒಟಿಟಿ ಪ್ಲಾಟ್​ಫಾರಂಗಳು ಕೂಡ ಒಳ್ಳೆ ಅವಕಾಶ ಒದಗಿಸುತ್ತಿವೆ. ನೈಜತೆಗೆ ಹತ್ತಿರದ ಕಥೆಗಳು ಹೆಚ್ಚಾಗುತ್ತಿವೆ. ಮೊದಲು ಪ್ರೇಕ್ಷಕರನ್ನು ಮೆಚ್ಚಿಸಬೇಕು ಅಂತಲೇ ಒತ್ತಡದಿಂದ ಕಥೆಗಳು ಬರುತ್ತಿದ್ದವು. ಈಗ ಆ ಒತ್ತಡವಿಲ್ಲದೇ ನಮಗಾಗಿ, ನಮ್ಮೊಳಗಿನ ವಿಷಯ, ಆಲೋಚನೆ ತಿಳಿಸುವ ಪ್ರಯತ್ನ ಒಟಿಟಿಯಲ್ಲಿ ನಡೆಯುತ್ತಿದೆ. ನನಗೆ ಅಂತಹ ವಿಷಯಗಳು ಇಷ್ಟ. ಚಿತ್ರರಂಗ ಅಸಂಘಟಿತ ಉದ್ಯಮ. ಆದರೆ, ಒಟಿಟಿ ಬಂದಾಗಿನಿಂದ ಕಾರ್ಪೊರೇಟ್​ ಸಂಸ್ಕೃತಿ ಬೆಳೆಯುತ್ತಿದ್ದು, ವ್ಯವಸ್ಥಿತವಾಗಿ ಕೆಲಸಗಳು ನಡೆಯುತ್ತಿವೆ. ಆರ್ಟ್​ ಸಿನಿಮಾ ಮತ್ತು ಕಮರ್ಷಿಯಲ್​ ಸಿನಿಮಾ ಎರಡೂ ಬೇಕು. ಹಾಗೇ ಈಗ ಥಿಯೇಟರ್​ ಜತೆಗೆ ಒಟಿಟಿನೂ ಬೇಕು ಎಂಬಂತಾಗಿದೆ' ಎಂದು ಸಂತಸ ವ್ಯಕ್ತಪಡಿಸುತ್ತಾರೆ ಶ್ರುತಿ ಹರಿಹರನ್​.

ಸಿಕ್ಸರ್​ ಸಂಭ್ರಮ

ಸದ್ಯ ಮೂರು ಕನ್ನಡ ಚಿತ್ರಗಳ ಶೂಟಿಂಗ್​ ಮುಗಿಸಿರುವ ಶ್ರುತಿ, "ಎನ್​ಎಚ್​ 66' ಎಂಬ ಹೊಸ ಚಿತ್ರ ಒಪ್ಪಿಕೊಂಡಿದ್ದು, ಇತ್ತೀಚೆಗಷ್ಟೆ ಮುಹೂರ್ತ ನೆರವೇರಿದೆ. ""ಎನ್​ಎಚ್​ 66' ಚಿತ್ರದಲ್ಲಿ ಮಾಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಚಿತ್ರಕ್ಕೆ "ಒನ್​ ಹೈವೇ, ಮೆನಿ ಸೀಕ್ರೆಟ್ಸ್​' ಎಂಬ ಅಡಿಬರಹವಿದ್ದು, ಅದೇ ರೀತಿ ನನ್ನದು ಹಲವು ಸೀಕ್ರೆಟ್​ಗಳಿರುವ ನಿಗೂಢ ಪಾತ್ರ. ನಿರ್ದೇಶಕ ಮಂಜುನಾಥ್​ ತುಂಬ ಚೆನ್ನಾಗಿ ಬರೆದಿದ್ದಾರೆ. "ಚೀತಾ' ರಿಲೀಸ್​ಗೆ ರೆಡಿಯಿದೆ. ನನಗೆ ಪಾತ್ರದ ಬಗ್ಗೆ ತುಂಬ ಎಕ್ಸೈಟ್​ಮೆಂಟ್​ ಇದೆ. ಎರಡು ಚಿತ್ರಗಳ ಶೂಟಿಂಗ್​ ಮುಗಿಸಿ ಪ್ರಚಾರ ಮಾಡೋಣ ಅಂತ, ತಂಡದವರು ಮಾಹಿತಿ ಬಿಟ್ಟುಕೊಟ್ಟಿಲ್ಲ. ಹಾಗೇ ತಮಿಳಿನಲ್ಲಿ ಒಂದು ವೆಬ್​ಸರಣಿ ರಿಲೀಸ್​ಗೆ ರೆಡಿಯಿದೆ. ಒಂದು ಹಿಂದಿ ವೆಬ್​ಸರಣಿಯ ಮಾತುಕತೆ ನಡೆಯುತ್ತಿದೆ' ಎಂದು ಮಾಹಿತಿ ನೀಡುತ್ತಾರೆ.

ಮಗಳು ಜಾನಕಿ...

ಕೆಲಸಕ್ಕೆ ಹೋಗುವ ಪ್ರತಿ ತಾಯಿಗೂ ಮನೆಯಲ್ಲಿ ಮಕ್ಕಳ ಯೋಚನೆ ಇದ್ದೇ ಇರುತ್ತದೆ. ಇನ್ನು ಕೆಲಸದ ನಿಮಿತ್ತ ಮನೆ, ಮಕ್ಕಳು, ಕುಟುಂಬದಿಂದ ಹಲವು ದಿನಗಳ ಕಾಲ ದೂರವಿರಬೇಕಾದ ತಾಯಂದಿರ ಕಷ್ಟ ಕೂಡ ಹೇಳತೀರದು. ಆರು ವರ್ಷದ ಮಗಳು ಜಾನಕಿಯನ್ನು ಬಿಟ್ಟು ಶೂಟಿಂಗ್​ ನಿಮಿತ್ತ ದೂರದ ಊರಿಗೆ ಹೋಗುವ ಬಗ್ಗೆ ಶ್ರುತಿ, "ನಾನು ಹೊರಗೆ ಹೋದಾಗ ಪತಿ ರಾಮ್​ ನೋಡಿಕೊಳ್ಳುತ್ತಾರೆ. ಕೆಲವೊಮ್ಮೆ ಅವರು ನನಗಿಂತ ಚೆನ್ನಾಗಿ ನೋಡಿಕೊಳ್ಳುತ್ತಾರೆ ಅಂತ ಅನ್ನಿಸಿದ್ದೂ ಇದೆ. ಶೂಟಿಂಗ್​ ಮುಗಿಸಿಕೊಂಡು ವಾಪಸ್ಸಾದ ಬಳಿಕ ನಾನು ಜಾನಕಿಯನ್ನು ನೋಡಿಕೊಳ್ಳುತ್ತೇನೆ. ಅವಳನ್ನು ಬಿಟ್ಟಿರುವುದು ಕಷ್ಟ, ಸವಾಲೂ ಹೌದು. ಆಕೆಯನ್ನು ಮಿಸ್​ ಮಾಡಿಕೊಳ್ಳುತ್ತಿರುತ್ತೇನೆ. ಅದರಲ್ಲೂ ನಾನು ಹೊರಗಿದ್ದ ಸಮಯದಲ್ಲಿ ಆಕೆಗೆ ಹುಷಾರಿಲ್ಲ ಅಂತ ಗೊತ್ತಾದಾಗ ತುಂಬ ನಾನು ಸರಿ ಮಾಡುತ್ತಿದ್ದೀನಾ? ಅಪರಾಧದ ಮನೋಭಾವ ಕಾಡಿದ್ದೂ ಇದೆ' ಎನ್ನುತ್ತಾರೆ.

ಕಲಾವಿದರದು ಎರಡು ಜೀವನ!

"ಎಲ್ಲ ಕಲಾವಿದರೂ ಎರಡು ಜೀವನಗಳನ್ನು ನಡೆಸುತ್ತಾರೆ. ಒಂದು ಕ್ಯಾಮರಾ ಮುಂದೆ, ಇನ್ನೊಂದು ಕ್ಯಾಮರಾ ಹಿಂದೆ' ಎನ್ನುವ ಶ್ರುತಿ, "ನಾನು ಅಮ್ಮ ಆದೆ ಅಂತ ಕಲಾವಿದೆ ಅಲ್ಲ ಎಂದೆಲ್ಲ ಹೇಳಲಾಗುವುದಿಲ್ಲ. ಹಾಗಂತ ಮತ್ತೆ "ಸಂಡೆ ಬಂತು' ರೀತಿಯ ಹಾಡಿನಲ್ಲಿ ಡಾನ್ಸ್​ ಮಾಡಲೂ ಈಗ ಒಪ್ಪುವುದಿಲ್ಲ. ಆದರೆ, ಒಂದಿಡೀ ಹಾಡಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕರೆ ಇಲ್ಲ ಎನ್ನುವುದಿಲ್ಲ. ಈಗಲೂ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಪ್ರಯೋಗ ಮಾಡಲು ರೆಡಿ' ಎಂದು ಹೇಳಿಕೊಳ್ಳುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net