

ಬೆಂಗಳೂರು: ಕನ್ನಡದ ‘ಕನ್ಯಾದಾನ’ ಧಾರಾವಾಹಿ ಜತೆಗೆ ‘ಭೀಮ’ ಸಿನಿಮಾದಲ್ಲಿ ಅಭಿನಯಿಸಿದ್ದ ಪ್ರಕೃತಿ ಸೌಂದರ್ಯ ದಸರಾ ಆಚರಣೆಯಲ್ಲಿ ಬಿಜಿಯಾಗಿದ್ದಾರೆ. ಒಂಬತ್ತು ದಿನಗಳ ಕಾಲ ಕಠಿಣ ವ್ರತದ ಜತೆಗೆ ಪ್ರತಿ ದಿನ ಬನಶಂಕರಿ ದೇವಿಯ ದೇವಸ್ಥಾನದಲ್ಲಿ ಅಖಂಡ ಜ್ಯೋತಿ ಹಚ್ಚುವ ಮೂಲಕ ಹಬ್ಬ ಆಚರಿಸುತ್ತಿದ್ದಾರೆ. ಹಬ್ಬದ ವಿಶೇಷತೆ ಬಗ್ಗೆ ಪ್ರಕೃತಿ, ‘ಮನೆಯಲ್ಲಿ ನವರಾತ್ರಿ ಹಬ್ಬವನ್ನು ಪ್ರತಿ ವರ್ಷದಂತೆ ಈ ಬಾರಿ ಕೂಡ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಒಂಬತ್ತು ದಿನಗಳ ಕಾಲ ಬೆಳಗಿನ ಜಾವ ನಾಲ್ಕೂವರೆ ಒಳಗೆ ಎದ್ದು ಪೂಜೆ ಮಾಡುತ್ತೇನೆ. ಬಳಿಕ ಬನಶಂಕರಿ ದೇವಸ್ಥಾನಕ್ಕೆ ತೆರಳಿ ಅಲ್ಲಿ ಅಖಂಡ ಜ್ಯೋತಿ ಬೆಳಗಿ, ಲಲಿತ ಸಹಸ್ರನಾಮ ಪಠಿಸುತ್ತೇನೆ. ಹಾಗೇ ನಾನು ದಸರಾ ಹಬ್ಬದ ವೇಳೆ ಚಪ್ಪಲಿ ಧರಿಸುವುದಿಲ್ಲ. ಸಾತ್ವಿಕ ಆಹಾರ ಸೇವಿಸುತ್ತೇನೆ.
ಹಬ್ಬದ ಕೊನೆಯ ದಿನ ದೇವಿಯ ದೇವಸ್ಥಾನದಲ್ಲಿ ಆರತಿ ಪೂಜೆ ಮಾಡುವ ಮೂಲಕ ಅಂದು ವ್ರತವನ್ನು ಸಂಪನ್ನಗೊಳಿಸುತ್ತೇನೆ. ನವರಾತ್ರಿ ಸಮಯದಲ್ಲಿ ದೇವಿ ಎಲ್ಲರ ಮನೆಗೆ ಆಗಮಿಸುತ್ತಾಳೆ ಎಂಬ ನಂಬಿಕೆಯಿದೆ. ಹಾಗಾಗಿ, ಆಕೆಯನ್ನು ನಾವು ಖುಷಿಯಿಂದ ಬರಮಾಡಿಕೊಳ್ಳಬೇಕು. ಹಬ್ಬದ ವೇಳೆ ಮನೆಯನ್ನು ಶುಚಿಯಾಗಿಟ್ಟುಕೊಳ್ಳಬೇಕು ಜತೆಗೆ ನಮ್ಮ ನಡೆ-ನುಡಿ ಕೂಡ ಶುದ್ಧವಾಗಿರಬೇಕು ಎಂಬುದು ನನ್ನ ಅಭಿಪ್ರಾಯ. ಉತ್ತಮ ಆರೋಗ್ಯ ಹಾಗೂ ನೆಮ್ಮದಿಯ ಬದುಕು ನಮ್ಮದಾಗಲಿ ಎಂಬುದಷ್ಟೇ ದೇವಿಯಲ್ಲಿ ನನ್ನ ಪ್ರಾರ್ಥನೆ’ ಎಂದು ಹೇಳಿಕೊಳ್ಳುತ್ತಾರೆ. ಸದ್ಯ ಹೊಸ ಚಿತ್ರ ಒಪ್ಪಿಕೊಂಡಿರುವ ಪ್ರಕೃತಿ ಸೌಂದರ್ಯ, ಪಾತ್ರಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ.