

ಮೈಸೂರು: ವಿಜೃಂಭಣೆಯಿಂದ ನಡೆಯುವ ನಾಡಹಬ್ಬ ದಸರಾ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಇಡೀ ಜಗತ್ತು ಮೈಸೂರಿನತ್ತ ಮುಖ ಮಾಡಿದೆ. ಅದರ ನಡುವೆಯೇ ನಟ ರಜಿನಿಕಾಂತ್ ಮೈಸೂರಿನಲ್ಲಿ ಬೀಡು ಬಿಟ್ಟಿದ್ದು, ಅವರ ಮುಂದಿನ ‘ಧರ್ಮನ್’ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಹಾಗೆಯೇ ಸಾಂಸ್ಕೃತಿಕ ನಗರಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ದಸರಾ ಆರಂಭಕ್ಕೂ ಮುನ್ನವೇ ತಾರಾ ಕಳೆ ಹೆಚ್ಚಿಸಿದ್ದಾರೆ. ‘ಧರ್ಮನ್’ ಶೂಟಿಂಗ್ ಪೂರ್ಣಗೊಂಡ ಬೆನ್ನಲ್ಲೇ ರಜಿನಿಕಾಂತ್ ಬುಧವಾರ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಹೋಗಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸೂಪರ್‌ಸ್ಟಾರ್ ನಟನ ಆಗಮನದ ಸುದ್ದಿ ತಿಳಿದು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ, ನೆಚ್ಚಿನ ನಟನನ್ನು ಕಂಡು ಸಂಭ್ರಮಿಸಿದರು. ದೇವಾಲಯದ ವತಿಯಿಂದಲೂ ರಜಿನಿಗೆ ವಿಶೇಷ ಸ್ವಾಗತ ನೀಡಲಾಯಿತು.
ತಮಿಳಿನ ‘ಧರ್ಮನ್’ ಶೂಟಿಂಗ್‌ಗಾಗಿ ನಟ ರಜಿನಿಕಾಂತ್ ಮೈಸೂರಿಗೆ ಆಗಮಿಸಿದ್ದರು. ತಿ.ನರಸೀಪುರ ತಾಲೂಕಿನ ಐತಿಹಾಸಿಕ ಸೋಮನಾಥಪುರದ ಪ್ರಸಿದ್ಧ ಚನ್ನಕೇಶವ ದೇವಾಲಯದ ಮುಂಭಾಗದಲ್ಲಿ ಕಳೆದ ಎರಡು ದಿನಗಳಿಂದ ಚಿತ್ರದ ಹಾಡಿನ ಚಿತ್ರೀಕರಣ ನಡೆಸಲಾಗಿದೆ ಎಂದು ತಿಳಿದುಬಂದಿದೆ. ರಜಿನಿಕಾಂತ್ ಜತೆಗೆ ತೆಲುಗು ನಟ ರಾಮ್ ಪೋತಿನೇನಿ, ನಟಿಯರಾದ ರಾಶಿ ಖನ್ನಾ ಹಾಗೂ ಶ್ರೀಲೀಲಾ ಭಾಗವಹಿಸಿದ್ದಾರೆ. ಆ ಮೂಲಕ ‘ಧರ್ಮನ್’ ಚಿತ್ರದಲ್ಲಿ ನಟಿ ಶ್ರೀಲೀಲಾ ಇರುವುದು ಖಚಿತವಾಗಿದೆ. ಇನ್ನು ಶೂಟಿಂಗ್ ನಡೆಯುವ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದು, ಅವರನ್ನು ಕಾಣಲು ಸ್ವತಃ ರಜಿನಿಕಾಂತ್ ಆಟೋದಲ್ಲಿ ಬಂದು ಕೈಬೀಸಿದ್ದಾರೆ. ಸದ್ಯ ಸೋಮನಾಥಪುರದಲ್ಲಿ ನಡೆಸಲಾಗುತ್ತಿದ್ದ ಶೂಟಿಂಗ್ ಪೂರ್ಣಗೊಂಡಿದೆ. ಚಿತ್ರೀಕರಣ ವೇಳೆಯ ಫೋಟೋಗಳನ್ನು ರಾಶಿ ಖನ್ನಾ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಧರ್ಮನ್’ ಆ್ಯಕ್ಷನ್ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು, ‘ಡ್ರ್ಯಾಗನ್’ ನಿರ್ದೇಶಕ ಅಶ್ವತ್ಥ್ ಮಾರಿಮುತ್ತು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಮೈಸೂರಿಗೆ ಆಗಮಿಸಿದ ರಜಿನಿಕಾಂತ್ ಅವರನ್ನು ಡಾ. ಭಾರತಿ ವಿಷ್ಣುವರ್ಧನ್ ಕುಟುಂಬಸ್ಥರು ಭೇಟಿ ಮಾಡಿದ್ದಾರೆ. ಭಾರತಿ, ಪುತ್ರಿ ಕೀರ್ತಿ, ಅಳಿಯ ಅನಿರುದ್ಧ ಹಾಗೂ ಮೊಮ್ಮಕ್ಕಳಾದ ಜೇಷ್ಠ ಮತ್ತು ಶ್ಲೋಕ ಇದ್ದರು. ತಲೈವಾ ಜತೆಗಿನ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿರುವ ಅನಿರುದ್ಧ, ‘ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ. ವಿಶೇಷವೇನಿಲ್ಲ. ರಜಿನಿಕಾಂತ್ ಅವರು ಮೈಸೂರಿನಲ್ಲಿರುವ ಕಾರಣ ಅವರನ್ನು ಭೇಟಿ ಮಾಡಿದ್ದೇವೆ. ಮಕ್ಕಳಾದ ಜೇಷ್ಠ, ಶ್ಲೋಕ ಅವರು ಹಿರಿಯ ನಟನ ಆಶೀರ್ವಾದ ಪಡೆದಿದ್ದಾರೆ’ ಎಂದರು. ಜೇಷ್ಠ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಿದ್ಧತೆ ನಡೆಸುತ್ತಿದ್ದು, ರಜಿನಿ ಭೇಟಿ ಕುತೂಹಲ ಮೂಡಿಸಿದೆ. ಇನ್ನು ರಜಿನಿಕಾಂತ್ ಮತ್ತು ವಿಷ್ಣುವರ್ಧನ್ ಇಬ್ಬರು ‘ಸಹೋದರರ ಸವಾಲ್’, ‘ಕಿಲಾಡಿ ಕಿಟ್ಟು’, ‘ಗಲಾಟೆ ಸಂಸಾರ’ ಸೇರಿ ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.