More

    ಮಂಜೂರಾದ ಅನುದಾನ ವಾಪಸ್

    ಕಾರ್ಕಳ: ಬಂಗ್ಲೆಗುಡ್ಡೆ ವಾರ್ಡ್ ನೀರಿನ ಯೋಜನೆಗೆ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್‌ರಿಂದ 30 ಲಕ್ಷ ರೂ. ಅನುದಾನ ಮಂಜೂರಾಗಿದ್ದು ಅದು ವಾಪಸ್ ಹೋಗಿದೆ. ಇದರ ಹಿಂದೆ ಯಾರು ಶಾಮೀಲಾಗಿದ್ದಾರೆ ಎಂದು ಪ್ರಶ್ನಿಸಿ ಪುರಸಭಾ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಸದನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
    ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆ ಸದನದ ಮುಂಭಾಗಕ್ಕೆ ಆಗಮಿಸಿದ ಪ್ರತಿಮಾ ರಾಣೆ, ನನ್ನ ವಾರ್ಡ್‌ಗೆ 2017ರಲ್ಲಿ ಮಂಜೂರುಗೊಂಡ ಅನುದಾನ ವಾಪಸ್ಸಾಗಿದೆ. ಇದಕ್ಕೆ ಸ್ಪಷ್ಟ ಕಾರಣ ತಿಳಿಸದೆ ಸಭೆ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ತಮ್ಮ ಬೆಂಬಲ ಸೂಚಿಸಿ ಪ್ರತಿಭಟನೆ ಆರಂಭಿಸಿದರು.
    ಅಶ್ಪಕ್ ಅಹ್ಮದ್ ಮಾತನಾಡಿ, ರಾಮಸಮುದ್ರದಿಂದ ಬಂಗ್ಲೆಗುಡ್ಡೆಗೆ ನೇರ ನೀರು ಸರಬರಾಜು ಮಾಡುವ ಯೋಜನೆ ಅನುಷ್ಠಾನಗೊಂಡಿದ್ದರೂ, ಮಧ್ಯದಲ್ಲಿ ಸಾಕಷ್ಟು ಅಕ್ರಮ ಕನೆಕ್ಷನ್ ನೀಡಿರುವುದರಿಂದ ತೊಂದರೆಯಾಗಿದೆ. ಬಿಡುಗಡೆಗೊಂಡ ಅನುದಾನವನ್ನು ವಾಪಸ್ ಕಳುಹಿಸಿದ್ದಾರೆ. ಒಂದೋ ಅನುದಾನ ತರಿಸಬೇಕು. ಇಲ್ಲವೇ ಆ ವಾರ್ಡ್‌ಗೆ ಪುರಸಭೆ ನಿಧಿಯಿಂದ ಅನುದಾನ ಕಾಯ್ದಿರಿಸಬೇಕು ಎಂದರು. ಶುಭದ ರಾವ್ ಮಾತನಾಡಿ, ಅನುದಾನ ವಾಪಸ್ ಹೋಗಲು ಕಾರಣ ಯಾರು ಎಂದು ಸ್ಪಷ್ಟಪಡಿಸದೆ ಸಭೆ ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಆಡಳಿತ ಪಕ್ಷದ ಯೋಗೀಶ್ ದೇವಾಡಿಗ ಮಾತನಾಡಿ, ಈ ಬಗ್ಗೆ ಜಿಲ್ಲಾಧಿಕಾರಿ ಬಳಿ ಅಧ್ಯಕ್ಷರ ನಿಯೋಗ ಕೊಂಡೊಯ್ಯುವುದಾಗಿ ಭರವಸೆ ನೀಡಿದರು. ಪ್ರದೀಪ್ ಮಾತನಾಡಿ, ಅನುದಾನ ವಾಪಸ್ ಹೋಗಿರುವ ಬಗ್ಗೆ ಏನು ದಾಖಲೆ ಇದೆ? ಈ ಬಗ್ಗೆ ಸ್ಪಷ್ಟನೆ ಬೇಕು ಎಂದು ಒತ್ತಾಯಿಸಿದರು. ಮುಖ್ಯಾಧಿಕಾರಿ ರೇಖಾ ಶೆಟ್ಟಿ ಮಾತನಾಡಿ, ಜ.29ರಂದು ಅಧ್ಯಕ್ಷರ ಸಹಿತ ಅಧಿಕಾರಿಗಳು ಜಿಲ್ಲಾಧಿಕಾರಿ ಬಳಿ ತೆರಳಿ, ಮನವಿ ಮಾಡುವುದಾಗಿ ದಿನಾಂಕ ನಿಗದಿಪಡಿಸಿದರು. ಆ ಬಳಿಕ ಪ್ರತಿಭಟನೆವಾಪಸ್ ಪಡೆದುಕೊಳ್ಳಲಾಯಿತು.
    ಕರೊನಾದಿಂದ ಜನ ತತ್ತರಿಸಿದ್ದು, ಈ ನಡುವೆ ನೀರು ಬಿಲ್ ಮತ್ತು ಆಸ್ತಿ ತೆರಿಗೆ ಏರಿಸಿ, ಬಡ್ಡಿ ಸಹಿತ ವಸೂಲಿ ಮಾಡುವುದು ಸರಿಯಲ್ಲ ಎಂದು ಪ್ರತಿಮಾ ರಾಣೆ ಹೇಳಿದರು. ರೆಹಮತ್ ಎನ್.ಶೇಖ್ ಮಾತನಾಡಿ, ಬಡವರು ಚಿನ್ನ ಅಡವಿಟ್ಟು ನೀರಿನ ಬಿಲ್ ಪಾವತಿಸುತ್ತಿದ್ದಾರೆ. ಸ್ಪಲ್ಪ ಮಾನವೀಯತೆ ತೋರಿಸಿ ಎಂದರು. ವಿನ್ನಿಬೋಲ್ಡ್ ಮೆಂಡೋನ್ಸಾ, ಶೋಭಾ ದೇವಾಡಿಗ ಅಕ್ರಮ ನಳ್ಳಿ ನೀರಿನ ಸಂಪರ್ಕದ ಬಗ್ಗೆ ಗಮನ ಸೆಳೆದರು.
    ಪುರಸಭಾ ಉಪಾಧ್ಯಕ್ಷೆ ಪಲ್ಲವಿ ರಾವ್, ಮುಖ್ಯಾಧಿಕಾರಿ ರೇಖಾ ಶೆಟ್ಟಿ ಉಪಸ್ಥಿತರಿದ್ದರು.

    ಹಣ ಬಿಡುಗಡೆ ಮಾಡಬಾರದು!: 13 ಕೋಟಿ ರೂ. ಯೋಜನೆಯ ಒಳಚರಂಡಿ ಕಾಮಗಾರಿ ಕಳಪೆಯಾಗಿದ್ದು, ಅವ್ಯವಹಾರ ಸ್ಪಷ್ಟವಾಗಿ ಗೋಚರಿಸುತ್ತಿವೆ. ಯೋಜನೆ ಪರಿಪೂರ್ಣವಾದರೆ ಪುರಸಭೆ 90 ಲಕ್ಷ ರೂ. ಮೊತ್ತ ಬಿಡುಗಡೆ ಮಾಡಬೇಕು. ಯೋಜನೆ ನನೆಗುದಿಗೆ ಬಿದ್ದಿರುವುದರಿಂದ ಪುರಸಭೆಯಿಂದ ಹಣ ಬಿಡುಗಡೆ ಮಾಡಬಾರದು ಎಂದು ಪ್ರತಿಪಕ್ಷ ಸದಸ್ಯರು ತ್ತಾಯಿಸಿದರು. ಸಾಲ್ಮರದ ಬಳಿ ನಡೆದ ಡಾಂಬರು ಕಾಮಗಾರಿ ಕಳಪೆಯಾಗಿದ್ದು, ಸಂಚಾರದ ವೇಳೆ ವಾಹನಗಳು ಹಂಪ್‌ನಿಂದ ಕುಣಿಯುತ್ತಿವೆ. ಕಾಮಗಾರಿ ಗುಣಮಟ್ಟ ಕಾಪಾಡುವಲ್ಲಿ ಪುರಸಭೆ ವಿಫಲವಾಗಿದೆ. ಪುರಸಭೆಗೆ ಬರುವ ಆದಾಯ ಖೋತವಾಗುತ್ತಿದ್ದು, ಮಧ್ಯವರ್ತಿಗಳು ಮತ್ತು ಅಧಿಕಾರಿಗಳು ಲಕ್ಷಗಟ್ಟಲೆ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಅಶ್ಪಕ್ ಅಹಮ್ಮದ್ ಹರಿಹಾಯ್ದರು.

    ತ್ಯಾಜ್ಯ ವಿಲೇವಾರಿ ಬಲುದೂರ: ಶುಭದ ರಾವ್ ಮಾತನಾಡಿ, ಕಸ ವಿಲೇವಾರಿ ಸಮಸ್ಯೆ ಗಂಭೀರವಾಗಿದೆ. ವಾರಗಟ್ಟಲೆ ಮನೆಗಳಿಗೆ ವಾಹನಗಳು ತೆರಳುತ್ತಿಲ್ಲ ಎಂದರು. ಆರೋಗ್ಯಾಧಿಕಾರಿ ಲೈಲಾ ಥಾಮಸ್ ಮಾತನಾಡಿ, ಶೀಘ್ರ ವಾಹನಗಳು ದುರಸ್ತಿಯಾಗಲಿದ್ದು, ಜನರ ಸೇವೆಗೆ ಲಭ್ಯವಾಗಲಿದೆ ಎಂದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts