More

    ಶಾಲಾ ಪಠ್ಯದಲ್ಲಿ ಗಜಲ್ ಅಳವಡಿಸಲಿ: ಕವಿ ಅಲ್ಲಾ ಗಿರಿರಾಜ

    ಕೊಪ್ಪಳ: ಕೊಪ್ಪಳ ಜಿಲ್ಲೆಯಾಗಿ 25 ವರ್ಷ ತುಂಬಿದ್ದು, ಈ ಸಂಭ್ರಮದ ರಜತ ಮಹೋತ್ಸವ ಕೇವಲ ನಗರಕ್ಕೆ ಸೀಮಿತವಾಗದೆ ಪ್ರತಿ ತಾಲೂಕು ಹಾಗೂ ಪ್ರತಿ ಹಳ್ಳಿಯಲ್ಲಿ ಆಚರಿಸಿದರೆ ಅರ್ಥಪೂರ್ಣವಾಗುತ್ತದೆ ಎಂದು ಗಜಲ್ ಕವಿ ಅಲ್ಲಾ ಗಿರಿರಾಜ ಹೇಳಿದರು.


    ನಗರದ ಸಾಹಿತ್ಯ ಭವನದಲ್ಲಿ ರಜತ ಮಹೋತ್ಸವದ ಎರಡನೇ ದಿನವಾದ ಶನಿವಾರ ಏರ್ಪಡಿಸಿದ್ದ ಗಜಲ್ ಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಮೊದಲ ಬಾರಿಗೆ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಜಲ್ ಗೋಷ್ಠಿ ಹಮ್ಮಿಕೊಂಡಿದ್ದು ಖುಷಿ ನೀಡಿದೆ. ಸರ್ಕಾರ ಗಜಲ್ ಕವಿಗಳನ್ನು ಅಕಾಡೆಮಿ, ಸಾಹಿತ್ಯ ಪ್ರಾಧಿಕಾರಗಳಲ್ಲಿ ಪರಿಗಣಿಸಬೇಕು. ಗಜಲ್ ಸಾಹಿತ್ಯವನ್ನು ಕಾವ್ಯ ರಾಣಿ ಎಂದು ಕರೆಯಲಾಗುತ್ತದೆ. ಕವಿತೆ ಮೂಲಕ ದೇಶ ಕಟ್ಟಬೇಕಿದೆ. ಕವಿಯಾದವರು ಅಧ್ಯಯನಶೀಲರಾಗಬೇಕು. ಅಲ್ಲದೆ ರೈತರು, ಮಹಿಳೆಯರು ಹಾಗೂ ಮಕ್ಕಳ ಧ್ವನಿಯಾಗಬೇಕು. ಗಜಲ್‌ಗಳನ್ನು ಪಠ್ಯದಲ್ಲಿ ಅಳವಡಿಸಿದರೆ ಮಕ್ಕಳಿಗೆ ಮಹತ್ವ ತಿಳಿಸಲು ಸಾಧ್ಯವಾಗಲಿದೆ ಎಂದರು ಅಭಿಪ್ರಾಯಪಟ್ಟರು.


    ಕಾರ್ಯಕ್ರಮ ಉದ್ಘಾಟಿಸಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಎಸ್.ಪಾಟೀಲ್ ಮಾತನಾಡಿ, ಜಿಲ್ಲೆ ಉದಯಕ್ಕೆ ಹೋರಾಟಗಾರರ ಶ್ರಮ, ತ್ಯಾಗ ಕಾರಣ. ಜಿಲ್ಲಾಡಳಿತ ರಜತ ಮಹೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು ಎಂದರು.


    ಕೃಷಿ ಇಲಾಖೆ ಉಪನಿರ್ದೇಶಕ ಸಹದೇವ ಯರಗೊಪ್ಪ, ‘ನೇಣಿಗೆ ಕೊರಳೊಡ್ಡುವ ಮುನ್ನ, ಮಡದಿ ಮಕ್ಕಳ ನೆನೆಯಬೇಕಿತ್ತು, ಕ್ಷಣಹೊತ್ತು ಸಾವಿನೂರಿಗೆ ಹೋಗುವ ಮುನ್ನ ಬಂದ ದಾರಿ ತಿರುಗಿ ನೋಡಬೇಕಿತ್ತು ಕ್ಷಣ ಹೊತ್ತು ಎನ್ನುವ ರೈತರ ಬಗ್ಗೆ ಗಜಲ್ ವಾಚನ ಮಾಡಿದರು. ಕವಿ ರಮೇಶ ಗಬ್ಬೂರು ಅವರ ‘ನಡೀತಿದ್ರೆ ನಿನಗ ಸಾವಿರ ಕಾಲು ಬಂದಂಗ ಆಗುತೈತಿ ಚೆಲುವಿ ನೀ ಯಾರವ್ವಾ, ನಿನ್‌ಜೊತೆ ಆಟಂದ್ರೆ ಸಾವು ಬಾಗಿಲದಾಗ ಇದ್ದಂಗ ಕಾಣತೈತಿ ಚೆಲುವಿ ನೀ ಯಾರವ್ವಾ’ ಗಜಲ್ ವಾಚನ ಗಮನ ಸೆಳೆಯಿತು. ಕವಿಗಳಾದ ಅನಸೂಯಾ ಜಾಗೀರದಾರ, ಅರುಣಾ ನರೇಂದ್ರ, ಮೆಹಬೂಬ ಮಕಾಂದಾರ, ವಿಜಯಲಕ್ಷ್ಮೀ ಕೊಟಗಿ, ಬಸವರಾಜ ಸಂಕನಗೌಡ, ಪುಷ್ಪಲತಾ ಏಳುಬಾವಿ, ಶಿವಶಂಕರ ಕಡದಿನ್ನಿ ಗಜಲ್ ಪ್ರಸ್ತುತ ಪಡಿಸಿದರು.

    ಇದಕ್ಕೂ ಮುನ್ನ ಕಲಾವಿದರಿಂದ ಸುಗಮ, ಜಾನಪದ ಸಂಗೀತ, ರಂಗಗೀತೆ ಹಾಗೂ ತೊಗಲುಗೊಂಬೆ ಪ್ರದರ್ಶನಗೊಂಡವು. ಬೆಳ್ಳಿ ಹಬ್ಬ ನಿಮಿತ್ತ ಆಯೋಜಿಸಿದ್ದ ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಎಂ.ಕಡಿ, ಜಿಪಂ ಉಪ ಕಾರ್ಯದರ್ಶಿ ಸಮೀರ್ ಮುಲ್ಲಾ, ಡಿಡಿಪಿಐ ಮುತ್ತುರಡ್ಡಿ ರಡ್ಡೇರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts