More

    ರೈತ ವಿರೋಧಿಯಾದರೆ ಸರ್ಕಾರಕ್ಕೆ ಉಳಿಗಾಲವಿಲ್ಲ

    ಚಿತ್ರದುರ್ಗ: ವಿದ್ಯುತ್‌ ಖಾಸಗೀಕರಣ ರೈತ ವಿರೋಧಿ ನೀತಿಯಾಗಿದ್ದು, ಇದು ಜಾರಿಯಾದರೆ ಸರ್ಕಾರಕ್ಕೆ ಖಂಡಿತ ಉಳಿಗಾಲವಿಲ್ಲ ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದರು.

    ಕೇಂದ್ರ ಸರ್ಕಾರ ವಿದ್ಯುತ್‌ ಕಾಯ್ದೆ ತಿದ್ದುಪಡಿಗೊಳಿಸಿ ಉತ್ಪಾದನೆ, ಪ್ರಸರಣ, ಸರಬರಾಜು ಎಲ್ಲವನ್ನೂ ಅಂಬಾನಿ, ಅದಾನಿ ಸೇರಿ ದೊಡ್ಡ ಕಂಪನಿಗಳಿಗೆ ವಹಿಸಿ ಖಾಸಗೀಕರಣಗೊಳಿಸಲು ಹುನ್ನಾರ ನಡೆಸಿದೆ. ಇದನ್ನು ವಿರೋಧಿಸಿ ಮೊದಲ ಹಂತದಲ್ಲಿ ಅ. 10ರಂದು ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲೂ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    ನೂತನ ವಿದ್ಯುತ್ ಕಾಯ್ದೆ ಜಾರಿಯಾದಲ್ಲಿ ರಾಜ್ಯದ 45 ಲಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ ದೊರೆಯುತ್ತಿದ್ದ ಹಾಗೂ 90 ಲಕ್ಷ ಕುಟುಂಬಗಳಿಗೆ ಭಾಗ್ಯಜ್ಯೋತಿ, ಕುಟೀರಜ್ಯೋತಿ ಯೋಜನೆಯಡಿ ನೀಡುತ್ತಿದ್ದ ಉಚಿತ ವಿದ್ಯುತ್ ಸೌಲಭ್ಯ ಸ್ಥಗಿತವಾಗಲಿದೆ. ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಮುಚ್ಚುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರೊಡನೆ ಪೂರ್ವಪರ ಚರ್ಚಿಸದೆ ಒಪ್ಪಿಗೆ ನೀಡಿರುವುದು ಖಂಡನೀಯ. ಹಿಂಪಡೆಯದಿದ್ದರೆ ಸರ್ಕಾರ ಕಿತ್ತೊಗೆಯುವ ಶಕ್ತಿ ರೈತಸಮೂಹಕ್ಕಿದೆ ಎಂದು ಪುನರುಚ್ಚರಿಸಿದರು.

    ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಈಗಾಗಲೇ ರೈತರ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್‌ ಅಳವಡಿಸಲಾಗಿದೆ. ಇದು ಹೀಗೆ ಮುಂದುವರೆದರೆ ಮೀಟರ್‌ ಧ್ವಂಸಗೊಳಿಸುವುದು ಕಷ್ಟವೇನಲ್ಲ ಎಂದ ಅವರು, ಈಚೆಗೆ ಸಾಲ ಸಂಬಂಧ ರೈತರ ಆಸ್ತಿಪಾಸ್ತಿ ಜಪ್ತಿ ಮಾಡುವುದನ್ನು ನಿಷೇಧಿಸಲು ಕಾನೂನು ತಿದ್ದುಪಡಿಗೊಳಿಸುವುದಾಗಿ ಸಿಎಂ ಘೋಷಿಸಿರುವುದು ಸ್ವಾಗತಾರ್ಹ. ಇದರ ಬದಲು ಸರ್ಕಾರವೇ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

    ಸತತ 14  ವರ್ಷ ಬರಗಾಲ, 5  ವರ್ಷ ಅನಾವೃಷ್ಠಿ ಉಂಟಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಅದಕ್ಕಾಗಿ ರೈತರ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ  ಅ. 2ರಂದು ಬೆಳಗ್ಗೆ 11ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ 5ರಂದು ಶ್ರೀರಂಗಪಟ್ಟಣ, ಮದ್ದೇರು, ಮಳವಳ್ಳಿ, ಕೆ.ಆರ್.ಪೇಟೆ, ಹುಣಸೂರು, ಟಿ.ನರಸೀಪುರ, ನಂಜನಗೂಡು ಸೇರಿ 8 ಕಡೆ ಎತ್ತು, ಹಸು, ಕುರಿ, ಎಮ್ಮೆ, ಕೋಳಿ ಸಮೇತ ಧರಣಿ ನಡೆಸಲು ತೀರ್ಮಾನಿಸಿದ್ದೇವೆ ಎಂದರು.

    ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ಪ್ರಧಾನಿ ಮೋದಿ ಅವರು ದುಡಿಯುವ ವರ್ಗವನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಸುಳ್ಳು ಭರವಸೆ ನೀಡಿ ರೈತರು, ಜನಸಾಮಾನ್ಯರ ಮೇಲೆ ಹೊರೆ ಹೆಚ್ಚಿಸುತ್ತಿದ್ದಾರೆ. ದೊಡ್ಡ ಕಾರ್ಪೋರೇಟ್‌ ಕಂಪನಿಗಳ ಪರ ಕಾಯ್ದೆ ರೂಪಿಸಿ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ದೂರಿದರು.

    ಸಂಘದ ಸಂಘಟನಾ ಕಾರ್ಯದರ್ಶಿ ದರ್ಶನ್ ಪುಟ್ಟಣ್ಣಯ್ಯ, ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ, ಎನ್.ಸಿ.ಮಧುಚಂದನ್, ಪ್ರಸನ್ನ ಎನ್. ಗೌಡ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ ಬಾಬು, ಪಿ.ಗೋಪಾಲ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ವಿಜಯಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts