More

    ಜಾನುವಾರು ಆಹಾರ ದುಬಾರಿ: ಸಾಕಣೆದಾರರ ಆದಾಯಕ್ಕೆ ಕತ್ತರಿ

    ಪ್ರಕಾಶ್ ಮಂಜೇಶ್ವರ ಮಂಗಳೂರು
    ಕರೊನಾ ಆತಂಕದ ಪ್ರಥಮ ಲಾಕ್‌ಡೌನ್ ಬಳಿಕ ನಾಗಾಲೋಟದಲ್ಲಿ ಏರುತ್ತಿರುವ ಜಾನುವಾರು ಆಹಾರ ಬೆಲೆ ಏರಿಕೆ ರೈತರ ಪ್ರಧಾನ ಆದಾಯ ಮೂಲಕ್ಕೆ ಕತ್ತರಿ ಹಾಕಿದೆ.
    ಸುಮಾರು ಒಂದೂವರೆ ವರ್ಷದಲ್ಲಿ ಕೋಳಿ ಆಹಾರ ದರ ಇಮ್ಮಡಿಯಾಗಿದೆ. ದನ, ಎಮ್ಮೆ ಹಿಂಡಿ ಅರ್ಧ ಕ್ವಿಂಟಾಲ್‌ಗೆ 300 ರೂ.ನಷ್ಟು ಅಧಿಕವಾಗಿದೆ. ಆದರೆ ಇದಕ್ಕೆ ಪೂರಕವಾಗಿ ಹಾಲಿನ ದರ ಏರಿಕೆಯಾಗಿಲ್ಲ. ಮೊಟ್ಟೆ, ಕೋಳಿ ಮಾಂಸ ಮುಂತಾದ ಅದರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ದರ ಏರಿಕೆಯಾದರೂ ಸಾಕಣೆದಾರರಿಗೆ ಸೇರುತ್ತಿಲ್ಲ.

    ಗ್ರಾಮೀಣ ಭಾಗದ ರೈತರು ಕಡಿಮೆ ಹಿಂಡಿ ಹಾಕಿ ಹೇಗೋ ಕಷ್ಟದಲ್ಲಿ ದನ, ಎಮ್ಮೆ ಸಾಕುತ್ತಿದ್ದಾರೆ. ಆದರೆ, ಹಿಂಡಿಯನ್ನು ಹೆಚ್ಚು ಬಳಸಿ ಹಾಲು ನಿರೀಕ್ಷಿಸುವವರಿಗೆ ಲಾಭ ಪಡೆಯುವುದು ಸಾಧ್ಯವಾಗುತ್ತಿಲ್ಲ. ಇದೇ ರೀತಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ವಾಣಿಜ್ಯ ಉದ್ದೇಶದಿಂದ ಕೋಳಿ ಸಾಕುತ್ತಿರುವವರ ಪೈಕಿ ಅನೇಕರು ಈ ಕ್ಷೇತ್ರದಿಂದಲೇ ದೂರ ಸರಿದಿದ್ದಾರೆ. ಬ್ರೋಯಿಲರ್ ಮಾಂಸದ ಕೋಳಿಗಳನ್ನು ಪೂರೈಸುವ ಮಂಗಳೂರಿನ ಒಂದು ಕಂಪನಿಯೇ ತನ್ನ ಅಧೀನದ ಗ್ರಾಹಕರಿಗೆ ಆಹಾರ ಪೂರೈಸಲಾಗದೆ ಮುಚ್ಚಿ ಹೋಯಿತು.

    ಇತ್ತೀಚೆಗೆ ಕಾಸರಗೋಡಿನಲ್ಲಿ ಜರುಗಿದ ರೈತರು ಮತ್ತು ಜಾನುವಾರು ಆಹಾರ ಪೂರೈಕೆದಾರರ ಸಭೆಯಲ್ಲಿ ಈ ವಿಷಯದ ಗಂಭೀರತೆ ಕುರಿತು ಚರ್ಚೆ ನಡೆದಿದೆ. ಒಮ್ಮೆಲೇ ಕೋಳಿ ಸಾಕುವುದನ್ನು ಪೂರ್ಣ ನಿಲ್ಲಿಸುವುದರಿಂದ ಇಡೀ ಉದ್ಯಮಕ್ಕೆ ಹೊಡೆತ ಬೀಳುತ್ತದೆ. ಆಹಾರ ಪೂರೈಕೆದಾರರಿಗೂ ದೊಡ್ಡ ಪ್ರಮಾಣದ ನಷ್ಟ ಉಂಟಾಗುತ್ತದೆ. ಹಿಂದೆ 1000 ಸಾಕುತ್ತಿದ್ದವರು ಕನಿಷ್ಠ 200- 300 ಆದರೂ ಸಾಕುವುದು ಒಳ್ಳೆಯದು. ಇಲ್ಲದಿದ್ದರೆ ಭವಿಷ್ಯದಲ್ಲಿ ನಾವೆಲ್ಲರೂ ಕಷ್ಟಪಡಬೇಕಾಗುತ್ತದೆ ಎಂದು ಆಹಾರ ಪೂರೈಕೆದಾರರು ಸಾಕಣೆದಾರರಿಗೆ ಸಲಹೆ ನೀಡಿದ್ದಾರೆ.

    ಕಾರಣ ಹಲವು: ಡೀಸೆಲ್, ಪೆಟ್ರೋಲ್ ದರ ತೀವ್ರ ಏರಿಕೆ, ಸೋಯಾಬಿನ್ ವಿದೇಶಗಳಿಗೆ ರಫ್ತು ಆಗುವುದರಿಂದ ಸೃಷ್ಟಿಯಾದ ಕೊರತೆ, ಅಕ್ಕಿ ತೌಡು ದರ ಏರಿಕೆ ಪಶು ಆಹಾರ ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತದೆ. ಜಾನುವಾರು ಆಹಾರದಲ್ಲಿ ಸೋಯಾಬಿನ್ ಪ್ರಧಾನ ಕಚ್ಛಾ ವಸ್ತು. ಒಂದು ಕಾಲದಲ್ಲಿ ಯಾರಿಗೂ ಬೇಡವಾಗಿದ್ದ ಸೋಯಾಬಿನ್‌ಗೆ ಈಗ ದುಬಾರಿ ಬೆಲೆ. ಎರಡು ತಿಂಗಳ ಹಿಂದೆ ಕೆ.ಜಿ.ಗೆ 35 ರೂ. ಇದ್ದ ಸೋಯಾಬಿನ್ ದರ ಈಗ 103 ರೂ.ಗೆ ತಲುಪಿದೆ ಎನ್ನುತ್ತಾರೆ ಪುತ್ತೂರಿನ ಈಶ್ವರ ಮಂಗಲದಲ್ಲಿ ಹಿಂದೆ ಆಹಾರ ಪೂರೈಕೆ ಕಂಪನಿ ನಡೆಸುತ್ತಿದ್ದ ಕೇಶವ.

    ಕೋಳಿ ಆಹಾರ ದರ (50 ಕೆ.ಜಿ.ಗೆ):
    ಆಹಾರ ಮೊದಲು ಈಗ
    ಪ್ರಿ ಸ್ಟಾರ್ಟರ್ 1,400 2,400 ರೂ.
    ಸ್ಟಾರ್ಟರ್ 1,320 2,320 ರೂ.
    ಫಿನಿಶರ್ 1,300 2,300 ರೂ.

    ಲಾಕ್‌ಡೌನ್ ಸಂದರ್ಭ ಕೆಲಸ ಕಳೆದುಕೊಂಡವರು, ವಿದೇಶ ಹಾಗೂ ದೂರದ ಊರುಗಳಿಂದ ಆಗಮಿಸಿದವರು ಅನೇಕ ಮಂದಿ ಊರಿನಲ್ಲಿ ಬೇಸಾಯ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಮುಂತಾದ ಕಸುಬುಗಳಲ್ಲಿ ತೊಡಗಿದ್ದಾರೆ. ಬೆಲೆ ಏರಿಕೆಯಿಂದ ಸೃಷ್ಟಿಯಾಗಿರುವ ತಲ್ಲಣಗಳಿಂದ ಹಳ್ಳಿ ಬದುಕು ಸ್ವೀಕರಿಸಲು ಮುಂದಾಗಿರುವ ಯುವ ಸಮಾಜಕ್ಕೆ ಭ್ರಮ ನಿರಸನವಾಗುವುದನ್ನು ತಪ್ಪಿಸಲು ಸರ್ಕಾರ ಸೂಕ್ತ ಕ್ರಮಗೊಳ್ಳಬೇಕಾಗಿದೆ.
    – ಮೊಯ್ದೀನ್ ಕುಂಞಿ, ಕೃಷಿಕ, ಮಂಜೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts