More

  ಅಕ್ಕಿ ಕಳವು ಕಾನೂನು ಕ್ರಮ ಕೈಗೊಳ್ಳಲಿ

  ಶಹಾಪುರ: ನಗರದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಂಘ(ಟಿಎಪಿಸಿಎಂಎಸ್)ದ ಗೋದಾಮಿನಲ್ಲಿದ್ದ ಅಕ್ಕಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಅಧ್ಯಕ್ಷ ಗುರುನಾಥರಡ್ಡಿ ಮತ್ತು ಸಚಿವರ ಆಪ್ತ, ಆರೋಪಿ ಮಲಿಕ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಕಾನೂನು ಕ್ರಮ ಜರುಗಿಸುವಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಎಂಎಲ್‌ಸಿ ಎನ್.ರವಿಕುಮಾರ್ ಆಗ್ರಹಿಸಿದರು.

  ನಗರದಲ್ಲಿ ಪಕ್ಷ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕುರಿ ಕಾಯಲು ತೋಳ ನೇಮಿಸಿದಂತೆ ಡಿವೈಎಸ್‌ಪಿ ಜಾವೀದ್ ಅವರನ್ನು ಈ ಪ್ರಕರಣದ ತನಿಖೆಗೆ ನೇಮಿಸಿರುವುದು ಹಾಸ್ಯಾಸ್ಪದ. ಶಹಾಪುರ ಮತಕ್ಷೇತ್ರದಲ್ಲಿ ಬಡವರ ಪಾಲಿನ ಅಕ್ಕಿ ದೋಚಿರುವುದರಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳು ಯಾರು? ಇವರ ಬೆಂಬಲಕ್ಕೆ ನಿಂತವಾರಾರು? ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

  ಆಹಾರ ಇಲಾಖೆ ಅಧಿಕಾರಿಗಳು ಈ ಕೃತ್ಯಕ್ಕೆ ಕೈ ಜೋಡಿಸಿರುವ ವಿಷಯ ನಾಗರಿಕರಿಗೆ ಗೊತ್ತಿದೆ. ಟಿಎಪಿಸಿಎಂಎಸ್ ಅಧ್ಯಕ್ಷ ಗುರುನಾಥರಡ್ಡಿ ಈ ಕೇಸ್‌ನಲ್ಲಿ ಶಾಮೀಲಾಗದಿದ್ದರೆ ಯಾಕೆ ಊರು ಬಿಟ್ಟು ಓಡಬೇಕಿತ್ತು? ಮೊಬೈಲ್ ಸ್ವಿಚ್ ಆಫ್ ಯಾಕೆ ಮಾಡಬೇಕು? ಪ್ರಾಮಾಣಿಕರಾಗಿದ್ದರೆ ನಗರದಲ್ಲಿಯೇ ಇದ್ದು ತನಿಖೆ ಎದುರಿಸಬೇಕಿತ್ತು ಎಂದು ಹರಿಹಾಯ್ದರು.

  ಸಚಿವರ ಆಪ್ತ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಆತನ ವಾಹನಗಳ ನಂಬರ್ ದೋ (೨) ಇದೆಯಂತೆ. ಕೆಲಸವೂ ದೋ ನಂಬರ್‌ನಂತಿದೆ. ಪ್ರಕರಣ ದಾಖಲಾಗಿ ೨೦ ದಿನವಾದರೂ ಪ್ರಮುಖ ಆರೋಪಿಗಳನ್ನು ಠಾಣೆಗೆ ಕರೆದು ವಿಚಾರಿಸದಿರುವುದು ಸೋಜಿಗದ ವಿಷಯ ಎಂದು ಕಿಡಿಕಾರಿದರು.

  ಸ್ವ ಕ್ಷೇತ್ರದಲ್ಲಿ ೨ ಕೋಟಿಗೂ ಹೆಚ್ಚು ಮೌಲ್ಯದ ಹಗರಣ ನಡೆದಿದ್ದರೂ ಸಚಿವ ಶರಣಬಸಪ್ಪ ದರ್ಶನಾಪುರ ಆರೋಪಿಗಳ ರಕ್ಷಣೆಯಲ್ಲಿ ತೊಡಗಿರುವುದು ದುರಂತ. ಈ ಬಗ್ಗೆ ಮತದಾರರು ಚಿಂತಿಸಬೇಕಿದೆ. ಇಡೀ ಕ್ಷೇತ್ರದ ಜನತೆಗೆ ನಿಜವಾದ ಅಕ್ಕಿ ಕಳ್ಳರಾರು ಎಂಬುದು ಗೊತ್ತಿದ್ದರೂ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ ಎಂದು ರವಿಕುಮಾರ್ ಸಿಡಿಮಿಡಿಗೊಂಡರು.

  ಪ್ರಕರಣದ ಹಿಂದೆ ಸಚಿವ ದರ್ಶನಾಪುರ ಇರುವುದು ಜನರ ಗಮನಕ್ಕೆ ಬಂದಿದ್ದು, ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

  ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ. ಪಾಟೀಲ್, ಡಾ.ಚಂದ್ರಶೇಖರ ಸುಬೇದಾರ, ಬಿಜೆಪಿ ಜಿಲ್ಲಾಧ್ಯಕ್ಷ ಶರಣಭೂಪಾಲರಡ್ಡಿ ನಾಯ್ಕಲ್, ಲಲಿತಾ ಅನಪುರ, ಬಸವರಾಜ ವಿಭೂತಿಹಳ್ಳಿ, ನಗರ ಅಧ್ಯಕ್ಷ ದೇವಿಂದ್ರ ಕೊನೇರ ಮಾತನಾಡಿದರು. ಗುರು ಕಾಮಾ, ಮಲ್ಲಿಕಾರ್ಜುನ ಕಂದಕೂರ ಇತರರಿದ್ದರು.
  ನಗರದ ಸಿಬಿ ಕಮಾನ್‌ನಿಂದ ಶುರುವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತ ತಲುಪಿದ ಬಳಿಕ ತಹಸೀಲ್ದಾರರಿಗೆ ಮನವಿಪತ್ರ ಸಲ್ಲಿಸಲಾಯಿತು.

  ಶಹಾಪುರ ಕ್ಷೇತ್ರದಲ್ಲಿ ಅಕ್ಕಿ ಲೂಟಿ, ಮರಳು ಸಾಗಣೆ, ಕಟ್ಟಡ ನಿರ್ಮಾಣದಂಥ ಹಲವು ಅಕ್ರಮಗಳೇ ಸಾಕ್ಷಿಯಾಗಿವೆ. ಇವೆಲ್ಲ ಸಚಿವ ದರ್ಶನಾಪುರರ ಅನತಿಯಂತೆ ಕೆಲಸ ನಡೆಯುತ್ತಿವೆ. ಹೀಗಾಗಿ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.
  | ಅಮೀನರಡ್ಡಿ ಯಾಳಗಿ ಬಿಜೆಪಿ ಮುಖಂಡ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts