More

    ಬದುಕು ಕಟ್ಟಿಕೊಟ್ಟ ಭತ್ತ ಕೃಷಿ

    ಸೋಮವಾರಪೇಟೆ: ಅಕಾಲಿಕ ಮಳೆ, ಮುಂಗಾರು ವಿಳಂಬ, ಕಾರ್ಮಿಕರ ಕೊರತೆ, ಅಧಿಕ ಉತ್ಪಾದನಾ ವೆಚ್ಚ, ರೋಗಬಾಧೆ, ಕಡಿಮೆ ಬೆಲೆ, ಗಗನಕ್ಕೇರಿದ ಗೊಬ್ಬರ, ಕೀಟನಾಶಕ ಬೆಲೆ ಇಂತಹ ಕಾರಣಗಳನ್ನು ನೀಡಿ ಭತ್ತ ಕೃಷಿಯಿಂದ ವಿಮುಕ್ತರಾಗುತ್ತಿರುವ ಸಂದರ್ಭದಲ್ಲಿ ಇಲ್ಲೊಬ್ಬ ರೈತ ಭತ್ತ ಕೃಷಿಯಲ್ಲೇ ನೆಮ್ಮದಿ ಕಂಡುಕೊಂಡಿದ್ದಾರೆ.

    ತಾಲೂಕಿನ ಕಿತ್ತೂರು ಗ್ರಾಮದ ಪ್ರಗತಿಪರ ಕೃಷಿಕ ಲಕ್ಷ್ಮೀಶೆಟ್ಟಿ ಇಳಿ ವಯಸ್ಸಿನಲ್ಲಿಯೂ ಭತ್ತ ಕೃಷಿ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
    ವಯಸ್ಸು 77 ಆಗಿದ್ದರೂ ಮುಂಜಾನೆಯೇ ಕೃಷಿಯಲ್ಲಿ ತೊಡಗಿಕೊಳ್ಳುವ ಇವರ ಕಾಯಕ ಸ್ಮರಣೀಯ. ಭತ್ತ ನಾಟಿ ಸಂದರ್ಭ ಜೋಡೆತ್ತು ಕಟ್ಟಿಕೊಂಡು ಮಣ್ಣನ್ನು ಸಮತಟ್ಟು ಮಾಡುವ ಕೆಲಸ ಮಾಡುತ್ತಾರೆ. ಇವರ ಪತ್ನಿ ಭಾಗ್ಯಮ್ಮ ಪತಿಗೆ ಕೆಲಸಗಳಲ್ಲಿ ಸಾಥ್ ನೀಡುತ್ತಾರೆ. ಈಗಲೂ ಮಹಿಳಾ ಕಾರ್ಮಿಕರೊಂದಿಗೆ ಭತ್ತ ನಾಟಿ ಮಾಡುತ್ತಾರೆ.

    ಲಕ್ಷ್ಮೀಶೆಟ್ಟಿ ಅವರು 17 ವರ್ಷಕ್ಕೆ ತಂದೆ ರಂಗಶೆಟ್ಟಿ ಅವರೊಂದಿಗೆ ಭತ್ತ ಕೃಷಿಯಲ್ಲೆ ತೊಡಗಿಕೊಂಡರು. ಕಾಡಾನೆ ಹಾವಳಿ, ಅತಿವೃಷ್ಟಿ ನಡುವೆ ಭತ್ತ ಕೃಷಿಯಲ್ಲಿ ಯಶ ಕಂಡಿದ್ದರು. 5 ಎಕರೆ ಭೂಮಿಯಲ್ಲಿ ಭತ್ತ, ನಂತರ ತರಕಾರಿ ಬೆಳೆದರು. ಕ್ರಮೇಣ 10 ಎಕರೆ ಜಾಗ ಖರೀದಿಸಿದರು. 35 ವರ್ಷಗಳ ಹಿಂದೆ ಕಾಫಿ ಬೆಳೆಯಲು ಪ್ರಾರಂಭಿಸಿದರು. ಪ್ರಸಕ್ತ 10ಎಕರೆ ಜಾಗದಲ್ಲಿ ರೋಬಸ್ಟಾ ಕಾಫಿ ಬೆಳೆಯುತ್ತಿದ್ದಾರೆ. 5 ಎಕರೆ ಭತ್ತ ಭೂಮಿಯಲ್ಲಿ ಭತ್ತ ಕೃಷಿ ಮಾಡುತ್ತಿದ್ದಾರೆ.

    ಕಾಫಿ ತೋಟದಲ್ಲಿ ಕಿತ್ತಳೆ, ನಿಂಬೆ: ಪ್ರಸಕ್ತ ಸಾಲಿನಲ್ಲಿ ಮುಂಗಾರು ವಿಳಂಬವಾಗಿತ್ತು. ಶೇ.50ರಷ್ಟು ವಾಡಿಕೆ ಮಳೆ ಕೊರತೆಯಾಗಿತ್ತು. ಆದರೂ ಧೃತಿಗೆಡದ ಲಕ್ಷ್ಮೀಶೆಟ್ಟಿ ಅವರು 5ಎಕರೆಯಲ್ಲಿ ಒಂಟಿ ತಾಳು ಎಂಬ ಗ್ರಾಮೀಣ ಹೆಸರಿನ ಹೈಬ್ರಿಡ್ ಭತ್ತವನ್ನು ಬೆಳೆದಿದ್ದು, ಈಗ ಕೊಯ್ಲಿಗೆ ಬಂದಿದೆ. ಭತ್ತ ಕೃಷಿಯಲ್ಲಿ ಹೆಚ್ಚಿನ ಅನುಭವವಿದ್ದು, ಪ್ರಾರಂಭದಿಂದಲೂ ಅನೇಕ ಅನೇಕ ತಳಿಯ ಭತ್ತ ಬೆಳೆದಿದ್ದಾರೆ. ಚಂಡಿ ಬಿಳಿಯ, ಕೆಂಬತ್ತಿ, ಕೇಸರಿ, ಬರೋಡ, ಇಂಟಾನ್, ತುಂಗ, ತನು ಹೆಸರಿನ ಭತ್ತ ಬೆಳೆದಿರುವುದು ವಿಶೇಷ.

    ಕೈಹಿಡಿದ ಕಾಳುಮೆಣಸು: ಕಾಫಿ ತೋಟದೊಳಗೆ ಮರಗಳಿಗೆ ಕಾಳುಮೆಣಸು ಹಾಕಿದ್ದು, ಉತ್ತಮ ಫಸಸಲು ತೆಗೆಯುತ್ತಿದ್ದಾರೆ. ಅಕಾಲಿಕ ಮಳೆಯಿಂದ ಕಾಫಿ ಫಸಲು ಕೈಕೊಟ್ಟರೆ, ಕಾಳುಮೆಣಸಿನಿಂದ ಬಂದ ಅದಾಯವನ್ನು ಕಾಫಿ ತೋಟ ನಿರ್ವಹಣೆಗೆ ಹಾಕುತ್ತಾರೆ. ಕಾಫಿಯಲ್ಲಿ ಹೆಚ್ಚಿನ ಆದಾಯ ಬಂದರೆ ಭತ್ತ ಕೃಷಿಗೆ ವಿನಿಯೋಗಿಸಿ ಉತ್ತಮ ಫಸಲು ಪಡೆಯುತ್ತಾರೆ.

    ಹೈನುಗಾರಿಕೆಯಲ್ಲೂ ಸೈ: ಹಲವು ದಶಕಗಳ ಕಾಲ ಕೃಷಿಯೊಂದಿಗೆ ಹೈನುಗಾರಿಕೆಯನ್ನೂ ಮಾಡಿದ್ದಾರೆ. ಎಮ್ಮೆ ಮತ್ತು ಹಸುಗಳನ್ನು ಸಾಕಿದ್ದು, ಹಾಲಿನಿಂದಲೂ ಆದಾಯ ಪಡೆಯುತ್ತಿದ್ದಾರೆ. ಇದರೊಂದಿಗೆ ಜಾನುವಾರುಗಳ ಗೊಬ್ಬರವನ್ನು ಭತ್ತ ಕೃಷಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

    ಹಿರಿಯ ಸಹಕಾರಿ: ಲಕ್ಷ್ಮೀಶೆಟ್ಟರು ಸಹಕಾರ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಹಂಡ್ಲಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ, ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಹಾಲಿ ನಿರ್ದೇಶಕರಾಗಿದ್ದಾರೆ. ಇವರು ಅಧ್ಯಕ್ಷರಾಗಿದ್ದ ಸಂದರ್ಭ ಕೃಷಿಕರಿಗೆ ಹೆಚ್ಚಿನ ಸಾಲ ಸೌಲಭ್ಯ ಒದಗಿಸಿ, ರೈತರು ಭತ್ತ ಕೃಷಿಯನ್ನು ಮುಂದುವರಿಸುವಂತೆ ಪ್ರೋತ್ಸಾಹ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಹೆಚ್ಚಿನ ಕೃಷಿಕರು ಈಗಲೂ ಭತ್ತ ಕೃಷಿಯನ್ನು ಮಂದುವರಿಸಿದ್ದಾರೆ.

    ಭತ್ತ ಬೆಳೆದರೆ ನಷ್ಟ ಅನುಭವಿಸಬೇಕು ಎಂದು ಬಹುತೇಕ ರೈತರು, ಭತ್ತ ಗದ್ದೆಯನ್ನು ಮುಚ್ಚಿ ಕಾಫಿ ತೋಟ ಮಾಡುತ್ತಿದ್ದಾರೆ. ಭತ್ತ ಕೊಯ್ಲು ಮಾಡಲು ಕಾರ್ಮಿಕ ಕೊರತೆ ಇದೆ. ಹೆಚ್ಚಿನ ಕೂಲಿ ಕೊಡಬೇಕು. ಕೊಯ್ಲು ಸಂದರ್ಭದಲ್ಲಿ ಅಕಾಲಿಕ ಮಳೆ ಸುರಿದರೆ ಫಸಲಿಗೆ ಹಾನಿಯಗಲಿದೆ. ಹೊಡೆ ಬರುವ ಸಂದರ್ಭ ಮಳೆ ಬಿದ್ದರೆ ಭತ್ತ ಜೊಳ್ಳಾಗುತ್ತದೆ. ಜೂನ್, ಜುಲೈನಲ್ಲಿ ಮುಂಗಾರು ಕೈಕೊಟ್ಟರೆ ನಾಟಿ ವಿಳಂಬವಾಗುತ್ತದೆ. ಕೃಷಿ ಇಲಾಖೆಯಿಂದ ಫಸಲು ನಷ್ಟಕ್ಕೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ರೋಗ, ಭತ್ತಕ್ಕೆ ಬೆಲೆ ಇಲ್ಲದಿರುವ ಕಾರಣದಿಂದ ಭತ್ತ ಕೃಷಿಯನ್ನು ರೈತರು ತ್ಯಜಿಸುತ್ತಿದ್ದಾರೆ ಎಂದು ಲಕ್ಷ್ಮೀಶೆಟ್ಟಿ ಬೇಸರ ವ್ಯಕ್ತಪಡಿಸಿದರು.

    ಮಿಶ್ರ ಬೇಸಾಯದಿಂದ ನನಗೆ ಕೃಷಿ ಲಾಭದಾಯಕವಾಗಿದೆ. ನನ್ನ ಕುಟುಂಬ ಕೃಷಿ ಭೂಮಿಯಲ್ಲೇ ಹೆಚ್ಚಿನ ಸಮಯ ಕಳೆಯುವುದರಿಂದ ಫಸಲು ಕೈಹಿಡಿಯುತ್ತಿದೆ. ಭತ್ತ ಕೃಷಿ ನಿಜವಾಗಿಯೂ ಕಷ್ಟವಾಗುತ್ತಿದೆ. ಸರ್ಕಾರ ಭತ್ತ ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡಬೇಕು. ಎಕರೆಗೆ ವಾರ್ಷಿಕ 20 ರಿಂದ 30 ಸಾವಿರ ರೂ.ಪ್ರೋತ್ಸಾಹ ಧನ ನೀಡಿದರೆ, ಭತ್ತ ಬೆಳೆಯುತ್ತಾರೆ. ಇಲ್ಲದಿದ್ದರೆ ಮುಂದಿನ ಹತ್ತು ವರ್ಷಗಳಲ್ಲಿ ಶೇ.70ರಷ್ಟು ಭತ್ತ ಭೂಮಿ, ತೋಟವಾಗಿ ಪರಿವರ್ತನೆ ಆಗಲಿದೆ. ಸೋಮವಾರಪೇಟೆ ತಾಲೂಕನ್ನು ಭತ್ತದ ಕಣಜ ಎಂದೇ ಕರೆಯುತ್ತಿದ್ದರು. ಪ್ರತಿ ರೈತ ಭತ್ತ ಬೆಳೆಯುತ್ತಿದ್ದ. ಹೆಚ್ಚು ಭತ್ತ ಬೆಳೆದ ಕೃಷಿಕನಿಗೆ ಶ್ರೀಮಂತಿಕೆ ಪಟ್ಟವನ್ನು ನೀಡಲಾಗುತ್ತಿತ್ತು. ಈಗ ಬದಲಾಗಿದೆ. ಸರ್ಕಾರ ರೈತರನ್ನು ಕೈಹಿಡಿಯಲೇಬೇಕು. ಭತ್ತ ಕೃಷಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು.
    ಲಕ್ಷ್ಮೀಶೆಟ್ಟಿ, ಪ್ರಗತಿಪರ ಕೃಷಿಕ. ಕಿತ್ತೂರು ಗ್ರಾಮ.


    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts