More

    ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

    ಹುಬ್ಬಳ್ಳಿ: ಇಲ್ಲಿಯ ಮಹಾನಗರ ಪಾಲಿಕೆಯ ವಾರ್ಡ್ ಮೀಸಲಾತಿ ಮತ್ತು ವಿಂಗಡಿತ ವಾರ್ಡ್​ಗಳ ಪರಿಮಿತಿಯಲ್ಲಿ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಪಕ್ಷ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.

    ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ ಹಳ್ಳೂರ ಅರ್ಜಿದಾರ ಆಗಿದ್ದು, ಧಾರವಾಡ ಹೈಕೋರ್ಟ್ ಪೀಠಕ್ಕೆ ಮಂಗಳವಾರ ರಿಟ್ ಅರ್ಜಿ ಸಲ್ಲಿಸಿದ್ದರು. ಬುಧವಾರ ಅರ್ಜಿ ಅಂಗೀಕಾರವಾಗಿದೆ.

    ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಿಂದೆ 67 ವಾರ್ಡ್​ಗಳಿದ್ದವು. ಅವುಗಳನ್ನು ಮರು ವಿಂಗಡಿಸಿ 82 ವಾರ್ಡ್​ಗಳನ್ನಾಗಿ ಮಾಡಲಾಗಿದೆ. ಆದರೆ, ಈ ವಿಭಾಗಗಳ ಪರಿಮಿತಿ ನಿಗದಿ ವೇಳೆ ಮತದಾರರ ಸಮಾನ ಹಂಚಿಕೆಗೆ ಆದ್ಯತೆ ನೀಡಿಲ್ಲ. 2011ರ ಜನಗಣತಿಯನ್ನು ಆಧಾರವಾಗಿ ಇಟ್ಟುಕೊಂಡು ಪ್ರಕ್ರಿಯ ಜರುಗಿಸಲಾಗಿದೆ. ಅಂದು 8.36 ಲಕ್ಷ ಮತದಾರರಿದ್ದರು. ಅಂದರೆ, ಸರಾಸರಿ ಒಂದು ವಾರ್ಡ್​ಗೆ 10 ಸಾವಿರದಷ್ಟು ಮತದಾರರು ಇರಬೇಕಾಗಿತ್ತು. ಆದರೆ, ಕೆಲವು ವಾರ್ಡ್​ಗಳಲ್ಲಿ 15 ಸಾವಿರದಷ್ಟು, ಮತ್ತೆ ಕೆಲವಕ್ಕೆ 4500-5000 ಮತದಾರರು ಇರುವಂತೆ ಪರಿಮಿತಿ ನಿಗದಿ ಮಾಡಲಾಗಿದೆ.

    ಮೀಸಲಾತಿ ನಿಗದಿಯಲ್ಲಿಯೂ ಸರಿಯಾದ ಸೂತ್ರ ಪಾಲನೆಯಾಗಿಲ್ಲ. ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 23 ವಾರ್ಡ್​ಗಳಲ್ಲಿ 18ನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಇದು ಅವೈಜ್ಞಾನಿಕವಾಗಿದೆ. ಆದ್ದರಿಂದ ಇಂಥ ಅನ್ಯಾಯಗಳನ್ನು ಸರಿಪಡಿಸಿ, ಎಲ್ಲರಿಗೂ ಸಮ್ಮತವಾಗುವ ರೀತಿಯಲ್ಲಿ ಮೀಸಲಾತಿ ಹಂಚಿಕೆ ಮತ್ತು ವಾರ್ಡ್ ಪರಿಮಿತಿಗಳನ್ನು ನಿಗದಿಪಡಿಸಿ ಚುನಾವಣೆ ನಡೆಸಬೇಕು ಎಂದು ಸರ್ಕಾರಕ್ಕೆ ಆದೇಶಿಸಲು ಅರ್ಜಿಯಲ್ಲಿ ಕೋರಿದ್ದಾರೆ.

    ಅಲ್ತಾಫ ಹಳ್ಳೂರ ಕಾಂಗ್ರೆಸ್ ಪಕ್ಷದ ಪರ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಕೆಲವರು ವೈಯಕ್ತಿಕವಾಗಿ ನ್ಯಾಯಾಲಯ ಮೆಟ್ಟಿಲೇರಲೂ ಸಿದ್ಧತೆ ನಡೆಸಿದ್ದಾರೆ. ಚುನಾವಣೆ ನಡೆಸಬೇಕೆಂದು ಆದೇಶಿಸಲು ಕೋರಿ ಹಿಂದೆ ಕೆಲವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈಗ ಮತ್ತೊಮ್ಮೆ ಪಾಲಿಕೆ ಚುನಾವಣೆ ವಿಷಯ ಕೋರ್ಟ್ ಮೆಟ್ಟಿಲೇರಿದೆ.

    ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ 2019ರ ಮಾರ್ಚ್​ದಲ್ಲಿ ಕೊನೆಗೊಂಡಿದೆ.

    ವಾರ್ಡ್ ಮೀಸಲಾತಿ ನಿಗದಿ ಪಡಿಸಿದ ನಂತರ ಆಕ್ಷೇಪಣೆ ಸಲ್ಲಿಸಲು ಕಡಿಮೆ ಕಾಲಾವಕಾಶವಿತ್ತು. ಕೋವಿಡ್ ಮಧ್ಯದಲ್ಲಿಯೂ ಅನೇಕರು ಆಕ್ಷೇಪಣೆ ಸಲ್ಲಿಸಿದ್ದರು. ಆದರೆ, ಮಾನ್ಯತೆ ಸಿಗಲಿಲ್ಲ. ಹೀಗಾಗಿ, ಅನ್ಯಾಯ ಸರಿಪಡಿಸುವಂತೆ ಸರ್ಕಾರಕ್ಕೆ ಆದೇಶಿಸಲು ಕೋರಿ ವಕೀಲ ವಿಶ್ವನಾಥ ಬಿಚಗತ್ತಿಯವರ ಮೂಲಕ ನಾನು ಸಲ್ಲಿಸಿರುವ ರಿಟ್ ಅರ್ಜಿ ಅಂಗೀಕಾರವಾಗಿದೆ. ಶೀಘ್ರದಲ್ಲಿ ವಿಚಾರಣೆಗೆ ಬರುವ ನಿರೀಕ್ಷೆ ಇದೆ.
    | ಅಲ್ತಾಫ ಹಳ್ಳೂರ, ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts