More

    ಹಾವೇರಿ ಕ್ಷೇತ್ರ ಮರುವಿಂಗಡಣೆಗೆ ಮಾಹಿತಿ ಕೋರಿಕೆ

    ಹಾವೇರಿ: ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ಬೆನ್ನಲ್ಲಿಯೇ ಜಿಪಂ ಹಾಗೂ ತಾಪಂ ಚುನಾವಣೆಗೆ ಆಯೋಗ ಸಿದ್ಧತೆ ನಡೆಸಿದ್ದು, ಕ್ಷೇತ್ರ ಪುನರ್​ವಿಂಗಡಣೆಗೆ ಮಾಹಿತಿ ಒದಗಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

    ಜಿಲ್ಲೆಯಲ್ಲಿ ಈ ಮೊದಲು 34 ಜಿಪಂ ಕ್ಷೇತ್ರಗಳಿದ್ದವು. ಈ ಬಾರಿ ಚುನಾವಣೆ ಆಯೋಗವು 38ಕ್ಕೆ ಏರಿಕೆ ಮಾಡಿದೆ. ಆದರೆ, ತಾಪಂಗಳ ಸಂಖ್ಯೆಯನ್ನು 128ರಿಂದ 104ಕ್ಕೆ ಕಡಿತಗೊಳಿಸಿದ್ದು, ವಿಶೇಷವಾಗಿದೆ. ಹಾವೇರಿ, ಬ್ಯಾಡಗಿ, ರಾಣೆಬೆನ್ನೂರ, ಹಾನಗಲ್ಲ ತಾಲೂಕುಗಳಲ್ಲಿ ತಲಾ ಒಂದು ಜಿಪಂ ಕ್ಷೇತ್ರ ಹೆಚ್ಚಿಸಲು ಆಯೋಗವು ಸೂಚಿಸಿದೆ. ಇದರಿಂದ ನಾಲ್ಕೂ ತಾಲೂಕುಗಳಲ್ಲಿ ಜಿಪಂ ಕ್ಷೇತ್ರಗಳ ವ್ಯಾಪ್ತಿ ಬದಲಾಗಲಿದೆ. ಹಿರೇಕೆರೂರ ತಾಲೂಕಿನಲ್ಲಿದ್ದ ರಟ್ಟಿಹಳ್ಳಿ ಪ್ರತ್ಯೇಕ ತಾಲೂಕಾಗಿದೆ. ಜತೆಗೆ ಗ್ರಾಪಂನಿಂದ ಪಪಂಗೆ ಮೇಲ್ದರ್ಜೆಗೇರಿದೆ. ಹೀಗಾಗಿ ರಟ್ಟಿಹಳ್ಳಿ ಜಿಪಂ ಕ್ಷೇತ್ರವನ್ನು ವಿಂಗಡಣೆ ಮಾಡಬೇಕಿದೆ. ರಟ್ಟಿಹಳ್ಳಿ ಬದಲಾಗಿ ಹೊಸ ಕ್ಷೇತ್ರ ಅಲ್ಲಿ ಉದಯವಾಗಲಿದೆ.

    ಆಯೋಗಕ್ಕೆ ಈಗಾಗಲೇ ಜಿಲ್ಲಾ ಚುನಾವಣೆ ವಿಭಾಗದಿಂದ ಜನಸಂಖ್ಯೆ ವಿವರ ಸಲ್ಲಿಕೆಯಾಗಿದೆ. ಇದರ ಆಧಾರದ ಮೇಲೆ ತಾಲೂಕುವಾರು ಜಿಪಂ ಹಾಗೂ ತಾಪಂ ಸದಸ್ಯ ಸ್ಥಾನಗಳನ್ನು ಆಯೋಗವೇ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಈ ಸ್ಥಾನಗಳ ಆಧಾರದಲ್ಲಿ ತಾಪಂ ಹಾಗೂ ಜಿಪಂ ಕ್ಷೇತ್ರಗಳನ್ನು ಪುನರ್ ರಚಿಸುವ ಕೆಲಸ ಈಗ ಬಾಕಿಯಿದೆ.

    20ರಂದು ಸಭೆ: ತಾಪಂ, ಜಿಪಂ ಕ್ಷೇತ್ರಗಳ ಮರುರಚನೆಗೆ ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿನ ಗ್ರಾಪಂಗಳು, ಗ್ರಾಮಗಳು, ಒಟ್ಟು ಮತದಾರರ ವಿವರಗಳೊಂದಿಗೆ ಫೆ. 20ರಂದು ಜಿಲ್ಲೆಯ ಚುನಾವಣೆ ತಹಸೀಲ್ದಾರ್ ಹಾಗೂ ಸಿಬ್ಬಂದಿ ಹಾಜರಾಗುವಂತೆ ಆಯೋಗ ಸೂಚನೆ ನೀಡಿದೆ. ಜತೆಗೆ ತಾಲೂಕುವಾರು ಹಾಗೂ ಪ್ರತಿ ಜಿಪಂ ಹಾಗೂ ತಾಪಂ ಕ್ಷೇತ್ರದ ನಕ್ಷೆಯನ್ನು ಸಿದ್ಧಪಡಿಸಿಕೊಂಡು ಬರಲು ಸೂಚಿಸಲಾಗಿದೆ.

    ಆಕ್ಷೇಪಕ್ಕೆ ಕಾರಣ

    ಜಿಲ್ಲೆಯಲ್ಲಿ ಜಿಪಂ ಕ್ಷೇತ್ರಗಳ ಸಂಖ್ಯೆ ನಿರೀಕ್ಷೆಯಂತೆ ಏರಿಕೆಯಾಗಿದೆ. ಆದರೆ, ತಾಪಂ ಕ್ಷೇತ್ರಗಳ ಸಂಖ್ಯೆಯಲ್ಲಿ ಕಡಿತವಾಗಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ. ಆಯೋಗದ ಈ ನಿರ್ಧಾರವು ತಾಪಂ ಸದಸ್ಯ ಸ್ಥಾನದ ಆಕಾಂಕ್ಷಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಜಿಪಂ, ಗ್ರಾಪಂಗಳಷ್ಟೇ ಇರಬೇಕು ಎಂಬ ವಾದವೂ ಎದ್ದಿದೆ. ಅದಿನ್ನೂ ಅಧಿಕೃತವಾಗಿ ಜಾರಿಗೆ ಬಂದಿಲ್ಲ. ಇಂತಹ ಸಮಯದಲ್ಲಿ ಜಿಲ್ಲೆಯ 24 ತಾಪಂ ಕ್ಷೇತ್ರಗಳು ಕಡಿತವಾಗಿರುವುದು ಸ್ಪರ್ಧಾಕಾಂಕ್ಷಿಗಳಲ್ಲಿ ಹಲವು ಅನುಮಾನ ಮೂಡುವಂತೆ ಮಾಡಿದೆ.

    ರಾಜ್ಯ ಚುನಾವಣೆ ಆಯೋಗದ ಆದೇಶ ಇನ್ನೂ ಅಧಿಕೃತವಾಗಿ ಕೈಸೇರಿಲ್ಲ. ಆದೇಶ ಬಂದ ಬಳಿಕ ಹೊಸದಾಗಿ ಪುನರ್​ವಿಂಗಡಣೆ ಮಾಡುವುದಿದ್ದರೆ ಆಯೋಗದ ನಿರ್ದೇಶನದಂತೆ ಕ್ರಮಕೈಗೊಳ್ಳುತ್ತೇವೆ. ತಾಪಂ ಕ್ಷೇತ್ರಗಳಲ್ಲಿ ಕಡಿತವಾಗಿದ್ದರೆ ಆಯೋಗದ ಗಮನಕ್ಕೆ ತರಲಾಗುವುದು.

    | ಸಂಜಯ ಶೆಟ್ಟ್ಟೆಣ್ಣವರ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts