More

    ಮಹಿಳಾ ಆಯೋಗಕ್ಕೆ ಲೈಂಗಿಕ ಹಗರಣ ವರದಿ, ಮಂಗಳೂರು ವಿವಿ ಪಿಎಚ್‌ಡಿ ವಿದ್ಯಾರ್ಥಿನಿ ನೀಡಿದ್ದ ದೂರಿನ ತನಿಖಾ ವರದಿ

    ಪುತ್ತೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಪ್ರೊೆಸರ್ ಒಬ್ಬರು ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಎರಡು ವರ್ಷಗಳ ಹಿಂದಿನ ಪ್ರಕರಣದ ತನಿಖಾ ವರದಿಗೆ ಮುಕ್ತಿ ಸಿಗುವ ಲಕ್ಷಣಗಳು ಗೋಚರಿಸಿವೆ. ರಾಜ್ಯ ಮಹಿಳಾ ಆಯೋಗ ವರದಿ ಕೇಳಿದ ಹಿನ್ನೆಲೆಯಲ್ಲಿ ನೂತನ ಕುಲಸಚಿವ ರಾಜು ಮೊಗವೀರ ತನಿಖಾ ವರದಿಯನ್ನು ಸಿಂಡಿಕೇಟ್ ಸಮಿತಿ ಮುಂದಿರಿಸಿದ್ದಾರೆ ಎಂಬ ಮಾಹಿತಿ ‘ವಿಜಯವಾಣಿ’ಗೆ ಲಭಿಸಿದೆ.

    2018ರ ಏಪ್ರಿಲ್‌ನಲ್ಲಿ ವಿವಿ ಅರ್ಥಶಾಸ ಪ್ರಾಧ್ಯಾಪಕ ಪ್ರೊ.ಅರಬಿ ಎಂಬುವರ ವಿರುದ್ಧ ಲೈಂಗಿಕ ಕಿರುಕುಳ ಕುರಿತು ಸಂಶೋಧನಾ ವಿದ್ಯಾರ್ಥಿನಿಯೋರ್ವಳು ಸಾಕ್ಷ್ಯ ಸಹಿತ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಮಹಿಳಾ ಆಯೋಗ ವಿವಿಗೆ ನೋಟಿಸ್ ನೀಡಿತ್ತು. ನಂತರ ತನಿಖೆಗಾಗಿ ವಿಶೇಷ ತಂಡ (ಐಸಿಸಿ) ರಚಿಸಿ ವರದಿ ನೀಡುವಂತೆ ವಿವಿ ಆಡಳಿತ ಸಮಿತಿ ಆದೇಶ ನೀಡಿತ್ತು.

    2018ರ ಡಿಸೆಂಬರ್‌ನಲ್ಲಿ ಪ್ರೊೆಸರ್ ಮೇಲಿನ ಆರೋಪಗಳ ಬಗ್ಗೆ ಐಸಿಸಿ ಮುಚ್ಚಿದ ಲಕೋಟೆ ಮೂಲಕ ಅಂದಿನ ಕುಲಸಚಿವ ಪ್ರೊ.ಎ.ಎಂ.ಖಾನ್‌ಗೆ ತನಿಖಾ ವರದಿ ನೀಡಿದ್ದರು. ಆದರೆ 2020 ಸೆಪ್ಟೆಂಬರ್ ಕೊನೇ ವಾರದವರೆಗೂ ಐಸಿಸಿ ತನಿಖಾ ವರದಿ ತೆರೆಯದೆ ಮುಚ್ಚಿದ ಲಕೋಟೆಯಲ್ಲೇ ಬಿದ್ದಿತ್ತು. ಈ ಬಗ್ಗೆ 15 ದಿನಗಳ ಹಿಂದೆ ಮಹಿಳಾ ಆಯೋಗ ವರದಿ ಕೇಳಿದ್ದು, ನೂತನ ಕುಲಸಚಿವ ರಾಜು ಮೊಗವೀರ ತನಿಖಾ ವರದಿಯನ್ನು ಸಿಂಡಿಕೇಟ್ ಸಮಿತಿ ಮುಂದಿರಿಸಿದ್ದಾರೆ.

    ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ: ತೆರೆಯದೆ ಇದ್ದ ಲಕೋಟೆಯಲ್ಲಿ ಪ್ರೊ.ಅರಬಿ ಲೈಂಗಿಕ ಪ್ರಕರಣದ ತನಿಖಾ ವರದಿ ಇದ್ದು, ವಿವಿಯ ಎ ಗ್ರೇಡ್ ಅಧಿಕಾರಿಗಳ ಸಮಕ್ಷಮದಲ್ಲಿ ವರದಿ ಪತ್ರ ಮಹಜರು ನಡೆಸಿ ಮುಚ್ಚಿದ ಲಕೋಟೆ ತೆರೆದು ಅ.9ರಂದು ನಡೆದ ವಿವಿ ಸಿಂಡಿಕೇಟ್ ಸಭೆಯ ಗಮನಕ್ಕೆ ತರಲಾಗಿದೆ. ವರದಿಯಲ್ಲಿ ಇರುವ ಅಂಶವನ್ನು ಪರಿಗಣಿಸಿ ವಿವಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.

    ಪ್ರಕರಣ ಮುಚ್ಚಿಹಾಕುವ ಹುನ್ನಾರ: ಮಂಗಳೂರು ವಿವಿ ಆಂತರಿಕ ದೂರು ಸಮಿತಿಯು ಸಂಶೋಧನಾ ವಿದ್ಯಾರ್ಥಿನಿಯ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದೆ. ಸಮಿತಿಯಲ್ಲಿ ವಿವಿಯ ಹಿರಿಯ ಮಹಿಳಾ ಹಾಗೂ ಪುರುಷ ಪ್ರಾಧ್ಯಾಪಕರು, ಮಹಿಳಾ ವಕೀಲರು, ಕೌನ್ಸೆಲರ್‌ಗಳಿದ್ದು, ಅಂದಿನ ಕುಲಸಚಿವ ಪ್ರೊ.ಎ.ಎಂ.ಖಾನ್‌ಗೆ ಸಮಗ್ರ ವರದಿ ಸಲ್ಲಿಸಿದ್ದರು. ಹಗರಣವನ್ನು ಅಂದಿನ ಕುಲಸಚಿವ ಪ್ರೊ.ಎ.ಎಂ.ಖಾನ್ ಹಾಗೂ ಪ್ರೊ.ಅರಬಿ ಸೇರಿದಂತೆ ಹಲವು ಅಧಿಕಾರಿಗಳು ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆಸಿದ್ದಾರೆ ಎಂದು ವಿವಿ ಸಿಂಡಿಕೇಟ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಈ ಬಗ್ಗೆ ತನಿಖೆ ನಡೆಸುವ ನಿರ್ಣಯ ವಿವಿ ಸಿಂಡಿಕೇಟ್ ಸಭೆಯಲ್ಲಿ ಕೈಗೊಳ್ಳಲಾಗಿತ್ತು.

    ಸಂಶೋಧನಾ ವಿದ್ಯಾರ್ಥಿ ನೀಡಿದ ದೂರಿನ ಬಗ್ಗೆ ಇತ್ತೀಚೆಗೆ ಮಹಿಳಾ ಆಯೋಗ ಮಾಹಿತಿ ಕೇಳಿದ್ದರಿಂದ ಪರಿಶೀಲನೆ ನಡೆಸಲಾಯಿತು. 2018ರ ಡಿಸೆಂಬರ್‌ನಲ್ಲಿ ಐಸಿಸಿ ವರದಿ ನೀಡಿದ್ದರಿಂದ ಅಧಿಕಾರಿಗಳ ಸಮ್ಮುಖದಲ್ಲಿ ತೆರೆದು ಸಿಂಡಿಕೇಟ್ ಸಮಿತಿಗೆ ಸಲ್ಲಿಸಲಾಗಿದೆ.

    – ರಾಜು ಮೊಗವೀರ

    ಕುಲಸಚಿವ, ಮಂಗಳೂರು ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts