More

    ಎಪಿಎಂಸಿಗೆ ದಾಖಲೆ ಆದಾಯ!

    ಕೋಲಾರಕ್ಕೆ ಸರಬರಾಜಾಗುತ್ತಿದೆ ಚಳ್ಳಕೆರೆ ಟೊಮ್ಯಾಟೊ > ಬೆಲೆ ಇಳಿಮುಖ

    ಕೋಲಾರ: ಪ್ರಸಕ್ತ ಸಾಲಿನಲ್ಲಿ ಟೊಮ್ಯಾಟೊಗೆ ಬಂಗಾರ ಬೆಲೆ ಬಂದಿರುದರಿಂದ ಇಲ್ಲಿನ ಎಪಿಎಂಸಿಗೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ತಿಂಗಳಿನಲ್ಲಿ 1 ಕೋಟಿ ರೂ.ಗಳಿಗೂ ಅಧಿಕ ಆದಾಯ ಹರಿದು ಬಂದಿದೆ.
    ಬರೋಬ್ಬರಿ 1.26 ಕೋಟಿ ರೂ. ಆದಾಯ ಸೆಸ್​ ರೂಪದಲ್ಲಿ ಬಂದಿದೆ. ಕಳೆದ ವರ್ಷ ಜುಲೈನಲ್ಲಿ 66 ಲಕ್ಷ ರೂ. ಆದಾಯ ಬಂದರೆ, 2021&-22 ರಲ್ಲಿ 43 ಲಕ್ಷ ರೂ. ಆದಾಯ ಬಂದಿತ್ತು. ಜುಲೈನಲ್ಲಿ 3.21 ಲಕ್ಷ ಟನ್​ ಉತ್ಪನ್ನ ಬಂದಿದ್ದು, 200.66 ಕೋಟಿ ರೂ. ವಹಿವಾಟು ನಡೆದಿದೆ. ಅದರಂತೆ ಬಳಕೆದಾರರ ಶುಲ್ಕ ಶೇ.0.60 ಯಂತೆ 1.26 ಕೋಟಿ ರೂ. ಆದಾಯ ಬಂದಿದೆ.

    ಉತ್ಪನ್ನದಲ್ಲಿ ಏರಿಕೆ: ಗಗನಮುಖಿಯಾಗಿದ್ದ ಟೊಮ್ಯಾಟೋ ಬೆಲೆ ವಾರದಿಂದ ಈಚೆಗೆ ಇಳಿಕೆಯಾಗಿದೆ. ಮತ್ತಷ್ಟು ಇಳಿಕೆಯಾಗುವ ಲಕ್ಷಣಗಳು ಕಾಣಿಸುತ್ತಿದೆ. ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸರಬರಾಜಾಗುವ ಉತ್ಪನ್ನದಲ್ಲಿ ಏರಿಕೆ ಕಂಡುಬಂದಿರುವುದು ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ.

    ಉತ್ಪನ್ನ ಏರಿಕೆಯಾಗಿಲ್ಲ: ಸಾಮಾನ್ಯವಾಗಿ ಮೇನಿಂದ ಟೊಮ್ಯಾಟೋ ಸೀಸನ್​ ಪ್ರಾರಂಭವಾಗುತ್ತದೆ. ಈ ಹಿಂದೆ ಸೀಸನ್​ನಲ್ಲಿ ತಿಂಗಳಿಗೆ 30 ರಿಂದ 40ಸಾವಿರ ಕ್ವಿಂಟಾಲ್​ ಕೋಲಾರ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈ ವರ್ಷ ಹವಾಮಾನ ವೈಪರೀತ್ಯ ಹಾಗೂ ತೀವ್ರ ಕೀಟಬಾಧೆಯಿಂದ ಇಳುವರಿಯಲ್ಲಿ ತೀವ್ರ ಕುಸಿತ ಕಂಡಿದೆ. ಈ ಸಾಲಿನ ಮೇನಲ್ಲಿ 1 ಕೆಜಿ ಟೊಮ್ಯಾಟೊ 13 ರೂ.ಗೆ ಮಾರಾಟವಾಗಿದ್ದು 15ಕೆಜಿ ಬಾಕ್ಸ್​ ಗೆ 200 ರೂ. ಮಾತ್ರ ಇತ್ತು. ಬೆಲೆ ಕುಸಿತ ಮತ್ತು ಬೆಳೆ ಬಾರದ ಹಿನ್ನೆಲೆಯಲ್ಲಿ ರೈತರು ಬೆಳೆ ಮಾಡಲು ಮುಂದಾಗಲಿಲ್ಲ. ಈ ಪರಿಣಾಮ ದಿನೇ ದಿನೆ ಬೆಲೆ ಗಗನಮುಖಿಯಾಗಿ ಜುಲೈ 31ಕ್ಕೆ 5,100 ಕ್ವಿಂಟಾಲ್​ ಆವಕವಾಗಿದ್ದು, 15 ಕೆ ಜಿ ಬಾಕ್ಸ್​ 2,400ರೂ. ದಾಖಲೆ ಬೆಲೆಗೆ ಮಾರಾಟವಾಗುವ ಮೂಲಕ 1ಕೆಜಿ ಟೊಮ್ಯಾಟೊ 160 ರೂ.ಗೆ ಏರಿಕೆ ಕಂಡಿತ್ತು. ಜುಲೈನಲ್ಲಿ ಸಾಮಾನ್ಯವಾಗಿ 10 ಸಾವಿರ ಕ್ವಿಂಟಾಲ್​ಗೂ ಹೆಚ್ಚಿನ ಉತ್ಪನ್ನ ಆವಕವಾಗುತ್ತಿತ್ತಾದರೂ ಪ್ರಸಕ್ತ ಸಾಲಿನ ಜುಲೈನಲ್ಲಿ ನಿತ್ಯ ಕೇವಲ 8 ಸಾವಿರ ಕ್ವಿಂಟಾಲ್​ ಸರಬರಾಜಾಗಿತ್ತು.

    ಚಳ್ಳಕೆರೆಗೆ ವ್ಯಾಪಾರಿಗಳ ದೌಡು: ಸ್ಥಳಿಯ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಮುಖ ಮಂಡಿ ಮಾಲೀಕರು, ಜಿಲ್ಲೆಯ ರೋಗಪೀಡಿತ ಟೊಮ್ಯಾಟೋಗಿಂತ ಗುಣಮಟ್ಟದ ಉತ್ಪನ್ನ ಸಿಗುತ್ತಿರುವ ಚಳ್ಳಕೆರೆಯಲ್ಲಿ ಬೀಡು ಬಿಟ್ಟಿದ್ದು, ಮುಂಗಡ ಹಣ ಕೊಟ್ಟು ತೋಟಗಳಿಂದಲೇ ನೇರ ಖರೀದಿ ಮಾಡುತ್ತಿದ್ದಾರೆ. ಚಳ್ಳಕೆರೆಯಿಂದ ಉತ್ಪನ್ನ ಕೊಂಡು ಕೋಲಾರ ಮಾರುಕಟ್ಟೆಗೆ ರವಾನಿಸಿ, ಇಲ್ಲಿಂದ ದೇಶ, ವಿದೇಶಗಳಿಗೆ ರ್ತು ಮಾಡುತ್ತಿದ್ದಾರೆ.

    ಮತ್ತೆ ಬೆಲೆ ಏರುವ ಸಾಧ್ಯತೆಯಿಲ್ಲ: ಟೊಮ್ಯಾಟೋ ಸಗಟು ದರ 160 ರೂ.ಗೆ ಏರಿಕೆಯಾಗಿ ದ್ದರಿಂದ ರೀಟೆಲ್​ ಮಾರಾಟದಲ್ಲಿ ರಾಜ್ಯದಲ್ಲೇ 200ರೂ.ಗೂ ಅಧಿಕ ಬೆಲೆಗೆ ಮಾರಾಟವಾಗಿತ್ತು. ಕೋಲಾರ ಮಾರುಕಟ್ಟೆಗೆ ಪ್ರಮುಖವಾಗಿ ಸರಬರಾಜಾಗುವ ಮಹಾರಾಷ್ಟ್ರದ ನಾಸಿಕ್​ನಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಉತ್ಪನ್ನ ಬರುತ್ತಿಲ್ಲ. ಹೀಗಾಗಿಯೇ 1 ಕೆಜಿಗೆ 100ರೂ. ಬೆಲೆ ಇದೆ. ಆದರೆ ಚಳ್ಳಕೆರೆ ಮತ್ತು ಮೈಸೂರು ಭಾಗದಲ್ಲಿ ಕೊಯ್ಲು ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನ ಹರಿದುಬರುವ ಸಾಧ್ಯತೆಯಿದೆ. ಹೀಗಾಗಿ ಟೊಮ್ಯಾಟೋ ಬೆಲೆ ಇನ್ನೇನಿದ್ದರೂ ಇಳಿಮುಖದತ್ತ ಹೋಗುತ್ತದೆ ಎಂದು ಪರಿಣಿತರು ಅಭಿಪ್ರಾಯಪಡುತ್ತಾರೆ. 15 ಕೆ.ಜಿ.ಯ ಬಾಕ್ಸ್​ ಬೆಲೆ 2700 ರೂ.ಗಳಿಂದ 1500 ರೂ.ಗೆ ಕುಸಿತವಾಗಿದೆ.

    ಟೊಮ್ಯಾಟೊ ದರ $1000 ಇಳಿಕೆ: ಆ.1ರಂದು ಕೆ.ಜಿ ಟೊಮ್ಯಾಟೊ ಗರಿಷ್ಠ ದರ 160 ರೂ.ಇದ್ದಿದ್ದು, 7ರಂದು 100ರೂ. ಗೆ ಇಳಿದಿದೆ. ಅದೇ ರೀತಿ ಆ. 1ರಂದು 8,775 ಕ್ವಿಂಟಾಲ್​ ಉತ್ಪನ್ನ ಸರಬರಾಜಾಗಿದ್ದು, 7ರಂದು 12,138 ಕ್ವಿಂಟಾಲ್​ ಸರಬರಾಜಾಗಿದೆ. ನಿತ್ಯ ಸುಮಾರು 4.5 ಸಾವಿರ ಕ್ವಿಂಟಾಲ್​ ಹೆಚ್ಚಿಗೆ ಸರಬರಾಜಾದರೂ, ಇದು ಜಿಲ್ಲೆಯ ಟೊಮ್ಯಾಟೋ ಅಲ್ಲ. ಚಳ್ಳಕೆರೆ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಆಂಧ್ರದ ಮಲಕಲಚೆರುವು ಕಡೆಯಿಂದ ಕೋಲಾರ ಮಾರುಕಟ್ಟೆಗೆ ಬಂದ ಉತ್ಪನ್ನ ಇದಾಗಿದೆ. ಹೀಗಾಗಿಯೇ ಬಿಳಿ ನೊಣ, ವೈರಸ್​ ಕಾಟದಿಂದ ಬೆಳೆ ನಷ್ಟ ಅನುಭವಿಸುತ್ತ, ಬೆಳೆ ಮಾಡಲು ಹಿಂದೇಟು ಹಾಕುತ್ತಿರುವ ಜಿಲ್ಲೆಯ ರೈತರಿಗೆ ಅಷ್ಟಾಗಿ ಲಾಭ, ನಷ್ಟ ಪರಿಣಾಮ ಬೀರುತ್ತಿಲ್ಲ.

    ಮಾರುಕಟ್ಟೆಗೆ ಬರುವ ಉತ್ಪನ್ನದ ಪ್ರಮಾಣ ಹೆಚ್ಚಾಗಿರುವ ಪರಿಣಾಮ ಬೆಲೆ ಕುಸಿತ ಕಂಡಿದೆ. ಮುಂದಿನ ದಿನಗಳಲ್ಲಿ ಉತ್ಪನ್ನ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಮೈಸೂರು, ಚಳ್ಳಕೆರೆ ಭಾಗದಿಂದಲೂ ಟೊಮ್ಯಾಟೊ ಸರಬರಾಜಾಗುತ್ತಿದೆ.

    | ವಿಜಯಲಕ್ಷ್ಮೀ, ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts