More

    73ನೇ ದಿನಕ್ಕೆ ಕಾಲಿಟ್ಟ ರೈತ ಸಂಘದ ಧರಣಿ: ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರ ಆಕ್ರೋಶ

    ಮಂಡ್ಯ: ಪ್ರತಿ ಟನ್ ಕಬ್ಬಿಗೆ 4,500 ರೂ. ಹಾಗೂ ಪ್ರತಿ ಲೀಟರ್ ಹಾಲಿಗೆ 40 ರೂ. ನಿಗದಿ ಮಾಡಬೇಕೆಂದು ಆಗ್ರಹಿಸಿ ರೈತ ಸಂಘದಿಂದ ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಬುಧವಾರ 73ನೇ ದಿನಕ್ಕೆ ಕಾಲಿಟ್ಟಿದೆ.
    ಪ್ರಸ್ತುತ ಕೃಷಿಯಿಂದ ರೈತರು ಲಾಭ ಕಾಣಲು ಸಾಧ್ಯವಾಗುತ್ತಿಲ್ಲ. ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಇಳಿಕೆ, ದಲ್ಲಾಳಿಗಳ ಮೋಸದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿಗೆ ಹಾಕಿದ ಬಂಡವಾಳವೂ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಸರ್ಕಾರ ಬಂದರೂ ರೈತರ ಹೆಸರೇಳಿಕೊಂಡು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಜತೆಗೆ ಚುನಾವಣೆಗೂ ಮುನ್ನ ಇನ್ನಿಲ್ಲದ ಆಮಿಷ ಒಡ್ಡುತ್ತಾರೆ. ಆದರೆ ಅಧಿಕಾರಕ್ಕೆ ಬಂದ ನಂತರ ರೈತರ ಬಗ್ಗೆ ಕನಿಷ್ಠ ಕಾಳಜಿ ತೋರುವುದಿಲ್ಲ. ದಿನಬಳಕೆ ವಸ್ತುಗಳ ಬೆಲೆ ಏರಿಕೆ, ಕೃಷಿಯಲ್ಲಿ ನಷ್ಟ ಕಂಡು ಯುವ ಸಮೂಹ ನಗರ, ಪಟ್ಟಣದತ್ತ ವಲಸೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಸರ್ಕಾರಗಳ ಅವೈಜ್ಞಾನಿಕ ನೀತಿಗಳೇ ಆಗಿವೆ. ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದರೆ ರೈತರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
    ಬಹುತೇಕ ರೈತ ಕುಟುಂಬಕ್ಕೆ ಹೈನುಗಾರಿಕೆ ಜೀವನಾಧಾರವಾಗಿದೆ. ಎರಡು ಹಸು ಸಾಕಿಕೊಂಡು ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಇದೀಗ ಅದಕ್ಕೂ ಕಂಟಕ ಎದುರಾಗಿದೆ. ಪಶು ಆಹಾರದ ಬೆಲೆ ಗಗನಕ್ಕೇರಿದೆ. ಆದರೆ ರೈತರಿಗೆ ಕೊಡುವ ಹಾಲಿನ ದರ ಕಡಿಮೆ ಇದೆ. ಇದರಿಂದಾಗಿ ಹೈನುಗಾರಿಕೆ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಟನ್ ಕಬ್ಬಿಗೆ 4,500 ರೂ. ಹಾಗೂ ಪ್ರತಿ ಲೀಟರ್ ಹಾಲಿಗೆ 40 ರೂ. ನಿಗದಿ ಮಾಡುವುದು ಅಗತ್ಯವಾಗಿದೆ. ನಮ್ಮ ಹೋರಾಟ 72ನೇ ದಿನ ಪೂರೈಸಿದರೂ ಸರ್ಕಾರ ಗಮನಹರಿಸದಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಗ್ಗಳ್ಳಿ ಪ್ರಸನ್ನ, ರವಿಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts