More

    ಸದಾಶಿವ ಆಯೋಗದ ವರದಿ ಜಾರಿಗೊಳಿಸದಂತೆ ಬಂಜಾರ ಸಮುದಾಯದವರಿಂದ ಪ್ರತಿಭಟನೆ

    ರಾಣೆಬೆನ್ನೂರ: ಪರಿಶಿಷ್ಟ ಜಾತಿಗಳಲ್ಲಿ ಸದಾಶಿವ ಆಯೋಗದ ವರದಿಯಂತೆ ರಾಜ್ಯ ಸರ್ಕಾರ ಒಳ ಮೀಸಲಾತಿ ಕಲ್ಪಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದನ್ನು ಹಿಂಪಡೆಯಲು ಒತ್ತಾಯಿಸಿ ಸಂತ ಸೇವಾಲಾಲ ಸೇವಾ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
    ಮೇಡ್ಲೇರಿ ರಸ್ತೆಯ ಸಂತ ಸೇವಾಲಾಲ ದೇವಸ್ಥಾನದಿಂದ ಪ್ರತಿಭಟನೆ ಮೆರವಣಿಗೆ ನಡೆಸಿದ ಸಮಾಜದವರು ಶಾಸಕ ಅರುಣಕುಮಾರ ಪೂಜಾರ ಮನೆಯವರೆಗೆ ಧರಣಿ ನಡೆಸಲು ಮುಂದಾದರು. ಆದರೆ, ಪೊಲೀಸರು ಕೆಎಚ್‌ಬಿ ಕಾಲನಿ ಬಳಿ ಬ್ಯಾರಿಕೇಡ್ ಹಾಕಿ ತಡೆದರು. ನಂತರ ಅಲ್ಲಿಯೆ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಿದರು.
    ಸಮಾಜದ ಮುಖಂಡ ಶಶಿಧರ ಲಮಾಣಿ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿಯವರು ಸಚಿವ ಸಂಪುಟ ಸಭೆಯಲ್ಲಿ ಒಳಮಿಸಲಾತಿ ಕುರಿತು ವರದಿ ಮಂಡಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ನಿರ್ಣಯ ತೆಗೆದುಕೊಂಡಿರುವುದು ಅವೈಜ್ಞಾನಿಕವಾಗಿದೆ. ಇದು ಕಾನೂನು ಉಲ್ಲಂಘನೆ ಮಾಡಿದಂತೆ ಎಂದು ಆರೋಪಿಸಿದರು.
    ನೂರಾರು ವರ್ಷಗಳಿಂದ ನಮ್ಮ ಸಮುದಾಯ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಶೋಷಣೆಗೆ ಒಳಗಾಗಿರುವ ಕಾರಣ 1976ರಲ್ಲಿ ಆರ್ಟಿಕಲ್ 17 ಅಡಿಯಲ್ಲಿ ಮೀಸಲಾತಿ ನೀಡಲಾಗಿದೆ. ಈಗ ರಾಜ್ಯ ಸರ್ಕಾರ ಒಳ ಮೀಸಲಾತಿ ಶಿಫಾರಸ್ಸು ಮಾಡಿರುವುದು ಘೋರ ಅನ್ಯಾಯವಾಗಿದೆ.
    ಆದ್ದರಿಂದ ಸರ್ಕಾರ ಕೂಡಲೇ ಕೇಂದ್ರಕ್ಕೆ ಕಳುಹಿಸಿರುವ ಶಿಫಾರಸ್ಸು ಪತ್ರವನ್ನು ವಾಪಸ್ ಪಡೆಯಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ಮಾಡುತ್ತೇವೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು. ಸ್ಥಳಕ್ಕೆ ಬಂದ ಶಾಸಕ ಅರುಣಕುಮಾರ ಪೂಜಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮುಂಜಾಗ್ರತಾ ಕ್ರಮವಾಗಿ ಶಾಸಕರ ಮನೆ ಸುತ್ತಲೂ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
    ಪ್ರಮುಖರಾದ ಡಾಕೇಶ ಲಮಾಣಿ, ರಮೇಶ ನಾಯಕ, ರಾಮಣ್ಣ ನಾಯಕ, ಚಂದ್ರು ಲಮಾಣಿ, ಮಾನಪ್ಪ ಲಮಾಣಿ, ಕುಮಾರ ಲಮಾಣಿ, ವಸಂತ ಲಮಾಣಿ, ಬೀರಪ್ಪ ಲಮಾಣಿ, ರಮೇಶ ಲಮಾಣಿ, ಹುಬಾ ನಾಯಕ, ಶಿವಪ್ಪ ಲಮಾಣಿ, ಹಾಲಪ್ಪ ಲಮಾಣಿ, ಮಾರುತಿ ಲಮಾಣಿ, ಚಂದ್ರು ಲಮಾಣಿ, ಲಾಲಪ್ಪ ಲಮಾಣಿ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts