More

    ಇಂದು ಮುಂಬೈ ಇಂಡಿಯನ್ಸ್‌ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಸವಾಲು

    ದುಬೈ: ಸತತ 5 ಗೆಲುವಿನೊಂದಿಗೆ ಭರ್ಜರಿಯಾಗಿ ಮುನ್ನುಗ್ಗುತ್ತಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಸತತ 5 ಸೋಲಿನ ಬಳಿಕ ಕೊನೆಗೂ ಗೆಲುವಿನ ಹಳಿ ಏರಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಐಪಿಎಲ್-13ರಲ್ಲಿ ಭಾನುವಾರದ 2ನೇ ಪಂದ್ಯದಲ್ಲಿ ಎದುರಾಗಲಿವೆ.

    ವಿಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಬಿರುಸಿನ ಅರ್ಧಶತಕದ ಮೂಲಕ ಟೂರ್ನಿಗೆ ಎಂಟ್ರಿ ಕೊಟ್ಟಿದ್ದು, ಇದೇ ಲಯವನ್ನು ಮುಂಬೈ ವಿರುದ್ಧವೂ ಮುಂದುವರಿಸುವ ನಿರೀಕ್ಷೆ ಪಂಜಾಬ್ ತಂಡದ್ದಾಗಿದೆ. ರೋಹಿತ್ ಶರ್ಮ ಬಳಗ ಸರ್ವಾಂಗೀಣ ನಿರ್ವಹಣೆಯನ್ನು ಪಂಜಾಬ್ ವಿರುದ್ಧವೂ ಪುನರಾವರ್ತಿಸುವ ತವಕದಲ್ಲಿದೆ.

    ಈ ತಿಂಗಳ ಆರಂಭದಲ್ಲಿ ಅಬುಧಾಬಿಯಲ್ಲಿ ನಡೆದ ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಮುಂಬೈ 48 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತ್ತು.
    ಮುಂಬೈ ತಂಡದಲ್ಲಿ ದೌರ್ಬಲ್ಯಗಳನ್ನು ಹುಡುಕುವುದು ಕಠಿಣವಾಗಿದ್ದರೆ, ಪಂಜಾಬ್ ತಂಡ ಕೆಲ ಆಟಗಾರರ ಉತ್ತಮ ನಿರ್ವಹಣೆಯ ನಡುವೆಯೂ ಗೆಲುವು ಕಾಣಲು ಪರದಾಡಿದೆ. ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುವ ಕೆಎಲ್ ರಾಹುಲ್ ಬಳಗಕ್ಕೆ ಪ್ರತಿ ಪಂದ್ಯವೂ ಮಾಡು ಇಲ್ಲವೆ ಮಡಿ ಎನಿಸಿದ್ದು, ಈ ಪಂದ್ಯದ ಫಲಿತಾಂಶವೂ ನಿರ್ಣಾಯಕವೆನಿಸಲಿದೆ. ಅತ್ತ ಮುಂಬೈಗೆ ಈ ಪಂದ್ಯದ ಗೆಲುವು ಪ್ಲೇಆಫ್​ ಸ್ಥಾನವನ್ನು ಬಹುತೇಕ ಖಾತ್ರಿಗೊಳಿಸಲಿದೆ.

    ಮುಂಬೈ ಇಂಡಿಯನ್ಸ್: ಕಳೆದ ಪಂದ್ಯದಲ್ಲಿ ಜೇಮ್ಸ್ ಪ್ಯಾಟಿನ್‌ಸನ್ ಬದಲಿಗೆ ನಾಥನ್ ಕೌಲ್ಟರ್ ನಿಲ್ ಕಣಕ್ಕಿಳಿದಿದ್ದರು. ಅವರ ಕೊನೇ ಓವರ್ ದುಬಾರಿಯಾಗಿತ್ತು. ಹೀಗಾಗಿ ಪ್ಯಾಟಿನ್‌ಸನ್ ಮತ್ತೆ ಮರಳುವ ನಿರೀಕ್ಷೆ ಇದೆ.
    ಕಳೆದ ಪಂದ್ಯ: ಕೋಲ್ಕತ ನೈಟ್‌ರೈಡರ್ಸ್‌ ವಿರುದ್ಧ 8 ವಿಕೆಟ್ ಗೆಲುವು.
    ಸಂಭಾವ್ಯ ತಂಡ: ಕ್ವಿಂಟನ್ ಡಿಕಾಕ್ (ವಿ.ಕೀ), ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೈರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್‌ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ.

    ಕಿಂಗ್ಸ್ ಇಲೆವೆನ್ ಪಂಜಾಬ್: ಗೆಲುವಿನ ಲಯ ಸಿಗದೆ ಪರದಾಡುತ್ತಿದ್ದ ತಂಡ, ಹಲವು ಬದಲಾವಣೆ ಕಾಣುತ್ತ ಬಂದಿದೆ. ಈ ಬಾರಿ ಆರ್‌ಸಿಬಿ ವಿರುದ್ಧದ ಗೆಲುವಿನ ಕಾಂಬಿನೇಷನ್ ಉಳಿದುಕೊಳ್ಳುವ ನಿರೀಕ್ಷೆಯೇ ಹೆಚ್ಚಿದೆ.
    ಕಳೆದ ಪಂದ್ಯ: ಆರ್‌ಸಿಬಿ ವಿರುದ್ಧ 8 ವಿಕೆಟ್ ಗೆಲುವು.
    ಸಂಭಾವ್ಯ ತಂಡ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್ (ವಿ.ಕೀ), ಗ್ಲೆನ್ ಮ್ಯಾಕ್ಸ್‌ವೆಲ್, ದೀಪಕ್ ಹೂಡಾ, ಕ್ರಿಸ್ ಜೋರ್ಡನ್/ಮುಜೀಬ್ ಉರ್ ರೆಹಮಾನ್, ಎಂ. ಅಶ್ವಿನ್, ಮೊಹಮದ್ ಶಮಿ, ರವಿ ಬಿಷ್ಣೋಯಿ, ಅರ್ಷದೀಪ್ ಸಿಂಗ್.

    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್.
    ಮುಖಾಮುಖಿ: 25
    ಮುಂಬೈ: 14
    ಪಂಜಾಬ್: 11

    ದುರ್ಬಲ ಹೃದಯದವರು ಪಂಜಾಬ್ ತಂಡದ ಪಂದ್ಯ ನೋಡಬೇಡಿ, ಪ್ರೀತಿ ಝಿಂಟಾ ಎಚ್ಚರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts