More

    ರಾಮನಗರದಲ್ಲಿ ಬರೋಬ್ಬರಿ 11 ಲಕ್ಷ ರೂ. ಸಂಗ್ರಹ

    ರಾಮನಗರ: ಜಿಲ್ಲೆಯಲ್ಲಿ ಮಾಸ್ಕ್ ಹಾಕದವರಿಗೆ ದಂಡ ಹಾಕುವ ಕಾರ್ಯಾಚರಣೆಯಲ್ಲಿ ಬರೋಬ್ಬರಿ 11 ಲಕ್ಷ ರೂ. ಸಂಗ್ರಹಿಸಲಾಗಿದೆ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮಾಡಲು ಸರ್ಕಾರ ದಂಡ ವಿಧಿಸುವ ಪ್ರಯೋಗ ಮಾಡಿತು. ಮೊದಲಿಗೆ 1 ಸಾವಿರ ರೂ ಇದ್ದ ದಂಡದ ಮೊತ್ತ ನಂತರ ನಗರ ಪ್ರದೇಶಕ್ಕೆ 250 ರೂ. ಗ್ರಾಮೀಣ ಪ್ರದೇಶಕ್ಕೆ 100 ರೂ.ಗೆ ಇಳಿಕೆಯಾಯಿತು. ಇದರ ಪರಿಣಾಮ ರಾಮನಗರ ಜಿಲ್ಲೆಯ 22 ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ದಂಡ ವಿಧಿಸಿದ್ದಾರೆ.

    10 ಸಾವಿರ ಕೇಸ್: ನವೆಂಬರ್ 1ರ ಅಂತ್ಯಕ್ಕೆ ರಾಮನಗರ ಜಿಲ್ಲೆಯ 22 ಪೊಲೀಸ್ ಠಾಣೆಗಳಲ್ಲಿ ಮಾಸ್ಕ್ ಹಾಕದವರ ವಿರುದ್ಧ 9,866 ಕೇಸ್​ಗಳನ್ನು ದಾಖಲಿಸಿ, ಒಟ್ಟು 11,36,650 ರೂ. ದಂಡ ಸಂಗ್ರಹಿಸಲಾಗಿದೆ. ಇದರಲ್ಲಿ ಅತಿ ಹೆಚ್ಚು ಪ್ರಕರಣಗಳು ಬೆಂಗಳೂರು ನಗರ ಜಿಲ್ಲೆಯ ಕೆಲವು ಪ್ರದೇಶಗಳನ್ನು ಒಳಗೊಂಡಿರುವ ಕಗ್ಗಲೀಪುರ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿವೆ. ಇಲ್ಲಿ ಒಟ್ಟು 1,794 ಪ್ರಕರಣಗಳನ್ನು ದಾಖಲಿಸಿ, 1,79,400 ರೂ. ದಂಡ ವಿಧಿಸಲಾಗಿದೆ. ನಂತರದ ಎರಡು ಸ್ಥಾನಗಳನ್ನು ರಾಮನಗರದ ಪುರ, ಬಿಡದಿ ಪಡೆದುಕೊಂಡಿವೆ. ಕ್ರಮವಾಗಿ ಇಲ್ಲಿ, 634 ಹಾಘೂ 588 ಪ್ರಕರಣಗಳನ್ನು ದಾಖಲಿಸಿ, 63,400 ರೂ, ಹಾಗೂ 63,600 ರೂ. ದಂಡ ಸಂಗ್ರಹಿಸಲಾಗಿದೆ. ಅತಿ ಕಡಿಮೆ ಎಂದರೆ ಸಂಪೂರ್ಣ ಗ್ರಾಮೀಣ ಪ್ರದೇಶ ಹೊಂದಿರುವ ಎಂ.ಕೆ. ದೊಡ್ಡಿ ಠಾಣೆಯಲ್ಲಿ ಕೇವಲ 85 ಪ್ರಕರಣಗಳನ್ನು ದಾಖಲಿಸಿ, 8,500 ರೂ ದಂಡ ಹಾಕಲಾಗಿದೆ.

    ದಂಡಕ್ಕೆ ಹೆದರುತ್ತಿಲ್ಲ: ಒಂದೆಡೆ ಮಾಸ್ಕ್ ಹಾಕದವರ ವಿರುದ್ಧದ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆಯಾದರೂ, 100 ರೂ. ದಂಡ ಲೆಕ್ಕಕ್ಕಿಲ್ಲ ಎನ್ನುವಂತೆ ಆಗಿದೆ. ದಂಡ ಕಟ್ಟಿದರೂ ಮಾಸ್ಕ್ ಇಲ್ಲದೆ ಓಡಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ವಾಹನ ಚಲಾವಣೆ ಮಾಡಬೇಕಾದ ಸಂದರ್ಭದಲ್ಲೂ ಮಾಸ್ಕ್ ಧರಿಸಬೇಕು ಎನ್ನುವ ನಿಯಮವಿದ್ದರೂ ಇದನ್ನು ಮೀರುವವರ ಸಂಖ್ಯೆಯೂ ಕಡಿಮೆಯಿಲ್ಲ ಎನ್ನುತ್ತಾರೆ ಪೊಲೀಸರು. ಇನ್ನು ಬೈಕ್ ಸವಾರರ ಬಗ್ಗೆ ಹೇಳುವಂತೆಯೇ ಇಲ್ಲ. ಹೆಚ್ಚಿನವರು ಮಾಸ್ಕ್ ಧರಿಸದೆ ಓಡಾಡುವುದು ಸಾಮಾನ್ಯ.

    ಮತ್ತೊಂದೆಡೆ ದಂಡ ವಿಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಹುತೇಕ ಮಂದಿ ಪೊಲೀಸರ ಜತೆ ವಾಗ್ವಾದಕ್ಕೆ ಇಳಿಯುವುದು ಸಾಮಾನ್ಯವಾಗಿದೆ. ಆದರೆ ಪೊಲೀಸರು ತಾಳ್ಮೆ ಪ್ರದರ್ಶಿಸಿ ಮಾಸ್ಕ್ ಧರಿಸದ್ದಕ್ಕೆ ದಂಡ ವಿಧಿಸಿ, ಜತೆಗೆ ಅರಿವು ಮೂಡಿಸುತ್ತಿದ್ದಾರೆ.

    ಜನರು ಎಚ್ಚೆತ್ತುಕೊಳ್ಳಬೇಕಿದೆ

    ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆಗಿಂತ ಮಾಸ್ಕ್ ಹಾಕದೆ ದಂಡ ಕಟ್ಟಿದವರ ಸಂಖ್ಯೆಯೇ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸೋಂಕಿತರ ಪ್ರಮಾಣ ಕಡಿಮೆ ಆಗಿದ್ದರೂ ಮುಂದಿನ ದಿನಗಳಲ್ಲಿ ಈ ಪ್ರಮಾಣ ಹೆಚ್ಚಾಗದೆ ಇರದು ಎನ್ನಲಾಗದು. ಜಿಲ್ಲೆಯನ್ನು ಸೋಂಕು ಮುಕ್ತಗೊಳಿಸಲು ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಮಾಸ್ಕ್ ಧರಿಸುವುದು, ಹ್ಯಾಂಡ್ ಸ್ಯಾನಿಸೈಜರ್ ಬಳಕೆ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಸೇರಿ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸೋಂಕು ಹರಡದಂತೆ ಎಚ್ಚರ ವಹಿಸಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಿದೆ.

    ಮಾಸ್ಕ್ ಧರಿಸದವರ ವಿರುದ್ಧದ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಜತೆಗೆ ಜನತೆಯಲ್ಲಿ ಅರಿವು ಮೂಡಿಸುವ ಕಾರ್ಯವೂ ನಡೆದಿದೆ. ಜನತೆ ತಮ್ಮ ಮತ್ತು ತಮ್ಮವರ ಆರೋಗ್ಯದ ಹಿತದೃಷ್ಟಿಯಿಂದ ಮಾಸ್ಕ್ ಧರಿಸುವುದನ್ನು ಮರೆಯಬಾರದು.

    | ಎಸ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ

    ಗಂಗಾಧರ್ ಬೈರಾಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts