More

    ಪೋಷಣ್ ಅಭಿಯಾನ ರಾಮನಗರ ಪ್ರಥಮ ಸ್ಥಾನ; ಟ್ರ್ಯಾಕಿಂಗ್‌ನಲ್ಲಿ ಶೇ.99.25 ಸಾಧನೆ

    | ಗಂಗಾಧರ್ ಬೈರಾಪಟ್ಟಣ ರಾಮನಗರ

    ಅಪೌಷ್ಟಿಕ ಮಕ್ಕಳಿಗೆ ಪೋಷಣೆ ಒದಗಿಸಲು ಕೇಂದ್ರ ಸರ್ಕಾರ ಆರಂಭಿಸಿರುವ ಪೋಷಣ್ ಅಭಿಯಾನದ ಪೋಷಣ್ ಟ್ರ್ಯಾಕಿಂಗ್‌ನಲ್ಲಿ ರಾಮನಗರ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.

    ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಟ್ರ್ಯಾಕಿಂಗ್‌ ಆ್ಯಪ್ ಮೂಲಕ ಅವರ ಮೇಲೆ ನಿಗಾ ಇಡಲಾಗುತ್ತದೆ. ಇದರಲ್ಲಿ ಮಕ್ಕಳ ನೋಂದಣಿ ಕಾರ್ಯವನ್ನು ರಾಜ್ಯಾದ್ಯಂತ ಕೈಗೊಳ್ಳಲಾಗಿದ್ದು, ಮಕ್ಕಳ ಮಾಹಿತಿ ದಾಖಲಿಸುವಲ್ಲಿ ಜಿಲ್ಲೆ ಶೇ.99.25 ಸಾಧನೆ ಮಾಡುವ ಮೂಲಕ ಮೊದಲ ಸ್ಥಾನದಲ್ಲಿದೆ.

    ಪೋಷಣ್ ಅಭಿಯಾನ್: ಪೋಷಣ್ ಟ್ರ್ಯಾಕಿಂಗ್‌ ಆ್ಯಪ್‌ನಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರು, 0-6 ತಿಂಗಳ, 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳು ಹಾಗೂ 3-6 ವರ್ಷದೊಳಗಿನ ಮಕ್ಕಳನ್ನು ಈ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ. ಪ್ರತಿ ತಿಂಗಳು 0-6 ವರ್ಷದೊಳಗಿನ ಮಕ್ಕಳ ಎತ್ತರ ಮತ್ತು ತೂಕ ಅಳತೆ ಮಾಡಿ, ಆ್ಯಪ್‌ನಲ್ಲಿ ದಾಖಲು ಮಾಡಬೇಕು. ಸರ್ಕಾರ ನಿಗದಿಪಡಿಸಿರುವ ಮಾನದಂಡಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಕ್ಕಳ ಬೆಳವಣಿಗೆ ಕಂಡುಬಂದರೆ ಅಂತಹ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ನಂತರ ಇಂತಹ ಮಕ್ಕಳ ಮೇಲೆ ನಿಗಾ ಇಟ್ಟು ಪೌಷ್ಟಿಕತೆ ಹೆಚ್ಚಿಸುವ ಸಲುವಾಗಿ ಸರ್ಕಾರ ಸೌಲಭ್ಯಗಳನ್ನು ಒದಗಿಸುತ್ತದೆ. ಅಲ್ಲದೆ, ಹುಟ್ಟಿದ ಮಗು 2.5 ಕೆಜಿಗಿಂತ ಕಡಿಮೆ ಇದ್ದರೆ ಅಂತಹ ಮಗುವನ್ನು ಅಪೌಷ್ಟಿಕ ಮಗು ಎಂದು ಪರಿಗಣಿಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಪುನಶ್ಚೇತನ ಕೇಂದ್ರಕ್ಕೆ ದಾಖಲು ಮಾಡಿ ಮಕ್ಕಳ ತಜ್ಞರಿಂದ ಚಿಕಿತ್ಸೆ ಕೊಡಿಸಲಾಗುತ್ತದೆ.

    ಜಿಲ್ಲೆಯೇ ಪ್ರಥಮ: ಸೆಪ್ಟೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 77961 ಫಲಾನುಭವಿಗಳನ್ನು ನೋಂದಣಿ ಮಾಡಲಾಗಿದೆ. ರಾಮನಗರ ತಾಲೂಕಿನಲ್ಲಿ 23,570, ಚನ್ನಪಟ್ಟಣದಲ್ಲಿ 18,665, ಕನಕಪುರದಲ್ಲಿ 14,840, ಮಾಗಡಿಯಲ್ಲಿ 13,589 ಮತ್ತು ಮರಳವಾಡಿಯಲ್ಲಿ 7,297 ಮಂದಿಯನ್ನು ಯೋಜನೆಯಡಿ ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1543 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿನ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿರುವ ಗರ್ಭಿಣಿಯರು, ಬಾಣಂತಿಯರು ಹಾಗೂ 0-6 ವರ್ಷದೊಳಗಿನ ಮಕ್ಕಳ ಕುರಿತ ಮಾಹಿತಿಯನ್ನು ಆ್ಯಪ್ ಮೂಲಕ ದಾಖಲು ಮಾಡಿಕೊಳ್ಳಬೇಕು. ಇದರಿಂದ ಮಕ್ಕಳ ಟ್ರ್ಯಾಕಿಂಗ್‌ ಸಾಧ್ಯವಾಗುತ್ತದೆ.

    ಪೋಷಣ್ ಟ್ರ್ಯಾಕಿಂಗ್‌ನಲ್ಲಿ ರಾಮನಗರ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಕಾಯ್ದುಕೊಂಡಿದೆ. ಇದಕ್ಕೆ ತಳಮಟ್ಟದ ಅಂಗನವಾಡಿ ಸಿಬ್ಬಂದಿ ಕಾರ್ಯಕ್ಷಮತೆಯೇ ಕಾರಣ. ಸೆಪ್ಟೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 77,961 ಮಂದಿ ನೋಂದಣಿ ಆಗಿದೆ. ಈ ಸಾಧನೆ ಮುಂದುವರಿಸಿಕೊಂಡು ಹೋಗಲಾಗುವುದು.
    ಸಿ.ವಿ.ರಾಮನ್ ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts