More

    ರಾಜ್ಯದ ಚುಕ್ಕಾಣಿ ಹಿಡಿಯಲು ಆಶೀರ್ವದಿಸಿ: ರಾಮನಗರ ಜನರೆದುರು ಮನ ತೆರೆದಿಟ್ಟ ಎಚ್‌ಡಿಕೆ

    ರಾಮನಗರ: ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದ ನನ್ನನ್ನು ಕುತಂತ್ರದಿಂದ ತೆಗೆದು ಹಾಕಿದ್ದು, ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿಯಲು ರಾಮನಗರ ಕ್ಷೇತ್ರದ ಜನತೆ ಆರ್ಶೀವಾದ ಬೇಕಿದೆ ಎಂದು ಮಾಜಿ ಮುಖ್ಯ ಎಚ್.ಡಿ.ಕುಮಾರಸ್ವಾಮಿ ಹೇಳಿದರು.


    ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಮುಂಡೇಶ್ವರಿ ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಜೆಡಿಎಸ್ ವತಿಯಿಂದ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡಿ, ನಾನು ಮಣ್ಣಲ್ಲಿ ಮಣ್ಣಾಗುವುದು ಇಲ್ಲಿಯೇ. ಸಸಿಯಾಗಿ ನೆಟ್ಟು, ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆಸಿದ್ದೀರಿ. ರಾಮನಗರ ಕ್ಷೇತ್ರದ ಜನತೆ ಕೊಟ್ಟ ಶಕ್ತಿಯನ್ನು ಲಕ್ಷಾಂತರ ಜನರಿಗೆ ಧಾರೆ ಎರೆದಿದ್ದೇನೆ. ಕಳೆದ ಬಾರಿ ಚುನಾವಣೆಯಲ್ಲಿ ಕಾರ್ಯಕರ್ತರ ಒತ್ತಡದಿಂದಾಗಿ ಎರಡು ಕಡೆ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ಚನ್ನಪಟ್ಟಣ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟರೆ ಮತ್ತೆ ಅಲ್ಲಿ ಗೆಲ್ಲಲು ಕಷ್ಟ ಎಂದು ಇಲ್ಲಿಗೆ ರಾಜೀನಾಮೆ ಕೊಡಬೇಕಾಗಿ ಬಂತು ಎಂದರು.


    ನಾನು ಬದುಕಿರುವ ಒಂದೊಂದು ಕ್ಷಣ ಬಡವರಿಗಾಗಿ, ನೀವು ಕೊಟ್ಟಿರುವ ಶಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ಜಾರಿಗೆ ತಂದ ರಾಜೀವ್‌ಗಾಂಧಿ ವಿವಿ ಕಾಮಗಾರಿಗೆ ಗುದ್ದಲಿಪೂಜೆ ಮಾಡುತ್ತೇನೆ ಎನ್ನುತ್ತಾರೆ, ಆದರೆ ಇದುವರೆಗೂ ಕಾಮಗಾರಿ ಆರಂಭಿಸಿಲ್ಲ ಎಂದು ಸರ್ಕಾರವನ್ನು ಎಚ್‌ಡಿಕೆ ಟೀಕಿಸಿದರು.

    ಜಮೀನು ಬಿಟ್ಟರೆ ಬೇರೇನಿಲ್ಲ: ರಾಮನಗರದಲ್ಲಿ ಕೆಲವರು ತಪ್ಪಿನ ರಾಜಕಾರಣ ಮಾಡುತ್ತಿದ್ದಾರೆ. ಆರೋಗ್ಯದ ಸಮಸ್ಯೆ ಇದ್ದರೂ ನಿಮ್ಮ ಸೇವೆ ಮಾಡಲು ಹೊರಟಿದ್ದೇನೆ. ನಾನು ಶಿಕ್ಷಣ ಸಂಸ್ಥೆ, ಕೈಗಾರಿಕೆ ಹೊಂದಿಲ್ಲ. ಕೇತಿಗಾನಹಳ್ಳಿ ಬಳಿ ಇರುವ 45 ಎಕರೆ ಜಮೀನು ಬಿಟ್ಟರೇ ಬೇರೆ ಏನೂ ಇಲ್ಲ. ಪ್ರತಿನಿತ್ಯ ಮನೆಯ ಬಳಿ ಜನರು ಬರುತ್ತಾರೆ. ಎಲ್ಲಿಂದ ಕೊಡಲಿ. ಐದು ವರ್ಷದ ಸರ್ಕಾರ ಕೊಟ್ಟರೆ ನಿಮ್ಮ ಮನೆ ಮಗನಾಗಿ ಕೆಲಸ ಮಾಡುತ್ತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

    ಕಾಂಗ್ರೆಸ್‌ನವರಿಗೆ ಸೋನಿಯಾ ಚಿಂತೆ – ಬಿಜೆಪಿಗೆ ಮೋದಿ ಚಿಂತೆ: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ರಾಮನಗರರಿಂದಲೇ ಶಾಸಕರಾಗಿ ಮುಖ್ಯಮಂತ್ರಿಯೂ ಆಗಿ, ಪ್ರಧಾನಿಯೂ ಆದ ದೇವೇಗೌಡರಿಗೆ ಈಗ 90 ವರ್ಷಗಳು. ಈಗಲೂ ಅವರಿಗೆ ರಾಜ್ಯದ್ದೇ ಚಿಂತೆ. ಆದರೆ ಕಾಂಗ್ರೆಸ್‌ನವರಿಗೆ ಸೋನಿಯಾಗಾಂಧಿ ಚಿಂತೆ, ಬಿಜೆಪಿ ಅವರಿಗೆ ಮೋದಿ ಚಿಂತೆ ಎಂದರು.


    2023ಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದು, ಹಿಂದಿನ ಚಾಮುಂಡೇಶ್ವರಿ ಕರಗದಲ್ಲಿ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು, ಮುಂದಿನ ಚಾಮುಂಡೇಶ್ವರಿ ಕರಗಕ್ಕೆ ಸಿಎಂ ಆಗಿ ಬಂದು ಉತ್ಸವ ಮಾಡುತ್ತಾರೆ, ಸಾಬ್ರು ಹೇಳಿದ ಮಾತು ಯಾವತ್ತು ಸುಳ್ಳಾಗೋದಿಲ್ಲ ಎಂದು ಭವಿಷ್ಯ ನುಡಿದರು. ಎಲ್ಲರೂ ಅವರವರ ಉತ್ಸವ ಮಾಡಿಕೊಳ್ತಿದ್ದಾರೆ, ಆದರೆ ಕುಮಾರಸ್ವಾಮಿ ಅವರು ತಮ್ಮ ಉತ್ಸವ ಮಾಡಿಕೊಳ್ಳುತ್ತಿಲ್ಲ, ಬದಲಿಗೆ ಕರ್ನಾಟಕ ರೈತರ ಉತ್ಸವ ಮಾಡಿದ್ದಾರೆ. ಯಾಕಂದ್ರೆ ನಮಗೆ ಇರುವುದು ನಿಮ್ಮ ಚಿಂತೆ, ನಮಗೆ ಡೆಲ್ಲಿ ಬೇಡ ಏನು ಬೇಡ, ಹಳ್ಳಿಯಲ್ಲಿ ನೇಗಿಲು ಹೊರುವ ನೀವೆ ನಮಗೆ ಹೈಕಮಾಂಡ್, ಮುಂದೆ ಅಧಿಕಾರ ನಿಶ್ಚಿತ. ಯಾರು ಹೆದರಿಸಿದರೂ ಹೆದರಬೇಡಿ ಎಂದರು.

    ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ, ಮಾಗಡಿ ಶಾಸಕ ಎ.ಮಂಜುನಾಥ್, ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್, ಎಂಎಲ್‌ಸಿ ರಮೇಶ್‌ಗೌಡ ಮುಂತಾದವರು ಇದ್ದರು. ಅರ್ಜುನ್ ಜನ್ಯ ಮತ್ತು ರಾಜೇಶ್ ಕೃಷ್ಣನ್ ನೇತೃತ್ವದಲ್ಲಿ ನಡೆದ ಮ್ಯೂಸಿಕಲ್ ನೈಟ್ ಸಭಿಕರ ಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts