More

    ಮಹಾ ಸಚಿವರ ವಿರುದ್ಧ ಕ್ರಮ ಕೈಗೊಳ್ಳಿ ; ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ಚನ್ನೇಗೌಡ ಆಗ್ರಹ

    ಕೋಲಾರ : ಮಹಾಜನ್ ಆಯೋಗದ ವರದಿಗೆ ತಗಾದೆ ಸುಪ್ರೀಂಕೋರ್ಟ್‌ನಲ್ಲಿರುವಾಗ ರಾಜ್ಯೋತ್ಸವದಂದು ಕರಾಳ ದಿನ ಆಚರಿಸಿದ ಮಹಾರಾಷ್ಟ್ರ ಸರ್ಕಾರದ ಸಚಿವರನ್ನು ವಜಾಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಕಸಾಪ ನಿಕಟ ಪೂರ್ವ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಕೇಂದ್ರ ಹಾಗೂ ಸುಪ್ರೀಂಕೋರ್ಟ್ ಅನ್ನು ಒತ್ತಾಯಿಸಿದರು.

    ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿನ ಕಸಾಪ ಕಾರ್ಯಾಲಯದಲ್ಲಿ ಜಿಲ್ಲಾ ಕಸಾಪ, ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮರಾಠಿ ಭಾಷಿಗರಾದ ಮಹಾಜನ್ ಸಿದ್ಧಪಡಿಸಿದ ಆಯೋಗದ ವರದಿಗೆ ರಾಜ್ಯ ಸಮ್ಮತಿಸಬಾರದಿತ್ತು.

    ಸುಪ್ರೀಂಕೋರ್ಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರ ದಾವೆ ಹೂಡಿದೆ. ರಾಜ್ಯೋತ್ಸವದಂದು ಕಪ್ಪು ಪಟ್ಟಿ ಪ್ರದರ್ಶನ ಮಾಡಿ ಕರಾಳ ದಿನ ಆಚರಿಸುವ ಮೂಲಕ ಮಹಾ ಸರ್ಕಾರದ ಸಚಿವರು ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಆಪಾದಿಸಿದರು.

    ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಕರ್ನಾಟಕ ನಮಗೆ ಸಿಕ್ಕಿಲ್ಲ. ಕನ್ನಡ ಕಾವೇರಿಯಿಂದ ಗುಜರಾತ್‌ನ ಗೋದಾವರಿವರೆಗೆ ಪಸರಿಸಿತ್ತು. ಕಾಸರಗೋಡು ಸೇರಿ 2 ಕೋಟಿ ಕನ್ನಡಿಗರು ಭೌಗೋಳಿಕವಾಗಿ ಕರ್ನಾಟಕದಿಂದ ಹೊರಗಿಟ್ಟು ರಾಜ್ಯೋತ್ಸವ ಆಚರಿಸುವಂತಾಗಿದ್ದು, ಈ ಕೊರತೆ ನೀಗಿಸಲು ಸರ್ಕಾರ ಹೆಜ್ಜೆಗಳನ್ನಿಡಬೇಕು ಎಂದರು.

    ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಕನ್ನಡಕ್ಕೆ ಒತ್ತು ನೀಡಿ ನೌಕರರು ಕನ್ನಡದಲ್ಲೇ ವ್ಯವಹರಿಸುತ್ತಿದ್ದಾರೆ. ವರ್ಷಕ್ಕೆ 10,000 ಮಂದಿ ಕನ್ನಡಿಗರಿಗೆ ಕೆಲಸ ಕೊಡುತ್ತಿದೆ. 1.50 ಕೋಟಿ ರೂ.ಗಳ ದತ್ತಿನಿಧಿ ಸ್ಥಾಪಿಸಿದೆ. ಬಸ್‌ಗಳಲ್ಲಿ ಕನ್ನಡದ ಕವಿವಾಣಿ ಪ್ರಚುರಪಡಿಸುವ ಮೂಲಕ ಕನ್ನಡದ ತೇರು ಎಳೆಯುತ್ತಿದೆ ಎಂದರು.
    ಉಪನ್ಯಾಸ ನೀಡಿದ ಡಾ. ಡಿ.ಎಸ್.ಶ್ರೀನಿವಾಸಪ್ರಸಾದ್, ಕನ್ನಡ ಮಾಸದ ಕಾರ್ಯಕ್ರಮವಾಗದೆ ಎಂದೆಂದಿಗೂ ಮಾಸಿ ಹೋಗದ ಕನ್ನಡವಾಗಿರಬೇಕು, ನರಳುವ ಕನ್ನಡ, ಕೆರಳಿಸುವ ಕನ್ನಡ ಬೇಡ, ನಿತ್ಯ ಅರಳುವ ಕನ್ನಡ ನಮ್ಮದಾಗಬೇಕು. ಕನ್ನಡ ಭಾಷೆ ಎಲ್ಲವನ್ನೂ ನೀಡಿದೆ. ಅದನ್ನು ಉಳಿಸುವ ಕೆಲಸ ಆಗಬೇಕು ಎಂದರು.

    ಸಾಹಿತಿ ಜರಗನಹಳ್ಳಿ ಶಿವಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್.ಚಂದ್ರಶೇಖರ್ ಮಾತನಾಡಿದರು.ಬೆಂಗಳೂರು ದಕ್ಷಿಣ ತಾಪಂ ಮಾಜಿ ಅಧ್ಯಕ್ಷ ಅಣ್ಣಯ್ಯಪ್ಪ, ಕೆಎಸ್ಸಾರ್ಟಿಸಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಸಿ ಗೋಪಾಲಗೌಡ, ಪದಾಧಿಕಾರಿ ಬಾಲಕೃಷ್ಣ, ಮುಖಂಡ ಪಾಲ್ಗುಣ ಹಾಜರಿದ್ದರು. ಕನ್ನಡ ಸಾಹಿತ್ಯ ಸಂಸ್ಕೃತಿಯ ಸಂಶೋಧನೆಯಲ್ಲಿ ಯಶಸ್ಸು ಕಂಡಿರುವ ಡಾ.ಸುನೀತಾ ಬಿ.ವಿ, ಡಾ.ನಾಗೇಶ್ ಕೆ.ಎಂ ಅವರನ್ನು ಸನ್ಮಾನಿಸಲಾಯಿತು.

    ಕನ್ನಡ ಪಸರಿಸುವ ಕೆಲಸ: ಕಸಾಪ ಜಿಲ್ಲೆಯಲ್ಲಿ ವಿಶಿಷ್ಠ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಇದು ರಾಜ್ಯದ ಇತರ ಜಿಲ್ಲೆಗಳಲ್ಲೂ ಕಾರ್ಯಗತಗೊಳ್ಳುತ್ತಿದೆ. ಕರೊನಾದಿಂದ ಚಟುವಟಿಕೆ ನಡೆಸಲು ಸಾಧ್ಯವಾಗದಿದ್ದರೂ ಗಡಿಭಾಗದಲ್ಲಿ ಕನ್ನಡ ಧ್ವಜಸ್ತಂಭ ಸ್ಥಾಪಿಸುವ ಮೂಲಕ ಗಡಿಯಲ್ಲೂ ಕನ್ನಡದ ಕಂಪು ಪಸರಿಸುವ ಕೆಲಸ ಮಾಡಿದ್ದೇವೆ. ಈ ಬಾರಿ ರಾಜ್ಯೋತ್ಸವಕ್ಕೆ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಕವಿವಾಣಿ, ಭಿತ್ತಿ ಪತ್ರಗಳ ಅಭಿಯಾನ, ಸಾಧಕರನ್ನು ಸನ್ಮಾನಿಸಲಾಗುತ್ತಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts