ಮುಲ್ಲನ್‌ಪುರ: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿದ ರಾಜಸ್ಥಾನ ರಾಯಲ್ಸ್ ಐಪಿಎಲ್-17ರಲ್ಲಿ ಆತಿಥೇಯ ಪಂಜಾಬ್ ಕಿಂಗ್ಸ್ ಎದುರು 3 ವಿಕೆಟ್‌ಗಳಿಂದ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಸಂಜು ಸ್ಯಾಮ್ಸನ್ ಬಳಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಸತತ 2ನೇ ಸೋಲುಂಡ ಪಂಜಾಬ್ ಕಿಂಗ್ಸ್ 8ನೇ ಸ್ಥಾನದಲ್ಲಿ ಉಳಿದಿದೆ.
ಮಹಾರಾಜ ಯದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಪಂಜಾಬ್, ಅಗ್ರ ಕ್ರಮಾಂಕ ಬ್ಯಾಟರ್‌ಗಳ ವೈಲ್ಯದಿಂದ 70 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಇಂಪ್ಯಾಕ್ಟ್ ಪ್ಲೇಯರ್ ಆಶುತೋಷ್ ಶರ್ಮ (31 ರನ್, 16 ಎಸೆತ, 1 ಬೌಂಡರಿ, 3 ಸಿಕ್ಸರ್) ಹೋರಾಟದ ಲವಾಗಿ ಪಂಜಾಬ್ 8 ವಿಕೆಟ್‌ಗೆ 147 ರನ್‌ಗಳ ಗೌರವಯುತ ಮೊತ್ತ ಪೇರಿಸಿತು. ಪ್ರತಿಯಾಗಿ ಬ್ಯಾಟರ್ ಶಿಮ್ರೊನ್ ಹೆಟ್ಮೆಯರ್ (27*ರನ್, 10 ಎಸೆತ, 1 ಬೌಂಡರಿ, 3 ಸಿಕ್ಸರ್) ಕೊನೇ ಓವರ್‌ನಲ್ಲಿ ತೋರಿದ ಸಾಹಸದಿಂದ ರಾಜಸ್ಥಾನ 19.5 ಓವರ್‌ಗಳಲ್ಲಿ 7 ವಿಕೆಟ್‌ಗೆ 152 ರನ್‌ಗಳಿಸಿ ಜಯದ ಹಳಿಗೆ ಮರಳಿತು.
ಪಂಜಾಬ್ ಪ್ರತಿರೋಧ: ಸಾಧಾರಣ ಗುರಿ ಬೆನ್ನಟ್ಟಿದ ರಾಜಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ (39) ಹಾಗೂ ತನುಷ್ ಕೋಟ್ಯಾನ್ (24) ಎಚ್ಚರಿಕೆಯ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 50 ಎಸೆತಗಳಲ್ಲಿ 56 ರನ್ ಗಳಿಸಿದರು. ಲಿವಿಂಗ್‌ಸ್ಟೋನ್ ಪಂಜಾಬ್‌ಗೆ ಮೊದಲ ಯಶಸ್ಸು ತಂದರು. ನಂತರ 2ನೇ ವಿಕೆಟ್‌ಗೆ ಜೈಸ್ವಾಲ್- ಸಂಜು ಸ್ಯಾಮ್ಸನ್ (18) 28 ರನ್ ಕಲೆಹಾಕಿದರು. ಆಗ ಇವರಿಬ್ಬರ ವಿಕೆಟ್ ಪಡೆದ ಕಗಿಸೋ ರಬಾಡ (18ಕ್ಕೆ 2) ಪಂಜಾಬ್ ಹೋರಾಟ ಜೀವಂತವಿರಿಸಿದರು. ಇದರ ಬೆನ್ನಲ್ಲೇ ರಿಯಾನ್ ಪರಾಗ್ (23), ಧ್ರುವ ಜುರೆಲ್ (6) ಡಗೌಟ್ ಸೇರಿದರು. 12 ಎಸೆತಗಳಲ್ಲಿ 20 ರನ್ ಬೇಕಿದ್ದಾಗ ಸ್ಯಾಮ್ ಕರ‌್ರನ್ (25ಕ್ಕೆ2) 10 ರನ್ ನೀಡಿ ರೋವ್ಮನ್ ಪೊವೆಲ್ (11), ಕೇಶವ್ ಮಹಾರಾಜ್ (1) ವಿಕೆಟ್ ಕಬಳಿಸಿದರು. ಅರ್ಷದೀಪ್ ಸಿಂಗ್ ಎಸೆದ ಕೊನೇ ಓವರ್‌ನಲ್ಲಿ 2 ಸಿಕ್ಸರ್ ಸಿಡಿಸಿದ ಹೆಟ್ಮೆಯರ್ ರಾಜಸ್ಥಾನಕ್ಕೆ ರೋಚಕ ಗೆಲುವು ತಂದರು.