More

    ರೈತ ಸಂಘದಿಂದ ಚುನಾವಣೆಗೆ ಸ್ಪರ್ಧೆ; ಕೋಡಿಹಳ್ಳಿ ಚಂದ್ರಶೇಖರ

    ಹಾವೇರಿ: ರೈತರ ಪ್ರತಿಭಟನೆಗೆ ಮಣಿದು ಕೇಂದ್ರ ಸರ್ಕಾರ ಮೂರು ಕಾಯ್ದೆಗಳನ್ನು ವಾಪಸ್ ಪಡೆಯಿತು. ಆದರೆ, ರಾಜ್ಯ ಸರ್ಕಾರ ಇಂದು ನಾಳೆ ಎಂದು ಕಾಲಹರಣ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡಿದೆ. ಹಾಗಾಗಿ, ಬಿಜೆಪಿಯವರಿಗೆ ಪಾಠ ಕಲಿಸುವ ಉದ್ದೇಶದಿಂದ ಈ ಬಾರಿ ರೈತ ಸಂಗದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ನಾವು ರೈತರೇ ಎಂದು ಹೇಳಿಕೊಳ್ಳುವ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು, ಬೆಳಗಾವಿ ಅಧಿವೇಶನದಲ್ಲಿ ಮೂರು ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದಿದ್ದರು. ನಂತರ ಬೆಂಗಳೂರು ಅಧಿವೇಶನದಲ್ಲಿ ಮಾಡುತ್ತೇವೆ ಎಂದರು. ಆದರೆ, ಈವರೆಗೆ ಮಾಡಲಿಲ್ಲ. ಇದರ ಹಿಂದೆ ಬಿಜೆಪಿ ಹಿಡನ್ ಅಜೆಂಡಾ ಅಡಗಿದೆ. ರಾಜ್ಯವನ್ನು ಮಾದರಿಯಾಗಿಟ್ಟುಕೊಂಡು 2024ರ ಲೋಕಸಭೆ ಚುನಾವಣೆ ಬಳಿಕ ಮತ್ತೆ ಮೂರು ಕಾಯ್ದೆ ಜಾರಿಗೊಳಿಸುವ ಹುನ್ನಾರವಿದೆ ಎಂದು ಆರೋಪಿಸಿದರು.
    ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯಕ್ಕೆ ಭೇಟಿ ಕೊಟ್ಟಾಗ ಗುಜರಾತ್‌ನ ಅಮೂಲ್ ಜತೆ ನಂದಿನಿ ಸೇರ್ಪಡೆ ಮಾಡೋಣ ಎಂದಿದ್ದರು. ರಾಜ್ಯದಲ್ಲಿ ಜಾನುವಾರು ಕಾಯ್ದೆ ಜಾರಿಗೊಳಿಸಿದ್ದು ಆಕಳು ಜತೆಗೆ ಎತ್ತು, ಎಮ್ಮೆ, ಕೋಣವನ್ನೂ ಸೇರಿಸಿದ್ದಾರೆ. ರೈತರ ಕೈಯಿಂದ ಹೈನುಗಾರಿಕೆ ತಪ್ಪಿಸಿ ಕಾರ್ಪೋರೇಟ್ ವಶಕ್ಕೆ ಒಪ್ಪಿಸುವ ತಂತ್ರವನ್ನು ಬಿಜೆಪಿ ಹೂಡಿದೆ. ಇದನ್ನು ತಪ್ಪಿಸಲು ಸಂಘದಿಂದ ನಾನೂ ಸೇರಿದಂತೆ ಪ್ರಬಲ ಅಭ್ಯರ್ಥಿ ಇರುವ ಕಡೆಗಳಲ್ಲಿ ಚುನಾವಣೆಗೆ ಸ್ಪರ್ಧಿಸಲಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ ಎಲ್ಲರೂ ಒಂದೇ ಆಗಿದ್ದು, ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸುತ್ತೇವೆ ಎಂದರು.
    ಸುದ್ದಿಗೊಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಬತ್ತರಹಳ್ಳಿ ಭೈರೇಗೌಡ, ಭುವನೇಶ್ವರ ಶಿಡ್ಲಾಪುರ, ಹನುಮಂತಪ್ಪ ಹುಚ್ಚಣ್ಣವರ, ಚನ್ನಪ್ಪ ಮರಡೂರ, ಮಹದೇವಪ್ಪ ಮಾಳಮ್ಮನವರ, ರಾಜೇಸಾಬ ತರ್ಲಘಟ್ಟ, ನಾಗಪ್ಪ ಹಡಪದ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts