More

    ಹಾನಿ ತಂದ ಗಾಳಿ ಮಳೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ, ವೇಣೂರು, ಹೊಸಂಗಡಿ ಬಡಕೋಡಿ ಮತ್ತು ಕಾಶಿಪಟ್ಣ ಪರಿಸರದಲ್ಲಿ ಬುಧವಾರ ಗುಡುಗು ಸಹಿತ ಗಾಳಿ ಮಳೆಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

    ಬಡಕೋಡಿ ಗ್ರಾಮದ ನಡ್ತಿಕಲ್ ಎಂಬಲ್ಲಿ ಪ.ಪ.ಕಾಲನಿ ನಿವಾಸಿ ರತ್ನ ನಾಯ್ಕ ಎಂಬವರ ಮನೆಯ ಹೆಂಚು, ಶೀಟ್ ನೆಲಕ್ಕುರುಳಿದೆ. ಆಶಾ ನಾಯ್ಕ್ ಮನೆಗೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದೆ. ಕಮಲ ನಾಯ್ಕ ಮನೆಯ ಸಿಮೆಂಟ್ ಶೀಟ್, ಅಡಕೆ ಮರ, ಐತು ಶೆಟ್ಟಿ ಎಂಬುವರ ಅಡಕೆ ಮರ, ದೇವಕಿ ಎಂಬುವರ ಮನೆಯ ಸಿಮೆಂಟ್ ಶೀಟ್, ರಘುನಾಥ್ ನಾಯ್ಕರ ಕೊಟ್ಟಿಗೆ, ಜಾನಕಿ ಮತ್ತು ಸುಧೀಶ್ ಪೂಜಾರಿ ಅವರ ಮನೆಯ ಶೀಟ್, ಶುಭಾನಂದ ಪೂಜಾರಿ ಕಾಜೊಟ್ಟು, ಶ್ರೀಪತಿ ಉಪಾಧ್ಯಾಯ ಎಂಬುವರ ಅಡಕೆ ಮರ ನೆಲಕ್ಕುರುಳಿವೆ. ಪರಿಸರದ ಹಲವು ಮನೆಗಳಿಗೆ ಹಾಗೂ ಕೃಷಿಗೆ ಹಾನಿ ಉಂಟಾಗಿದೆ. ರಸ್ತೆಗೆ ಕಂಬ ಹಾಗೂ ಮರಗಳು ಉರುಳಿವೆ. ಗ್ರಾಮದಲ್ಲಿ ವಿದ್ಯುತ್ ಕಡಿತಗೊಂಡಿದೆ.

    ವಿಷಯ ತಿಳಿದ ಜನಪ್ರತಿನಿಧಿಗಳು ಸ್ಥಳೀಯರೊಂದಿಗೆ ಸೇರಿ ರಸ್ತೆಗಳಿಗೆ ಬಿದ್ದ ಮರಗಳನ್ನು ಹಾಗು ವಿದ್ಯುತ್ ಕಂಬಗಳನ್ನು ಜೆಸಿಬಿ ತರಿಸಿ ತೆರವು ಮಾಡಿಸಿದರು. ಸುಳ್ಯದ ಗ್ರಾಮೀಣ ಭಾಗದ ಕೆಲವೆಡೆ ತುಂತುರು ಮಳೆ ಸುರಿದಿದೆ. ಪುತ್ತೂರು, ಕಡಬ, ವಿಟ್ಲ, ಬಂಟ್ವಾಳ, ಮಂಗಳೂರು ಮೊದಲಾದ ಕಡೆ ಮಧ್ಯಾಹ್ನದಿಂದಲೇ ದಟ್ಟ ಮೋಡ, ಗುಡುಗಿನ ವಾತಾವರಣವಿತ್ತು. ಕೆಲವು ಕಡೆ ರಾತ್ರಿಯ ವೇಳೆ ತುಂತುರು ಮಳೆಯಿತ್ತು. ಹಗಲಿನಲ್ಲಿ ವಿಪರೀತ ಸೆಕೆ ವಾತಾವರಣವಿತ್ತು. ಮಂಗಳೂರಿನಲ್ಲಿ ಗರಿಷ್ಠ 34 ಡಿಗ್ರಿ ಹಾಗೂ ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕರಾವಳಿಯಲ್ಲಿ ಎರಡು ದಿನ ಸಾಧಾರಣದಿಂದ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಹೊಸಂಗಡಿ, ಕಾಶಿಪಟ್ಣ ಗ್ರಾಪಂಗಳಲ್ಲಿ ವ್ಯಾಪಕ ಹಾನಿ: ಬೆಳ್ತಂಗಡಿ: ಹೊಸಂಗಡಿ ಮತ್ತು ಕಾಶಿಪಟ್ಣ ಗ್ರಾಪಂ ವ್ಯಾಪ್ತಿಯ ಹೊಸಂಗಡಿ, ಬಡಕೋಡಿ, ಕಾಶಿಪಟ್ಣ, ಪೆರಾಡಿ ವ್ಯಾಪ್ತಿಯಲ್ಲಿ ಬುಧವಾರ ಸಾಯಂಕಾಲ ಒಂದು ಗಂಟೆ ಕಾಲ ಸುರಿದ ಗಾಳಿ ಮಳೆಗೆ ಜನ ಬೆಚ್ಚಿದರು. ಹೊಸಂಗಡಿ ಗ್ರಾಮದ 10ಕ್ಕೂ ಅಧಿಕ ತೋಟಗಳಿಗೆ ಹಾನಿಯಾಗಿದೆ. ಹಲವು ಮನೆಗಳ ಮತ್ತು ಕೊಟ್ಟಿಗೆಯ ಹೆಂಚು, ಸಿಮೆಂಟ್ ಶೀಟುಗಳು ಹಾರಿವೆ. ಬಡಕೋಡಿ ಗ್ರಾಮದ ರಾಘವೇಂದ್ರ ನಾಯ್ಕ ಎಂಬುವರ ಮನೆಯ ಚಾವಣಿ ಹಾರಿ ಪಕ್ಕಕ್ಕೆ ಬಿದ್ದಿದೆ. ಕೀರ್ತಿ ಜೈನ್ ಎಂಬುವರ ಮನೆಯ ಚಾವಣಿ ಬಿದ್ದು ಪಕ್ಕದಲ್ಲೇ ನಿಲ್ಲಿಸಿದ್ದ ವಾಹನಗಳು ಜಖಂಗೊಂಡಿವೆ.
    ಕಾಶಿಪಟ್ಣ ಗ್ರಾಮದಲ್ಲಿ 30ಕ್ಕಿಂತ ಅಧಿಕ ಮನೆಯ ತೋಟಗಳಿಗೆ ಹಾನಿಯಾಗಿವೆ. ಎರಡು ಟ್ರಾನ್ಸ್‌ಫಾರ್ಮರ್ ಸೇರಿ 20ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. 20ಕ್ಕೂ ಅಧಿಕ ಮನೆಗಳ ಮೇಲ್ಚಾವಣಿ ಹಾರಿವೆ. ಕಾಶಿಪಟ್ಣ ಮಸೀದಿ ಬಳಿ ಚಲಿಸುತ್ತಿದ್ದ ಖಾಸಗಿ ಬಸ್ ಮೇಲೆ ವಿದ್ಯುತ್ ಕಂಬ ಉರುಳಿ ಬೀಳುತ್ತಿದ್ದಂತೆ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ಸನ್ನು ಚರಂಡಿ ಕಡೆಗೆ ತಿರುಗಿಸಿದ್ದು, ಸಂಭವನೀಯ ಅನಾಹುತ ತಪ್ಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts