More

    4.98 ಲಕ್ಷ ಕ್ವಿಂಟಾಲ್ ಹತ್ತಿ ಖರೀದಿ

    ಸಂಸದ ರಾಜಾ ಅಮರೇಶ್ವರ ನಾಯಕ ಮಾಹಿತಿ | ರಾಯಚೂರು, ಯಾದಗಿರಿ ಜಿಲ್ಲೆ ರೈತರಿಗೆ ಅನುಕೂಲ

    ರಾಯಚೂರು: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಹತ್ತಿ ಬೆಳೆಗಾರರ ಸಂಕಷ್ಟ ಕಂಡು ಭಾರತ ಹತ್ತಿ ನಿಗಮ(ಸಿಸಿಐ)ದಿಂದ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಗೆ ವ್ಯವಸ್ಥೆ ಮಾಡಲಾಗಿದ್ದು, ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 4.98 ಲಕ್ಷ ಕ್ವಿಂಟಾಲ್ ಹತ್ತಿ ಖರೀದಿಸಲಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದರು.

    ಕರೊನಾದಿಂದ ದೇಶ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ನೆರೆ ರಾಷ್ಟ್ರದ ಗಡಿಯಲ್ಲಿನ ಕಿರಿಕಿರಿ ನಡುವೆಯೂ ಕೇಂದ್ರ ಸರ್ಕಾರ ರೈತರು, ಕಾರ್ಮಿಕರಿಗೆ ಸಹಾಯ ಹಸ್ತ ಚಾಚುತ್ತಿದೆ ಎಂದು ಸಂಸದರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಆರ್‌ಟಿಪಿಎಸ್ ಮತ್ತು ವೈಟಿಪಿಎಸ್‌ನಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯದ ಪರಿಶೀಲನೆಗೆ ತಜ್ಞರ ಸಮಿತಿ ಕಳಿಸಲು ಸಚಿವರಿಗೆ ಮನವಿ ಮಾಡಲಾಗಿದೆ. ಕರೊನಾ ಸಂಕಷ್ಟದ ಕಾರಣಕ್ಕೆ ಹಟ್ಟಿ ಚಿನ್ನದಗಣಿ ಕಂಪನಿ 70 ಲಕ್ಷ ರೂ. ಮೌಲ್ಯದ ಆಹಾರಧಾನ್ಯ, ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಕೋಟಿ ರೂ. ಕೊಟ್ಟಿದೆ. ಆದರೆ, ಆರ್‌ಟಿಪಿಎಸ್ ಜನರ ಸಹಾಯಕ್ಕೆ ಬಂದಿಲ್ಲ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.

    ಜಲಜೀವನ್ ಮಿಷನ್ ಯೋಜನೆಯಡಿ ಗುಂಜಳ್ಳಿ ಸೇರಿ ಎಂಟು ಹಳ್ಳಿಗಳಿಗೆ ಹಾಗೂ ಗೋಡಿಹಾಳ ಮತ್ತು ಸುತ್ತಲಿನ ಹಳ್ಳಿಗಳಿಗೆ ನದಿ ಮೂಲದಿಂದ ನೀರು ತಲುಪಿಸಲು ಯೋಜನೆ ರೂಪಿಸಲಾಗಿದೆ ಎಂದರು.

    ರಾಜ್ಯಸಭೆ ಸದಸ್ಯ ಅಶೋಕ ಗಸ್ತಿ ಮಾತನಾಡಿ, ಕೇಂದ್ರ ಸರ್ಕಾರ ಆರ್ಥಿಕ ಪರಿಸ್ಥಿತಿ ಪುನಶ್ಚೇತನಕ್ಕೆ ದಿಟ್ಟ ಕ್ರಮ ಕೈಗೊಳ್ಳುತ್ತಿದೆ. ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ 3 ಕೋಟಿ ರೂ.ವರೆಗೆ ಸಾಲ ಸೌಲಭ್ಯ, ಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚುವರಿಯಾಗಿ 40 ಸಾವಿರ ಕೋಟಿ ರೂ. ನೀಡಿದೆ ಎಂದರು.

    ಮಾಜಿ ಶಾಸಕ ಎ.ಪಾಪಾರೆಡ್ಡಿ, ಮುಖಂಡರಾದ ಯು.ದೊಡ್ಡಮಲ್ಲೇಶ, ಬ.ಗೋವಿಂದ, ರಾಜಕುಮಾರ, ರಮಾನಂದ ಯಾದವ್, ಶ್ರೀನಿವಾಸರೆಡ್ಡಿ, ಬಂಡೇಶ ವಲ್ಕಂದಿನ್ನಿ, ರಾಮಚಂದ್ರ ಕಡಗೋಲ ಇದ್ದರು.

     

    ಬೆಂಬಲ ಬೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ 7,904 ರೈತರಿಂದ 138 ಕೋಟಿ ರೂ. ಮೌಲ್ಯದ 2.56 ಲಕ್ಷ ಕ್ವಿಂಟಾಲ್ ಹತ್ತಿ ಖರೀದಿಸಿದ್ದು, ಈಗಾಗಲೇ 136 ಕೋಟಿ ರೂ. ರೈತರಿಗೆ ಪಾವತಿಸಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 4,783 ರೈತರಿಂದ 128 ಕೋಟಿ ರೂ. ಮೌಲ್ಯದ 2.42 ಲಕ್ಷ ಕ್ವಿಂಟಾಲ್ ಹತ್ತಿ ಖರೀದಿಸಿದ್ದು, 126 ಕೋಟಿ ರೂ. ರೈತರಿಗೆ ಪಾವತಿಸಲಾಗಿದೆ.
    | ರಾಜಾ ಅಮರೇಶ್ವರ ನಾಯಕ ರಾಯಚೂರು ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts