More

    ಭಾರತ ವಿಶ್ವಗುರುವಾಗಲು ಶ್ರಮಿಸಿ, ಸಂಸದ ರಾಜಾ ಅಮರೇಶ್ವರ ನಾಯಕ ಮನವಿ

    ರಾಯಚೂರು: ಯುವಕರಲ್ಲಿ ಸಾಧಿಸುವ ಛಲ ಹಾಗೂ ಶಕ್ತಿಯಿದ್ದು, ದೇಶವನ್ನು ಬಲಿಷ್ಠಗೊಳಿಸಲು ಯುವಕರು ಮುಂದಾಗಬೇಕು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

    ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ನೆಹರು ಯುವಕೇಂದ್ರದಿಂದ ಮಂಗಳವಾರ ಹಮ್ಮಿಕೊಂಡಿದ್ದ, ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಇಂದಿನ ಯುವ ಪೀಳಿಗೆಗೆ ದೇಶ ಮೊದಲು ಎಂಬ ಭಾವನೆ ಹೊಂದಬೇಕು. ದೇಶದ ಯೋಧರು ಗಡಿ ಪ್ರದೇಶದಲ್ಲಿದ್ದು ಚಳಿಯಲ್ಲಿ ಕಷ್ಟಪಟ್ಟು ದೇಶ ಕಾಯುತ್ತಿದ್ದವರನ್ನು ನಿತ್ಯವೂ ಸ್ಮರಿಸಬೇಕಾಗಿದೆ.

    ಜತೆಗೆ ದೇಶವನ್ನು ವಿಶ್ವಗುರುವನ್ನಾಗಿಸಲು ಯುವ ಜನತೆ ಮುಂದೆ ಬರಬೇಕಿದೆ. ದೇಶವನ್ನು ಅಭಿವೃದ್ಧಿ ಪಡಿಸುವ ಶಕ್ತಿ ಯುವಕರಿಗಿದ್ದು ದೇಶಾಭಿಮಾನ ಹೆಚ್ಚಿಸುವ ಮೂಲಕ ಯುವಕರು ಸಮರ್ಪಣಾ ಮನೋಭಾವನೆ ಹೊಂದಬೇಕು.

    ಜಮ್ಮು ಕಾಶ್ಮೀರದ ಗಲಭೆಗಳಿಂದ ದೇಶ ಈ ಹಿಂದೆ ಅಖಂಡ ದೇಶವಾಗಿರಲಿಲ್ಲ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ 371 ಕಾಯ್ದೆ ಜಾರಿಗೆ ತಂದು ಅಖಂಡ ಭಾರತವನ್ನಾಗಿ ಮಾಡಿದರು ಎಂದು ತಿಳಿಸಿದರು. ನಮ್ಮ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ಗುಣಮಟ್ಟದ ಶಿಕ್ಷಣ ಇರುವುದರಿಂದ ಉತ್ತರ ಭಾರತದ ಯುವಕರು ವಿದ್ಯಾಭ್ಯಾಸಕ್ಕೆ ಕರ್ನಾಟಕಕ್ಕೆ ಬರುತ್ತಾರೆ. ಶಾಂತಿ ಎಲ್ಲ ಕಡೆ ಇರಬೇಕು ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

    ಇತ್ತೀಚೆಗೆ ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನದಲ್ಲಿ ಜನರ ಬದುಕು ಕಷ್ಟವಾಗಿದೆ. ಆದರೆ ನಮ್ಮ ದೇಶದಲ್ಲಿ ಯುವಕರು ಸ್ಪರ್ಧೆಗಳಲ್ಲಿ ಭಾಗವಹಿಸುವ ಇಚ್ಛೆ ಇರಬೇಕು ಆಗ ಮಾತ್ರ ಹೊಸ ವಿಚಾರಗಳು ಹೊರಹೊಮ್ಮುತ್ತವೆ. ನಮ್ಮದು ಹಿಂದುಳಿದ ಜಿಲ್ಲೆಯಾಗಿರುವುದರಿಂದ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಆಯ್ಕೆ ಮಾಡಿಕೊಂಡಿದ್ದು ಇದರಲ್ಲಿ 17 ಅಂಶಗಳ ಅಭಿವೃದ್ಧಿಗೆ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

    ಕೃಷಿ ವಿವಿ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಶಂಕರ ಪಾಟೀಲ್ ಮಾತನಾಡಿ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶವನ್ನು ಅತ್ಯುನ್ನತ ಸ್ಥಾನಕ್ಕೆ ಬೆಳೆಸಿದ್ದಾರೆ. ಯುವಕರು ಸರ್ಕಾರದ ಸೌಲಭ್ಯ ಪಡೆದು ಉತ್ತಮ ಶಿಕ್ಷಣವನ್ನು ಪಡೆಯಬೇಕು. ನಮ್ಮ ಭಾಗದ ಯುವಕರು ಹಿಂದುಳಿದ ಜಿಲ್ಲೆ ಎನ್ನುವ ಹಣೆ ಪಟ್ಟಿಯನ್ನು ತೊಲಗಿಸಿ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದರು.

    ಜಿಲ್ಲಾ ನೆಹರು ಯುವ ಕೇಂದ್ರದ ಭರತ್ ಕುಮಾರ, ವಿವಿಯ ವಿದ್ಯಾರ್ಥಿ ಅಭಿವೃದ್ಧಿ ನಿರ್ದೇಶಕ ಡಾ.ಬಿ.ಎಸ್ ಗೌಡಪ್ಪ, ವಿವಿಯ ನಿರ್ದೇಶಕ ಡಾ.ಸತ್ಯನಾರಾಯಣ ರಾವ್, ವಿವಿಯ ಇಂಜಿನೀಯರ್ ವಿಭಾಗದ ನಿರ್ದೇಶಕ ನೇಮಿ ಚಂದಪ್ಪ, ಎನ್.ಎಸ್.ಎಸ್ ಅಧಿಕಾರಿ ಡಾ.ಶ್ರೀನಿವಾಸ ರಾಯಚೂರಕರ್, ಡಾ.ಗುರುರಾಜ್ ಸುಂಕದ, ಪ್ರಮೋದ ಕಟ್ಟಿ, ಜಾಗೃತಿ ದೇಶಮಾನೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts