

ರಾಯಚೂರು: ಈದ್ ಮಿಲಾದ್ ಹಾಗೂ ಗಣೇಶೋತ್ಸವವನ್ನು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೇ ಶಾಂತಿಯುತವಾಗಿ ಆಚರಿಸಬೇಕೆಂದು ಎಸ್ಪಿ ಎಂ.ಪುಟ್ಟಮಾದಯ್ಯ ತಿಳಿಸಿದರು.
ನಗರದ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಗಣೇಶ ಉತ್ಸವದ ಹಾಗೂ ಈದ್ ಮಿಲಾದ್ ಅಂಗವಾಗಿ ಮೂರ್ತಿ ಪ್ರತಿಷ್ಠಾಪನಾ ಮಂಡಳಿ ಹಾಗೂ ವಿವಿಧ ಧರ್ಮ, ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.
ಜಿಲ್ಲಾಡಳಿತ, ಹಾಗೂ ಪೊಲೀಸ್ ಇಲಾಖೆಯಿಂದ ನೀಡಲಾಗುವ ಎಲ್ಲ ಸೂಚನೆ ಮತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಶಾಂತಿಯುತವಾಗಿ ಈದ್ ಮಿಲಾದ್ ಹಾಗೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಉತ್ಸವಗಳನ್ನು ಆಚರಣೆ ಮಾಡಬೇಕೆಂದು ಸೂಚನೆ ನೀಡಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಹಾಕಲಾಗುವ ಪೆಂಡಾಲ್‌ಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು. ಈದ್ ಮಿಲಾದ್ ಹಬ್ಬದ ಜುರೂಸ್ ಮೆರವಣಿಗೆ ವೇಳೆ ಹಾಗೂ ಗಣೇಶ ಮೂರ್ಗಿ ವಿಸರ್ಜನೆ ವೇಳೆ ಕರ್ಕಶ, ಹೆಚ್ಚಿನ ಶಬ್ಧವನ್ನುಂಟುಮಾಡುವ ಹಾಗೂ ಜನರಿಗೆ ತೊಂದರೆ ಉಂಟಾಗುವ ಸ್ಪೀಕರ್ ಹಾಗೂ ಡಿಜೆ ಗಳನ್ನು ಬಳಸುವಂತಿಲ್ಲ. ಕಡ್ಡಾಯವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲೇಬೇಕು ಎಂದರು.
ಯಾವುದೇ ಧರ್ಮದ ಆಚರಣೆ ಹಾಗೂ ಆಚಾರ ವಿಚಾರಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ, ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಎಸ್ಪಿಗಳಾದ ಶಿವಕುಮಾರ್, ಹರೀಶ್, ಡಿವೈಎಸ್ಪಿ ಸತ್ಯನಾರಾಯಣ ರಾವ್, ಸಿಪಿಐ ನಾಗರಾಜ ಮೇಕ, ಪಿಐ ಉಮೇಶ್ ಕಾಂಬ್ಳೆ, ತಹಸೀಲ್ದಾರ್ (2 ಗ್ರೇಡ್) ಅನ್ವರ್, ಪಿಎಸ್‌ಐಗಳಾದ ಮಂಜುನಾಥ, ಚಂದ್ರಪ್ಪ, ಅಮಿತಾ, ವೆಂಕಟೇಶ್ ಸೇರಿದಂತೆ ಇತರರಿದ್ದರು.