More

    ಇಳಿ ವಯಸ್ಸಲ್ಲಿ ಯುದ್ಧಕ್ಕೆ ತಯಾರು: ಉಕ್ರೇನಿಯನ್​ ಅಜ್ಜಿಯ ದೇಶ ಪ್ರೇಮದ ಮಾತುಗಳನ್ನು ಕೇಳಿದ್ರೆ ಮೈನವಿರೇಳುತ್ತೆ!

    ಕೈವ್​: ಉಕ್ರೇನ್​ ವಿಚಾರದಲ್ಲಿ ರಷ್ಯಾ ಮತ್ತು ಅಮೆರಿಕ ನಡುವಿನ ಶೀತಲ ಸಮರ ಮುಂದುವರಿದಿದೆ. ಉಕ್ರೇನ್​ ಬೆಂಬಲಕ್ಕೆ ಅಮೆರಿಕ ನಿಂತಿದ್ದರೆ, ಉಕ್ರೇನ್​ ಅನ್ನು ಆಕ್ರಮಿಸಿಕೊಳ್ಳಲು ರಷ್ಯಾ ತುದಿಗಾಲಲ್ಲಿ ನಿಂತಿದೆ. ಅದರ ಭಾಗವಾಗಿ ಈಗಾಗಲೇ ಗಡಿಯಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಸೇನೆಯನ್ನು ಸಹ ಜಮಾವಣೆ ಮಾಡಿದೆ. ಹೀಗಾಗಿ ಉಕ್ರೇನ್​ ಮತ್ತು ರಷ್ಯಾ ನಡುವೆ ಯುದ್ಧದ ಭೀತಿ ಶುರುವಾಗಿದೆ. ಇದೇ ಸಂದರ್ಭದಲ್ಲಿ ಉಕ್ರೇನಿಯನ್​ನ 79 ವರ್ಷದ ಅಜ್ಜಿ ತನ್ನ ದೇಶದ ಪರವಾಗಿ ಹೋರಾಡಲು ಇಳಿ ವಯಸ್ಸಲ್ಲೂ ಎಕೆ 47 ಗನ್​ ಹಿಡಿದು ಮುಂದೆ ಬಂದಿರುವುದು ಅವರ ದೇಶ ಪ್ರೇಮವನ್ನು ಜಗತ್ತಿಗೆ ಸಾರಿದಂತಿದೆ. ಅಲ್ಲದೆ, ಉಕ್ರೇನಿಯನ್​ ಪ್ರಜೆಗಳಲ್ಲಿನ ದೇಶ ಪ್ರೇಮದ ಕಿಚ್ಚನ್ನು ಬಡಿದೆಬ್ಬಿಸಿದೆ.

    ಮಾತೃಭೂಮಿಗೆ ಅಪಾಯ ಎದುರಾದಾಗ ಎಲ್ಲರು ಒಂದಾಗಲೇಬೇಕು ಮತ್ತು ದೇಶಕ್ಕಾಗಿ ಹೋರಾಡಬೇಕು. ಸದ್ಯ ಉಕ್ರೇನಿಯನ್​ ಜನರು ಕೂಡ ಇದೇ ಎದೆಗಾರಿಕೆಯನ್ನು ಪ್ರದರ್ಶಿಸುತ್ತಿದ್ದಾರೆ. ರಷ್ಯಾದಿಂದ ಬರುವ ಸಣ್ಣ ಹಾಗೂ ದೊಡ್ಡ ಮೊಸಳೆಗಳ ವಿರುದ್ಧ ಹೋರಾಡಲು ಉಕ್ರೇನಿಯನ್ನರು ಸಿದ್ಧರಾಗಿದ್ದಾರೆ ಎಂದು 79 ವರ್ಷದ ಅಜ್ಜಿ ತನ್ನ ಇಳಿ ವಯಸ್ಸಿನಲ್ಲೂ ಹೋರಾಟದ ಮಾತಗಳನ್ನಾಡಿದ್ದಾರೆ.

    ನಾನು ಯೋಧರಂತೆ ಬಲಶಾಲಿ ಇಲ್ಲದಿರಬಹುದು. ನನ್ನ ಕೈಯಲ್ಲಿ ದೊಡ್ಡ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಲು ಸಾಧ್ಯವಾಗದಿರಬಹುದು. ಆದರೆ, ನಾನು ನನ್ನ ದೇಶಕ್ಕಾಗಿ ಹೋರಾಡುತ್ತೇನೆ. ನನ್ನ ಜೀವವನ್ನು ದೇಶಕ್ಕಾಗಿ ಕೊಡಲು ನಾನು ಹಿಂಜರಿಯುವುದಿಲ್ಲ. ನಾನು ನನ್ನ ದೇಶಕ್ಕಾಗಿ ಹೋರಾಡೇ ತೀರುತ್ತೇನೆ ಎಂದು 79 ವರ್ಷದ ವ್ಯಾಲೆಂಟಿನಾ ಕಾನ್ಸ್ಟಾಂಟಿನೋವ್ ಕೆಚ್ಚೆದೆಯ ಮಾತುಗಳನ್ನಾಡಿದ್ದಾರೆ. ಆಕೆಯ ಮಾತುಗಳನ್ನು ಕೇಳಿ ದೇಶದ ಜನರು ಪ್ರೇರಿಪಿತರಾಗಿದ್ದಾರೆ.

    ವಯಸ್ಸಾದವರು ಮಾತ್ರವಲ್ಲ ಉಕ್ರೇನ್​ನ ಮಕ್ಕಳು ಕೂಡ ತಮ್ಮ ಎದೆಗಾರಿಕೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಇದೇ ಭಾವನೆಯನ್ನು ಹೊಂದಿದ್ದಾರೆ. ರಷ್ಯಾದ ಆಕ್ರಮಣಶೀಲತೆಯಿಂದ ತಮ್ಮ ದೇಶವನ್ನು ಕಾಪಾಡಿಕೊಳ್ಳಲು ಉಕ್ರೇನ್​ನ ನಾಗರಿಕರೆಲ್ಲರೂ ಕೈಜೋಡಿಸಿದ್ದು, ಅವರಿಗೂ ಕೂಡ ಗನ್​ ಹಿಡಿಯುವ ತರಬೇತಿಯನ್ನು ನೀಡಲಾಗುತ್ತಿದೆ. ನಾವೂ ಕೂಡ ಯುದ್ಧದ ಸಂದರ್ಭದಲ್ಲಿ ಇರುತ್ತೇವೆ ಎಂಬ ಬಲವಾದ ಸಂದೇಶವನ್ನು ರವಾನಿಸಿದ್ದಾರೆ.

    ರಷ್ಯಾ ಮತ್ತು ಉಕ್ರೇನ್​ ನಡುವಿನ ಹಲವು ದಶಕಗಳ ಸಂಘರ್ಷ ಮತ್ತೆ ಭುಗಿಲೆದ್ದಿದೆ. ಉಕ್ರೇನ್​ ವಿರುದ್ಧ ದಾಳಿ ಮಾಡಲು ರಷ್ಯಾ ಹೊಂಚು ಹಾಕುತ್ತಿದ್ದು, ಉಕ್ರೇನ್​ ಪರ ಬ್ಯಾಟ್​ ಬೀಸಿರುವ ಅಮೆರಿಕ, ರಷ್ಯಾಗೆ ಎಚ್ಚರಿಕೆಯನ್ನು ನೀಡಿದೆ. ಒಂದು ವೇಳೆ ಯುದ್ಧ ಆರಂಭವಾದರೆ, ಅದು ಕೇವಲ ಉಕ್ರೇನ್​-ರಷ್ಯಾ ಯುದ್ಧವಾಗಿರುವುದಿಲ್ಲ. ಬದಲಾಗಿ ವಿಶ್ವಯುದ್ಧವಾಗಿ ಬದಲಾಗಲಿದೆ. ಇದರಿಂದ ಜಗತ್ತಿಗೆ ಅಪಾಯ ಎಂಬ ಮಾತುಗಳನ್ನು ತಜ್ಞರು ಆಡಿದ್ದಾರೆ.

    ಅಂದಹಾಗೆ 79 ವರ್ಷದ ವ್ಯಾಲೆಂಟಿನಾ ಪೂರ್ವ ಉಕ್ರೇನ್​ ಮೂಲದ ನಿವಾಸಿ. ರಾಷ್ಟ್ರೀಯ ರಕ್ಷಣ ಸಿಬ್ಬಂದಿ ನೀಡುತ್ತಿರುವ ತರಬೇತಿಯನ್ನು ಪಡೆಯುತ್ತಿದ್ದಾರೆ. ಎಕೆ 47 ಗನ್​ ಅನ್ನು ಯಾವ ರೀತಿ ಉಪಯೋಗಿಸಬೇಕೆಂಬುದನ್ನು ಕಲಿಯುತ್ತಿದ್ದಾರೆ. ಈ ವಯಸ್ಸಲ್ಲಿ ಏನು ಮಾಡಲು ಸಾಧ್ಯ ಎಂದು ಮಾತನಾಡಿಕೊಂಡರೂ ಸಹ ಅವರು ಕೊಡುತ್ತಿರುವ ಸಂದೇಶಕ್ಕೆ ಬೆಲೆಯನ್ನು ಕಟ್ಟಲು ಆಗುವುದಿಲ್ಲ. ವ್ಯಾಲಿಂಟಿನಾ ಅವರು ಗನ್​ ಹಿಡಿದು ಗುರಿ ಇಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈದಿದ್ದಾರೆ.

    ಯುದ್ಧ ಎದುರಾದಾಗ ನಾನು ನನ್ನ ದೇಶವನ್ನು ರಕ್ಷಿಸಲು ಹೆಜ್ಜೆ ಇಡುತ್ತೇನೆ. ನನ್ನ ದೇಶವನ್ನು ಆಕ್ರಮಿಸಿಕೊಳ್ಳುವವರ ವಿರುದ್ಧ ಗುಂಡು ಹಾರಿಸಲು ನಾನು ಸಿದ್ಧಳಾಗಿದ್ದೇನೆ. ನಾನು ನನ್ನ ಮನೆಯನ್ನು, ಮಕ್ಕಳನ್ನು, ನನ್ನ ನಗರವನ್ನು ರಕ್ಷಣೆ ಮಾಡಿಕೊಳ್ಳುತ್ತೇನೆ. ಯಾರಿಗೂ ನನ್ನ ದೇಶವನ್ನು ಬಿಟ್ಟುಕೊಡುವುದಿಲ್ಲ. ವಯಸ್ಸಲ್ಲಿ ನಾನು ಅಶಕ್ತಳಾಗಿರಬಹುದು ಆದರೆ, ಯುದ್ಧಕ್ಕೆ ರೆಡಿಯಾಗಿದ್ದೇನೆ ಎಂಬ 79 ವರ್ಷದ ವ್ಯಾಲಂಟಿನಾ ಅವರ ಬುಲೆಟ್​ ರೀತಿಯ ಮಾತುಗಳು ಎಲ್ಲರ ಎದೆಯಲ್ಲಿರುವ ಉತ್ಸಾಹವನ್ನು ಬಡೆದೆಬ್ಬಿಸಿದ್ದು, ಅನೇಕರು ಶಸ್ತ್ರಾಸ್ತ್ರ ತರಬೇತಿ ಪಡೆದುಕೊಳ್ಳಲು ಬರುತ್ತಿದ್ದಾರೆ. (ಏಜೆನ್ಸೀಸ್​)

    ನಟ ಧನುಷ್​ ಜತೆ​ ಡಿವೋರ್ಸ್: ಕೊನೆಗೂ ಮೌನ ಮುರಿದ ಐಶ್ವರ್ಯಾ ರಜಿನಿಕಾಂತ್​ ಹೇಳಿದ್ದು ಹೀಗೆ….

    ಚುನಾವಣಾ ಪ್ರಚಾರದ ನಡುವೆಯೇ ಹೃದಯಾಘಾತದಿಂದ ಡಿಎಂಕೆ ಅಭ್ಯರ್ಥಿ ದುರಂತ ಸಾವು

    ಮದುವೆ ಆಗುವಷ್ಟು ದೊಡ್ಡವಳಲ್ಲ ನಾನಿನ್ನೂ ಚಿಕ್ಕವಳು ಅಂದ್ರು ರಶ್ಮಿಕಾ ಮಂದಣ್ಣ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts