More

    ಕೆಎಚ್‌ಬಿ ಎಡವಟ್ಟನಿಂದ ಸೈಟ್ ಮಾಲೀಕ ಸಂಕಷ್ಟ: ಮೂಲೆ ನಿವೇಶನವೆಂದು ಬೇರೆ ಸೈಟ್ ಹಂಚಿಕೆ

    ಬೆಂಗಳೂರು: ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದರೆ ಸುರಕ್ಷಿತ ಎಂಬುದು ಸಾರ್ವಜನಿಕರಲ್ಲಿರುವ ನಂಬಿಕೆ. ಆದರೆ, ಇಲ್ಲೊಬ್ಬರಿಗೆ ಮೂಲೆ ನಿವೇಶನವೆಂದು ಮಧ್ಯಂತರ ಸೈಟು ನೋಂದಣಿ ಮಾಡಿಕೊಟ್ಟಿದೆ. ಅಲ್ಲದೆ, ತಪ್ಪು ಗೊತ್ತಾದರೂ ಬದಲಿ ನಿವೇಶನ ಕೊಡಲು ಮೀನಾಮೇಷ ಎಣಿಸುತ್ತಿದೆ. ಇದರಿಂದ ಲಕ್ಷಾಂತರ ರೂ. ಕೊಟ್ಟು ಖರೀದಿಸಿದ ಸೈಟ್ ಮಾಲೀಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

    2017ರ ಡಿ. 7ರಂದು ಕೆಎಚ್‌ಬಿ ವಿವಿಧ ಬಡಾವಣೆಗಳಲ್ಲಿ ಮೂಲೆ ನಿವೇಶನಗಳ ಬಹಿರಂಗ ಹರಾಜಿಗೆ ನೋಟಿಫಿಕೇಷನ್ ಹೊರಡಿಸಿತ್ತು. ವಿಜಯನಗರ ಕೆಎಚ್‌ಬಿ ನಿವಾಸಿ ಗಜೇಂದ್ರ ಎಂಬಾತ 2017ರ ಡಿ.14ರಂದು 5,100 ರೂ. ಶುಲ್ಕ ಪಾವತಿಸಿ ಬಿಡ್‌ನಲ್ಲಿ ಭಾಗವಹಿಸಿದ್ದರು.

    ಸೈಟ್ ಅಲಾಟ್ ಆದ ಮೇಲೆ 30.60 ಲಕ್ಷ ರೂ. ಪಾವತಿ ಮಾಡಿ 2018ರ ಜ.18ರಂದು ಹಂಚಿಕೆಪತ್ರ ಪಡೆದುಕೊಂಡರು. ಅದೇ ವರ್ಷ ಜುಲೈನಲ್ಲಿ ಉಳಿಕೆ 22.95 ಲಕ್ಷ ರೂ. ಪಾವತಿಸಿದ್ದಾರೆ. ಆನಂತರ ಕೆಎಚ್‌ಬಿ ಅಧಿಕಾರಿಗಳು ಜಾರಕಬಂಡೆ ಕಾವಲ್ ಕೆಎಚ್‌ಬಿ ಲೇಔಟ್‌ನಲ್ಲಿ 159/ಎ ನಿವೇಶನವನ್ನು ಕ್ರಯಪತ್ರ ನೋಂದಣಿ ಮಾಡಿಕೊಟ್ಟಿದ್ದಾರೆ.

    ಇದಾದ ಮೇಲೆ ಸ್ಥಳ ಮಹಜರ್ ಮಾಡಿದ ಕೆಎಚ್‌ಬಿ ಅಧಿಕಾರಿಗಳು ಪೂರ್ವಕ್ಕೆ ರಸ್ತೆ, ಪಶ್ಚಿಮಕ್ಕೆ ಖಾಸಗಿ ಜಾಗ, ಉತ್ತರಕ್ಕೆ ಸೈಟ್ ನಂಬರ್ 159 ಮತ್ತು ದಕ್ಷಿಣಕ್ಕೆ ರಸ್ತೆ ಎಂದು ಸ್ವಾಧೀನ ಜ್ಞಾಪನಪತ್ರ ಸಹ ವಿತರಣೆ ಮಾಡಿದ್ದಾರೆ. ಸ್ವಲ್ಪ ದಿನಗಳ ಬಳಿಕ ಸೈಟ್ ಮಾಲೀಕ ಗಜೇಂದ್ರ, ಕಟ್ಟಡ ನಿರ್ಮಾಣಕ್ಕೆ ಸ್ಥಳಕ್ಕೆ ಹೋದಾಗ ಸೈಟ್ ನಕ್ಷೆಯಲ್ಲಿದ್ದಂತೆ ಪೂರ್ವ ಮತ್ತು ದಕ್ಷಿಣಕ್ಕೆ ರಸ್ತೆಯೇ ಇರಲಿಲ್ಲ. ಕೇವಲ ಒಂದು ಕಡೆ ರಸ್ತೆ ಇದ್ದು, ಮಧ್ಯಂತರ ನಿವೇಶನವಾಗಿತ್ತು. ಗಾಬರಿಗೊಂಡ ಸೈಟ್ ಮಾಲೀಕರು, ಈ ಬಗ್ಗೆ ಕೆಎಚ್‌ಬಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದಾಗ ಬಿಡ್ ಕರೆಯುವ ಮೊದಲೇ ಸೈಟ್ ನೋಡಿಕೊಳ್ಳಬೇಕಾಗಿತ್ತು. ಕ್ರಯಪತ್ರ ಆದ ಮೇಲೆ ನೋಂದಣಿ ಮಾಡಿಕೊಂಡು ಈಗ ಪ್ರಶ್ನೆ ಮಾಡುತ್ತಿರುವುದು ಸರಿಯಲ್ಲ ಎಂದು ಸಬೂಬು ಹೇಳಿ ವಾಪಸ್ ಕಳುಹಿಸಿದ್ದಾರೆ. ಬದಲಿ ನಿವೇಶನ ಕೋರಿ ಹಲವು ಬಾರಿ ಮನವಿ ಪತ್ರ ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ವಿಜಯವಾಣಿ ಜತೆ ಗಜೇಂದ್ರ ಅಳಲು ತೋಡಿಕೊಂಡಿದ್ದಾರೆ.

    ಕಟ್ಟಡ ನಿರ್ಮಾಣವೂ ಸಾಧ್ಯವಿಲ್ಲ
    ಮೂಲೆ ನಿವೇಶನವೆಂದು ಕೆಎಚ್‌ಬಿ ಹಂಚಿಕೆ ಮಾಡಿರುವ ನಿವೇಶನ ಚೌಕಕಾರದಲ್ಲಿ ಇಲ್ಲ. ಬದಲಿಗೆ ವಜ್ರಾಕಾರದಲ್ಲಿ ಇರುವ ಕಾರಣ ಕಟ್ಟಡ ನಿರ್ಮಾಣಕ್ಕೂ ತೊಂದರೆ ಉಂಟಾಗಿದೆ. ಲಕ್ಷಾಂತರ ರೂ. ಪಾವತಿ ಮಾಡಿ ಸೈಟ್ ಖರೀದಿ ಮಾಡಿದರೂ ಪ್ರಯೋಜನಕ್ಕೆ ಬಂದಿಲ್ಲ ಎಂದು ಸೈಟ್ ಮಾಲೀಕರು ತಲೆ ಮೇಲೆ ಕೈ ಹೊತ್ತಿ ಕುಳಿತಿದ್ದಾರೆ.

    ಸಚಿವರ ಶಿಫಾರಸಿಗೂ ಕಿಮ್ಮತ್ತಿಲ್ಲ
    ಕೆಎಚ್‌ಬಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಗಜೇಂದ್ರ, ಈ ಬಗ್ಗೆ ವಸತಿ ಸಚಿವ ವಿ. ಸೋಮಣ್ಣ ಮತ್ತು ಅಬಕಾರಿ ಸಚಿವ ಕೆ. ಗೋಪಾಲಯ್ಯಗೆ ದೂರು ಕೊಟ್ಟು ನ್ಯಾಯ ಕೋರಿದ್ದಾರೆ. ಸಚಿವರು ಸಹ ಕೆಎಚ್‌ಬಿ ಅಧಿಕಾರಿಗಳಿಗೆ ಗೊಂದಲ ಬಗೆಹರಿಸುವಂತೆ ಸೂಚನೆ ಕೊಟ್ಟಿದ್ದಾರೆ. ಆದರೆ, ಅಧಿಕಾರಿಗಳು ನೊಂದವರಿಗೆ ನ್ಯಾಯ ಒದಗಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ದೂರಿನ ಬಗ್ಗೆ ವಿಚಾರಿಸಲು ಸೈಟ್ ಮಾಲೀಕರು ಕೆಎಚ್‌ಬಿ ಕಚೇರಿಗೆ ಹೋದರೆ, ‘ಪದೇಪದೆ ಬರಬೇಡಿ. ಖರೀದಿಗೂ ಮೊದಲೇ ಜಾಗ ನೋಡಬೇಕಿತ್ತು. ಅಲಾಟ್ ಆಗಿ ನೋಂದಣಿ ಆದ ಮೇಲೆ ಏನು ಮಾಡಲು ಸಾಧ್ಯವಿಲ್ಲ’ ಎನ್ನುತ್ತಾರೆ. ಇದರಲ್ಲಿ ಮೂಲೆ ನಿವೇಶನ ಎಂದು ಗುರುತು ಮಾಡಿದ ಇಂಜಿನಿಯರ್ ತಪ್ಪಿಲ್ಲವೇ? ಮೂಲೆ ನಿವೇಶನವೆಂದು ಹರಾಜು ಮಾಡಲು ನೋಟಿಫಿಕೇಷನ್ ಮಾಡಿರುವುದರಲ್ಲಿ ಅಧಿಕಾರಿಗಳು ತಪ್ಪು ಮಾಡಿಲ್ಲವೇ? ಈ ಬಗ್ಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರೆ ಯಾವುದೇ ಉತ್ತರ ನೀಡುವುದಿಲ್ಲ ಎಂದು ಸೈಟ್ ವಾರಸುದಾರರು ತಿಳಿಸಿದ್ದಾರೆ.

    ಚಿತ್ರೀಕರಣ ಪ್ರಗತಿಯಲ್ಲಿದೆ; ಮೂರನೆ ಅಲೆಯ ನಡುವೆಯೂ ಚಿತ್ರರಂಗ ಸಕ್ರಿಯ

    ಇದೆಂಥಾ ಸಾವು… ಕರಾಟೆ ಆಡುವಾಗಲೇ ಪ್ರಾಣಬಿಟ್ಟ 22 ವರ್ಷದ ಯುವಕ; ಸಾವಿನ ಸುತ್ತ ಅನುಮಾನದ ಹುತ್ತ!

    ಜೀವನದಲ್ಲಿ ರಾಕ್ಷಸರು ಬಂದ್ ಹೋಗ್ತಿರ್ತಾರೆ; ಸೂರ್ಯ ಸೂರ್ಯನೇ, ಚಂದ್ರ ಚಂದ್ರನೇ; ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ರಾ ಹೆಬ್ಬಾಳ್ಕರ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts