ಬೆಳಗಾವಿ: ವಿಕೇಂಡ್ ಕರ್ಪ್ಯೂ ಜಾರಿ ಮಧ್ಯೆಯೂ ಕಳ್ಳರ ಕೈಚಳಕ ನಡೆದಿದ್ದು, ದೇವಸ್ಥಾನದಲ್ಲಿದ್ದ ಚಿನ್ನ, ಬೆಳ್ಳಿ, ಹಣದ ಹುಂಡಿಯನ್ನೇ ಕದ್ದು ಖದೀಮರು ಪರಾರಿಯಾಗಿರುವ ಘಟನೆ ಕಿತ್ತೂರು ತಾಲೂಕಿನ ಕಲಾರಕೊಪ್ಪ ಗ್ರಾಮದಲ್ಲಿ ನಡೆದಿದೆ.
ಖದೀಮರು ಮನೆಗಳನ್ನು ಬಿಟ್ಟು ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಕಲಾರಕೊಪ್ಪ ಗ್ರಾಮದ ಬಸವೇಶ್ವರ, ಲಕ್ಷ್ಮಿ-ಸರಸ್ವತಿ ದೇವಸ್ಥಾನದಲ್ಲಿ ದರೋಡೆ ಮಾಡಿದ್ದಾರೆ. ಬಸವೇಶ್ವರ ದೇಗುಲದ 10 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ಹಾಗೂ ಹುಂಡಿ ಸಮೇತ ಪರಾರಿಯಾಗಿದ್ದಾರೆ.
ಹುಂಡಿಯಲ್ಲಿನ ಕಾಣಿಕೆ ಹಣ ಒಯ್ಯದೇ ಹುಂಡಿಯನ್ನೇ ಹೊತ್ತೊಯ್ದಿದ್ದಾರೆ. ಹುಂಡಿಯಲ್ಲಿ ಅಂದಾಜು 2 ಲಕ್ಷ ರೂ. ಕಾಣಿಕೆ ಹಣ ಇದ್ದ ಬಗ್ಗೆ ಗ್ರಾಮಸ್ಥರ ಅಂದಾಜು ಹಾಕಿದ್ದಾರೆ. ಬಳಿಕ ಅದೇ ಗ್ರಾಮದ ಲಕ್ಷ್ಮಿ-ಸರಸ್ವತಿ ದೇವಸ್ಥಾನ ಕೀಲಿ ಮುರಿದು ಕಳ್ಳತನ ಮಾಡಿದ್ದಾರೆ.
ಲಕ್ಷ್ಮಿ-ಸರಸ್ವತಿ ದೇವಸ್ಥಾನದಲ್ಲಿದ್ದ ಚಿನ್ನ, ಬೆಳ್ಳಿಯ ವಸ್ತುಗಳು ಕಳ್ಳತನವಾಗಿದೆ. ದೇವಸ್ಥಾನಗಳ ಕಳ್ಳತನದಿಂದ ಕಲಾರಕೊಪ್ಪದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಖದೀಮರ ಪತ್ತೆಗಾಗಿ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್)