More

    ಸಾಮಾಜಿಕ ಕಳಕಳಿಯ ನಟ ಪುನೀತ್ : ಅಪ್ಪು ನಿಧನಕ್ಕೆ ಕಂಬನಿ ಮಿಡಿದ ಬೊಂಬೆ ನಾಡು

    ಚನ್ನಪಟ್ಟಣ : ನಟ ಪುನೀತ್ ರಾಜ್‌ಕುಮಾರ್ ನಿಧನ ನಾಡಿಗೆ ತುಂಬಲಾರದ ನಷ್ಟವಾಗಿದ್ದು, ಪ್ರತಿಭಾನ್ವಿತ ನಟ ಹಾಗೂ ಸಾಮಾಜಿಕ ಕಳಕಳಿಯ ವ್ಯಕ್ತಿಯನ್ನು ಕಳೆದುಕೊಂಡಿರುವುದು ದೊಡ್ಡ ದುರಂತ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ (ಕಕಜವೇ) ಅಧ್ಯಕ್ಷ ರಮೇಶ್‌ಗೌಡ ತಿಳಿಸಿದರು.
    ನಗರದ ಕಾವೇರಿ ಸರ್ಕಲ್ ಬಳಿ ಶುಕ್ರವಾರ ಪುನೀತ್ ರಾಜ್‌ಕುಮಾರ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ದೊಡ್ಡಸಾಧನೆ ಮಾಡಿದ ಅದ್ಭುತ ನಟ. ತಂದೆಯ ಮಾರ್ಗದರ್ಶನ, ನಟನೆಯಲ್ಲಿ ತೊಡಗಿಕೊಂಡ ಅವರು ಚಿಕ್ಕ ವಯಸ್ಸಿನಲ್ಲಿಯೇ ತನ್ನ ಪ್ರತಿಭೆಯನ್ನು ಹೊರಹಾಕಿದವರು.

    ನಟನೆಯ ಜತೆಗೆ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ಅನಾಥಾಶ್ರಮ, ವೃದ್ಧಾಶ್ರಮ, ಶಾಲೆಗಳನ್ನು ನಡೆಸುತ್ತಿದ್ದರು. ಯಾವುದೇ ಪ್ರಚಾರ ಬಯಸದೆ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಇಡೀ ಕನ್ನಡ ಚಿತ್ರರಂಗಕ್ಕೆ ಮಾದರಿಯಾಗಿದ್ದರು ಎಂದು ಬಣ್ಣಿಸಿದರು.ನೇತ್ರ ದಾನದ ಬಗ್ಗೆ ಅರಿವು ಮೂಡಿಸುವ ಜತೆಗೆ ತಾವೂ ನೇತ್ರದಾನ ಮಾಡಿ ಇತರರಿಗೆ ಪ್ರೇರಣೆಯಾಗಿದ್ದು, ಕನ್ನಡ ನಾಡು ನುಡಿಯ ವಿಚಾರದಲ್ಲಿ ಮುಂದೆ ನಿಲ್ಲುತ್ತಿದ್ದರು. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಅನಾಥವಾಗಿದೆ ಎಂದು ಕಂಬನಿ ಮಿಡಿದರು.

    ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ ಮಾತನಾಡಿ, ಯಾವುದೇ ಪ್ರಚಾರ ಬಯಸದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಪುನೀತ್, 26 ಅನಾಥಾಶ್ರಮ, 45 ಉಚಿತ ಶಾಲೆಗಳು, 16 ವೃದ್ಧಾಶ್ರಮಗಳು, 19 ಗೋಶಾಲೆ, 1800 ಮಕ್ಕಳ ಸಂಪೂರ್ಣ ಶಿಕ್ಷಣ ಹಾಗೂ ಮೈಸೂರಿನಲ್ಲಿ ಶಕ್ತಿಧಾಮ ಹೆಸರಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು. ಇಂತಹ ನಟನನ್ನು ನಾಡು ಕಳೆದುಕೊಂಡಿರುವುದು ದುಃಖ ತಂದಿದೆ ಎಂದರು.
    ಕಾಂಗ್ರೆಸ್ ಮುಖಂಡರಾದ ಪಿ.ಡಿ. ರಾಜು, ಪಿ. ರಮೇಶ್, ಅಕ್ಕೂರು ಶೇಖರ್, ಡಾ.ರಾಜ್ ಕುಟುಂಬದ ಅಭಿಮಾನಿ ರಾಂಪುರ ಸ್ವಾಮಿ, ಯೋಗಾನಂದ್ ಯಲಚಿಪಾಳ್ಯ, ಆಣಿಗೆರೆ ಬಿಳಿಯಪ್ಪ, ಮಹದೇವ್, ಸೈಯದ್ ನವಾಜ್ ಹಸ್ಮಿ, ಚಿಕ್ಕೇನಹಳ್ಳಿ ರಾಮಚಂದ್ರು, ಸಿದ್ದಪ್ಪ, ಪ್ರಕಾಶ್, ಮಂಗಳವಾರಪೇಟೆ ಸತೀಶ್ ಸೇರಿ ಮತ್ತಿತರರು ಇದ್ದರು.

    ಅಭಿಮಾನಿಗಳ ಕಣ್ಣೀರು :  ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಬೊಂಬೆನಾಡು ಮಮ್ಮುಲ ಮರಗಿತು. ನಿಧನದ ಸುದ್ದಿ ತಿಳಿಯುತ್ತಲೇ ಹಲವರು ಕಂಬನಿ ಹರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮುದ್ರಣದ ಅಂಗಡಿಗಳಲ್ಲಿ ಶ್ರದ್ಧಾಂಜಲಿ ಪ್ಲೆಕ್ಸ್‌ಗಳನ್ನು ಹಾಕಿಸಲು ಮುಗಿಬಿದ್ದಿದ್ದು ಕಂಡುಬಂತು. ಗ್ರಾಮೀಣ ಹಾಗೂ ನಗರದ ಹಲವೆಡೆ ಪ್ಲೆಕ್ಸ್‌ಗಳನ್ನು ಹಾಕಿ ನೆಚ್ಚಿನ ನಾಯಕ ನಟನ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದರು.

    ಸರಳ ಸಜ್ಜನಿಕೆಯ ಪವರ್‌ಸ್ಟಾರ್ :  ಕನಕಪುರ ತಾಲೂಕಿನ ಅಡ್ವೆಂಚರ್ ಅಕಾಡೆಮಿ ಸಂಸ್ಥೆ ವತಿಯಿಂದ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಸ್ಥೆಯ ತರಬೇತುದಾರ ಮನೋಜ್ ಮಾತನಾಡಿ, ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರ ಪ್ರೀತಿಯ ಪುತ್ರನಾಗಿ ಸರಳ, ಸಜ್ಜನಿಕೆಯಿಂದ ಪವರ್‌ಸ್ವಾರ್ ಎಂಬ ಹೆಸರಿಗೆ ತಕ್ಕಂತೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎನ್ನುವುದು ಅವರ ಸಾರ್ಥಕ ಜೀವನದ ಬಗ್ಗೆ ತಿಳಿಯುತ್ತದೆ ಎಂದರು. ತರಬೇತುದಾರ ಅಕ್ಷತಾ, ಪ್ರಕಾಶ್ ವಿದ್ಯಾರ್ಥಿಗಳು ಮತ್ತಿತರರು ಇದ್ದರು.

    ಬಿಡದಿ ತಟ್ಟೆ ಇಡ್ಲಿ ಪ್ರಿಯ : ನಟ ಪುನೀತ್ ರಾಜಕುವಾರ್ ಅವರಿಗೆ ಬಿಡದಿಯೊಂದಿಗಿದ್ದ ನಂಟು ಅಪಾರವಾಗಿದ್ದು, ಅವರ ಅಗಲಿಕೆ ಅಭಿವಾನಿಗಳಲ್ಲಿ ನೋವು ತರಿಸಿದೆ. ನೆಚ್ಚಿನ ನಟನ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಭಿವಾನಿಗಳಲ್ಲಿ ಆತಂಕ ಕಾಡಿತ್ತು. ಬಿಡದಿ ಕೆಮಿಸ್ಟ್ ಆ್ಯಂಡ್ ಡ್ರಗ್ಗಿಸ್ಟ್ ೌಂಡೇಷನ್ ಪದಾಧಿಕಾರಿಗಳು ಪುನೀತ್ ಜತೆಗಿನ ನೆನಪುಗಳನ್ನು ಮೆಲುಕು ಹಾಕಿ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

    ೌಂಡೇಷನ್ ಜತೆ ಅವರಿಗಿದ್ದ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ಅವರ ಕುಟುಂಬದ ನೆರವಿನಲ್ಲಿ ಇದುವರೆಗೆ 700ಕ್ಕೂ ಹೆಚ್ಚು ನೇತ್ರಗಳನ್ನು ಸಂಗ್ರಹಿಸಲಾಗಿದೆ. ಪಾರ್ವತಮ್ಮ ನಿಧನದ ನಂತರ ಪುನೀತ್ ರಾಜ್‌ಕುಮಾರ್ ನಮಗೆ ಮಾರ್ಗದರ್ಶಕರಾಗಿದ್ದರು. 500 ಕಣ್ಣುಗಳ ಸಂಗ್ರಹವಾದ ಸಂದರ್ಭದಲ್ಲಿ ಶಂಕರ್ ಕಣ್ಣಾಸ್ಪತ್ರೆಗೆ ಒಂದು ಸ್ವರಾಜ್ ಮಜ್ದಾ ಉಚಿತವಾಗಿ ನೀಡಿದ್ದರು ಎಂದು ೌಂಡೇಷನ್ ಕಾರ್ಯದರ್ಶಿ ಎಚ್.ಮಂಜುನಾಥ್ ತಿಳಿಸಿದರು.

    ತಟ್ಟೆ ಇಡ್ಲಿ: ಪುನೀತ್ ರಾಜ್‌ಕುಮಾರ್ ಅವರು ಬಿಡದಿಯ ಲೋಕೇಶ್ ಅವರ ಶಿವಸಾಗರ ತಟ್ಟೆ ಇಡ್ಲಿ ಹೋಟೆಲ್‌ಗೆ ಬಂದು ತಿಂಡಿ ಸವಿಯುತ್ತಿದ್ದರು. ಜಿಲ್ಲೆಯ ಶ್ರೀರಾಮದೇವರ ಬೆಟ್ಟದ ಪಟ್ಟಾಭಿರಾಮ ಮತ್ತು ಕೆಂಗಲ್ ಆಂಜನೇಯ ದೇವಾಲಯಗಳಿಗೆ ವರ್ಷಕ್ಕೊಮ್ಮೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಕೆಂಗಲ್ ಆಂಜನೇಯ ದೇವಾಲಯದ ಬಳಿ ಅವರು ಅಭಿನಯಿಸಿದ ‘ರಾಜ್’ ಚಿತ್ರೀಕರಣ ಮತ್ತು ಬಿಡದಿ ಜೋಗರದೊಡ್ಡಿ ಬಳಿಯ ನಿಂಗೇಗೌಡನದೊಡ್ಡಿ ಕೆರೆ ಏರಿಯ ಮೇಲೆ ‘ಅಭಿ’ ಚಿತ್ರಗಳ ಚಿತ್ರೀಕರಣ ನಡೆದಿವೆ. ಇನ್ನು ನಟಸಾರ್ವಭೌಮ ಮತ್ತು ಯುವರತ್ನ ಚಿತ್ರಗಳು ತೆರೆ ಕಂಡಾಗ ರಾಮನಗರಕ್ಕೆ ಆಗಮಿಸಿ ಅಭಿವಾನಿಗಳ ಪ್ರೀತಿಯನ್ನು ಸ್ವೀಕರಿಸಿದ್ದರು.

    ಫಾರ್ಮ್ ಹೌಸ್ ಇಲ್ಲಿದೆ: ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿಯೇ ಹೆಜ್ಜಾಲ ಬಳಿ 1973ರಲ್ಲಿ ಡಾ.ರಾಜ್‌ಕುವಾರ್ ಅವರು ಖರೀದಿಸಿದ್ದ ಫಾರ್ಮ್‌ಹೌಸ್ ಮತ್ತು ಜಮೀನು ಇದೆ. ಇದಕ್ಕೆ ಪುನೀತ್ ಫಾರ್ಮ್ ಎಂದೇ ಹೆಸರಿಡಲಾಗಿದೆ. ಪುನೀತ್ ಅವರಿಗೆ ಪ್ರಿಯವಾಗಿದ್ದ ಈ  ಫಾರ್ಮ್‌ಹೌಸ್‌ಗೆ ಆಗಾಗ ಕುಟುಂಬ ಸಮೇತ ಬಂದು ಹೋಗುತ್ತಿದ್ದರು. ಇದೀಗ ಪುನೀತ್ ಹೆಸರಿನಲ್ಲಿ 2 ಎಕರೆ ಜಮೀನಿದ್ದು, ಅವರ ಪತ್ನಿ ಮತ್ತು ಕುಟುಂಬದವರು ಇಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದ್ದು, ಅಂತ್ಯಕ್ರಿಯೆ ನಡೆಯುವ ಸ್ಥಳದ ಬಗ್ಗೆ ಖಚಿತವಾಗಿ ಏನನ್ನೂ ಹೇಳಲಾಗುತ್ತಿಲ್ಲ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts