More

    ಮಾ.3ರಂದು ಪಲ್ಸ್ ಪೋಲಿಯೋ ಅಭಿಯಾನ: ಸ್ನೇಹಲ್ ಲೋಖಂಡೆ

    ಶಿವಮೊಗ್ಗ: ಜಿಲ್ಲಾದ್ಯಂತ ಮಾ.3ರಂದು ರಾಷ್ಟ್ರೀಯ ಪಲ್ಸ್ ಪೋಲೀಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಸೂಚಿಸಿದರು.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಮಟ್ಟದ ಲಸಿಕಾ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿ,1,20,609 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂಡಿದ್ದು, ಯಾವುದೇ ಮಕ್ಕಳು ಲಸಿಕೆಯಿಂದ ಕೈ ಬಿಟ್ಟು ಹೋಗದಂತೆ ಮೈಕ್ರೋ ಪ್ಲಾೃನ್ ಸಿದ್ಧಪಡಿಸಿ ಕಾರ್ಯ ಪ್ರವೃತ್ತರಾಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಮುಖ್ಯವಾಗಿ ಅತಿ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲ್ಪಡುವ ಕೊಳಚೆ ಪ್ರದೇಶ, ಅಲೆಮಾರಿ ಜನಾಂಗ, ಇಟ್ಟಿಗೆ ಬಟ್ಟಿಗಳು, ಕಟ್ಟಡ ನಿರ್ಮಾಣ ಕಾರ್ಮಿಕರ ವಸತಿ ಪ್ರದೇಶಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಲಸಿಕೆ ನೀಡಬೇಕು. ಸೂಕ್ಷ್ಮ ಪ್ರದೇಶಗಳು, ಪೆರಿ ಅರ್ಬನ್ ಏರಿಯಾಗೆ ಹೆಚ್ಚಿನ ಕಾಳಜಿ ವಹಿಸಬೇಕು. ಶಿಕ್ಷಣ ಇಲಾಖೆ ಲಸಿಕಾ ದಿನದಂದು ಶಾಲೆಗಳನ್ನು ತೆರೆದಿರಬೇಕು. ಮೆಸ್ಕಾಂನವರು ಫೆ.25ರಿಂದ ಮಾ.6ರವರೆಗೆ ಅನಿಯಮಿತ ವಿದ್ಯುತ್ ಸರಬರಾಜು ನೀಡಬೇಕು. ಶಾಲಾ ಪ್ರಾರ್ಥನಾ ವೇಳೆ ಪಲ್ಸ್ ಪೋಲಿಯೋ ಲಸಿಕೆ ಕುರಿತು ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಅರಿವು ಮೂಡಿಬೇಕು ಎಂದರು.
    ಆರ್‌ಸಿಎಚ್ ಅಧಿಕಾರಿ ಡಾ. ನಾಗರಾಜ ನಾಯ್ಕ್ ಮಾತನಾಡಿ, ಅತಿಸೂಕ್ಷ್ಮ ಪ್ರದೇಶಗಳಿಂದ ಹಿಡಿದು ಬಸ್, ರೈಲ್ವೆ ನಿಲ್ದಾಣ ಸೇರಿ ಜಿಲ್ಲೆಯಲ್ಲಿ 1,051 ಬೂತ್‌ಗಳನ್ನು ತೆರೆದು ಲಸಿಕೆ ಹಾಕಲು ಯೋಜನೆ ರೂಪಿಸಲಾಗಿದೆ ಎಂದರು.
    ಡಬ್ಲ್ಯುಎಚ್‌ಒ ಎಸ್‌ಎಂಒ ಡಾ. ಹರ್ಷಿತ್ ಮಾತನಾಡಿ, ಶಿವಮೊಗ್ಗದಲ್ಲಿ ಪೋಲಿಯೋ ಪ್ರಕರಣಗಳು ವರದಿಯಾಗಿಲ್ಲ. ಜಿಲ್ಲೆಯಲ್ಲಿ 103 ಸೂಕ್ಷ್ಮ ಪ್ರದೇಶ ಸೇರಿ 1,051 ಬೂತ್‌ಗಳಲ್ಲಿ ಲಸಿಕೆ ಹಾಕಲಾಗುವುದು. 30 ಮೊಬೈಲ್ ಟೀಂ ಸೇರಿ 2,391 ತಂಡಗಳಲ್ಲಿ ಒಟ್ಟು 3,919 ಸಿಬ್ಬಂದಿ ಹಾಗೂ 205 ಮೇಲ್ವಿಚಾರಕರು ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

    27ಕ್ಕೆ ಜಂತು ಹುಳು ನಿವಾರಣಾ ದಿನ
    ಫೆ.27ರಂದು ಜಿಲ್ಲೆಯಾದ್ಯಂತ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 1ರಿಂದ 19 ವರ್ಷದ ಎಲ್ಲ ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರೆ ಆಲ್ಬೆಂಡಜಾಲ್ ಅನ್ನು ಉಚಿತವಾಗಿ ನೀಡಬೇಕು ಎಂದು ಜಿಪಂ ಸಿಇಒ ತಿಳಿಸಿದರು. 2023-24ನೇ ಸಾಲಿನಲ್ಲಿ ಜಿಲ್ಲೆಯ 4,52,072 ಮಕ್ಕಳಿಗೆ ಆಲ್ಬೆಂಡಜಾಲ್ ನೀಡುವ ಗುರಿ ಹೊಂದಿದೆ ಎಂದರು. ಆರ್‌ಸಿಎಚ್ ಅಧಿಕಾರಿ ಡಾ. ನಾಗರಾಜ್ ನಾಯ್ಕ್ ಮಾತನಾಡಿ, ಅಂಗನವಾಡಿ, ಶಾಲೆಗಳು, ಪದವಿಪೂರ್ವ ಕಾಲೇಜು, ಐಟಿಐ, ಟೆಕ್ನಿಕಲ್ ಕೋರ್ಸ್ ಕಾಲೇಜುಗಳು, ಪ್ರಥಮ ಬಿಎ, ಮೆಡಿಕಲ್, ಆಯುರ್ವೇದಿಕ್ ಕಾಲೇಜುಗಳಲ್ಲಿ ಮಾತ್ರೆಯನ್ನು ವಿತರಿಸಲಾಗುತ್ತದೆ. ಅಲ್ಲದೆ ಶಾಲೆ ಬಿಟ್ಟ ಮಕ್ಕಳಿಗೆ ಸಂಬಂಧಪಟ್ಟ ಅಂಗನವಾಡಿಗಳಲ್ಲಿ ನೀಡಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts